ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ನಿಗಮ, ಮಂಡಳಿಗಳ ಖಾಲಿ ಹುದ್ದೆಗಳ ಭರ್ತಿಗೆ ಶನಿವಾರ ಸಿಸಿಕ್ಯಾಮೆರಾ ಮತ್ತು ವೆಬ್‌ಕಾಸ್ಟಿಂಗ್ ಕಣ್ಗಾವಲಿನಲ್ಲಿ ನೇಮಕಾತಿ ಪರೀಕ್ಷೆ ನಡೆಸಿದ್ದು, ಶೇ.34.5 ರಷ್ಟು ಮಂದಿ ಮಾತ್ರ ಪರೀಕ್ಷೆಗೆ ಹಾಜರಾಗಿದ್ದಾರೆ.ಬಿಎಂಟಿಸಿ, ಕೆಕೆಆರ್‌ಟಿಸಿ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಅರ್ಜಿ ಹಾಕಿದ್ದ ಒಟ್ಟು 8,526 ಮಂದಿಯಲ್ಲಿ ಕೇವಲ 2,905 ಮಂದಿ ಮಾತ್ರ ಪರೀಕ್ಷೆಗೆ ಹಾಜರಾಗಿದ್ದರು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಮಾಹಿತಿ ನೀಡಿದ್ದಾರೆ.
ಪರೀಕ್ಷಾ ಅಕ್ರಮಗಳ ತಡೆಗೆ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಅನುಸರಿಸಿದ್ದೇ ಶೇ.50ರಷ್ಟೂ ಅಭ್ಯರ್ಥಿಗಳು ಹಾಜರಾಗದಿರಲು ಕಾರಣವಾಯಿತಾ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲೂ ವೆಬ್‌ಕಾಸ್ಟಿಂಗ್ ಅಳವಡಿಸಿದ್ದರಿಂದ ಫಲಿತಾಂಶ ಶೇ.10ರಷ್ಟು ಕುಸಿತವಾಗಿತ್ತು. ಅಕ್ರಮಗಳಿಗೆ ಕಡಿವಾಣ ಬಿದ್ದಿದ್ದರಿಂದ ಫಲಿತಾಂಶ ಕುಸಿದಿದೆ ಎಂದು ಅಧಿಕಾರಿಗಳು ಹೇಳಿದ್ದರು.ಬೆಂಗಳೂರು, ಕಲಬುರಗಿ, ಧಾರವಾಡ ಮತ್ತು ಬಳ್ಳಾರಿಯ ಒಟ್ಟು 22 ಕೇಂದ್ರಗಳ 377 ಕೊಠಡಿಗಳಲ್ಲಿ ನಡೆದ ಪರೀಕ್ಷೆಯಲ್ಲಿ ಯಾವುದೇ ಅಕ್ರಮಗಳ ಬಗ್ಗೆ ಕಣ್ಣಿಡಲು ಸಿಸಿಕ್ಯಾಮೆರಾ ಮತ್ತು ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿತ್ತು. ಶನಿವಾರ ಮಲ್ಲೇಶ್ವರದಲ್ಲಿರುವ ಕೆಇಎ ಕಮಾಂಡ್ ಸೆಂಟರ್‌ಗೆ ಭೇಟಿ ನೀಡಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ಕೈಗೊಂಡ ಕ್ರಮವನ್ನು ಪರಿಶೀಲಿಸಿದರು. ಈ ವೇಳೆ, ಧಾರವಾಡ ಕೇಂದ್ರದ ಪರೀಕ್ಷಾ ಮೇಲ್ವಿಚಾರಕರೊಬ್ಬರು ಅಭ್ಯರ್ಥಿಯ ಪಕ್ಕದಲ್ಲಿ ಕೂತು ಅವರ ಸಹಿ ಹಾಕಿಸಿಕೊಂಡಿದ್ದನ್ನು ನೋಡಿ ಸಚಿವರು ಗರಂ ಆದರು. ಹಾಟ್‌ಲೈನ್‌ನಲ್ಲಿ ಆ ಪರೀಕ್ಷಾ ಕೇಂದ್ರಕ್ಕೆ ಕರೆ ಮಾಡಿ ಪಕ್ಕದಲ್ಲಿ ಕುಳಿತು ಸಹಿ ಪಡೆಯುವ ಅಗತ್ಯವೇನಿತ್ತು ಎಂದು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕೆ-ಸೆಟ್ ಸೇರಿದಂತೆ ಹಲವು ನೇಮಕಾತಿ ಪರೀಕ್ಷೆಗಳನ್ನು ಸಮರ್ಥವಾಗಿ ನಡೆಸುತ್ತಿದೆ. ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆ (ಎಐ), ಮುಖಚಹರೆ ಗುರುತಿಸುವಿಕೆ, ಬೆರಳಚ್ಚು ಬಳಕೆ, ಬಯೋಮೆಟ್ರಿಕ್ಸ್ ಮತ್ತಿತರ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು, ವೆಬ್ ಕಾಸ್ಟಿಂಗ್ ಮೂಲಕ ನಿಯಂತ್ರಣ ಮಾಡುತ್ತಿರುವುದು ಉತ್ತಮ ಕ್ರಮವಾಗಿದೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.