ಕಾಫಿ ನಾಡಿಗೆ ಇಂದೂ ಕೂಡ ರೆಡ್‌ ಅಲರ್ಟ್‌

| Published : Jul 31 2024, 01:11 AM IST

ಸಾರಾಂಶ

ಶೃಂಗೇರಿ- ಮಂಗಳೂರು ರಸ್ತೆ ಸಂಪರ್ಕ ಕಡಿದು ಹೋಗಿದೆ. ಕಳಸ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಭದ್ರಾ ನದಿ ನೀರಿನ ಮಟ್ಟದಲ್ಲಿ ಭಾರೀ ಏರಿಕೆಯಾಗಿದೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ವರುಣನ ಆರ್ಭಟಕ್ಕೆ ಕಾಫಿ ನಾಡು ತತ್ತರಿಸುತ್ತಿದೆ, ಜನ ಜೀವನ ಅಸ್ತವ್ಯಸ್ತವಾಗಿದೆ. ನದಿ, ಹಳ್ಳಗಳು ತುಂಬಿ ಹರಿಯುತ್ತಿವೆ. ಹಲವೆಡೆ ಧರೆ ಕುಸಿಯುತ್ತಿದೆ. ಮರಗಳು, ಮನೆಗಳು ಬೀಳುತ್ತಿವೆ. ರಸ್ತೆ ಸಂಪರ್ಕ ಕಡಿದು ಹೋಗಿವೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಮಲೆನಾಡಿನ 6 ತಾಲೂಕುಗಳಿಗೆ ಬುಧವಾರ ರಜೆ ಘೋಷಣೆ ಮಾಡಿದೆ.

ಕೊಪ್ಪ, ಕಳಸ, ಮೂಡಿಗೆರೆ, ಚಿಕ್ಕಮಗಳೂರು, ಶೃಂಗೇರಿ ಹಾಗೂ ಎನ್‌.ಆರ್‌.ಪುರ ತಾಲೂಕುಗಳ ಅಂಗನವಾಡಿ, ಶಾಲೆ, ಕಾಲೇಜುಗಳು ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೂ ಅನ್ವಯವಾಗುವಂತೆ ರಜೆ ಘೋಷಣೆ ಮಾಡಲಾಗಿದೆ.ಮುಂದಿನ ಐದು ದಿನಗಳಲ್ಲಿ ರಾಜ್ಯದ ಹವಮಾನ ಕುರಿತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಪ್ರಕಟಣೆ ಹೊರಡಿಸಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಬುಧವಾರ ಗಂಟೆಗೆ 30ರಿಂದ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಜತೆಗೆ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಕಳೆದ ಎರಡು ದಿನ ಜಿಲ್ಲೆಯಲ್ಲಿ ಮಳೆ ಅಬ್ಬರ ತೀರ ಕಡಿಮೆಯಾಗಿತ್ತು. ಸೋಮವಾರ ಸಂಜೆ ಆರಂಭವಾದ ಮಳೆ ಮಂಗಳವಾರವೂ ಮುಂದುವರೆದಿತ್ತು. ಮುಂಜಾಗ್ರತಾ ಕ್ರಮವಾಗಿ 5 ತಾಲೂಕುಗಳ ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿತ್ತು. ಮಳೆ ಅಬ್ಬರ ಇನ್ನಷ್ಟು ತೀವ್ರವಾಗಿದ್ದರಿಂದ ಬುಧವಾರ 6 ತಾಲೂಕುಗಳಿಗೆ ಅನ್ವಯವಾಗುವಂತೆ ಶಾಲೆಗಳ ಜತೆಗೆ ಕಾಲೇಜುಗಳಿಗೆ ರಜೆ ನೀಡಲಾಗಿದೆ.

ಪ್ರವಾಹ:

ಮಲೆನಾಡಿನಲ್ಲಿ ಹುಟ್ಟಿ ಹರಿಯುವ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ತಗ್ಗಿನ ಪ್ರದೇಶಗಳು ಜಲಾವೃತವಾಗಿವೆ. ಶೃಂಗೇರಿ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ತುಂಗಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಶೃಂಗೇರಿ ಪಟ್ಟಣದಲ್ಲಿ ಶ್ರೀ ಮಠದ ಭೋಜನಾ ಶಾಲೆ, ಗಾಂಧಿ ಮೈದಾನ, ಕೆವಿಆರ್‌ ವೃತ್ತ ಜಲಾವೃತವಾಗಿದ್ದವು. ಶ್ರೀ ಕಪ್ಪೆ ಶಂಕರ ದೇವಾಲಯ, ಸಂಧ್ಯಾ ವಂದನೆ ಮಂಟಪ ಮುಳುಗಡೆಯಾಗಿದೆ. ಕುರುಬಗೇರಿಯಲ್ಲಿ ನೀರು ನಿಂತಿದ್ದರಿಂದ ಇಲ್ಲಿರುವ 20 ಕುಟುಂಬಗಳನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ಬೋಟ್‌ ಮೂಲಕ ಸ್ಥಳಾಂತರಿಸಿದರು.

ಇಲ್ಲಿನ ವಿದ್ಯಾರಣ್ಯಪುರ ರಸ್ತೆಯಲ್ಲೂ ನೀರು ನಿಂತಿದೆ. ಶೃಂಗೇರಿ- ಮಂಗಳೂರು ರಸ್ತೆ ಸಂಪರ್ಕ ಕಡಿದು ಹೋಗಿದೆ. ಕಳಸ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಭದ್ರಾ ನದಿ ನೀರಿನ ಮಟ್ಟದಲ್ಲಿ ಭಾರೀ ಏರಿಕೆಯಾಗಿದೆ. ಹೊರನಾಡು- ಕಳಸ ಸಂಪರ್ಕದ ಹೆಬ್ಬಾಳ್‌ ಸೇತುವೆ ಮೇಲೆ ಅತಿ ಹೆಚ್ಚು ನೀರು ಹರಿಯುತ್ತಿರುವುದರಿಂದ ಸುರಕ್ಷತೆ ದೃಷ್ಟಿಯಿಂದ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ಆದರೂ ಸಹ ಮಂಗಳವಾರ ಜನರು ನೋಡು ನೋಡುತ್ತಿದ್ದಂತೆ ಎಮ್ಮೆಯೊಂದು ಇದೇ ಸೇತುವೆ ಮೇಲೆ ಸಂಚರಿಸುವ ವೇಳೆಯಲ್ಲಿ ಭದ್ರಾ ನದಿ ನೀರಿನಲ್ಲಿ ಕೊಚ್ಚಿ ಹೋಗಿದೆ.

ಬಿ. ಕಣಬೂರು ಗ್ರಾಮ ಪಂಚಾಯ್ತಿ ವ್ಯಾಪ್ತಿ ಮಹಲ್‌ಗೋಡು, ಬನ್ನೂರು ಗ್ರಾಮಗಳ ಕೆಲವು ಪ್ರದೇಶಗಳು ಜಲಾವೃತವಾಗಿದ್ದರಿಂದ ಇಲ್ಲಿರುವ 16 ಮನೆಗಳ ನಿವಾಸಿಗರು ತಮ್ಮ ವಾಸದ ಮನೆಗಳನ್ನು ಬಿಟ್ಟು ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಕೊಪ್ಪ ತಾಲೂಕಿನ ಬೊಮ್ಮಾಪುರ ಗ್ರಾಮದ ಹೊಕ್ಕಳಿಕೆ ರಸ್ತೆಯಲ್ಲಿರುವ ಹೊಲಗೋಡು ಬಳಿ ರಸ್ತೆ ಕುಸಿತ ಉಂಟಾಗಿದೆ. ಅಚ್ಚರಡಿ ಸಮೀಪ ಹಾದು ಹೋಗಿರುವ ಮುಸುರೆಹಳ್ಳದ ನೀರು ರಸ್ತೆ ಮೇಲೆ ಬಂದಿತ್ತು. ಬಸರೀಕಟ್ಟೆಯಲ್ಲಿ ಧರೆ ಕುಸಿತ ಉಂಟಾಗಿ ವಿದ್ಯುತ್‌ ಲೈನ್‌ಗಳಿಗೆ ಹಾನಿ ಸಂಭವಿಸಿತ್ತು. ಕುದುರೆಗುಂಡಿ ಬಳಿ ಹಳ್ಳದ ನೀರಿನಿಂದ ತಗ್ಗಿನ ಪ್ರದೇಶ ಜಲಾವೃತವಾಗಿತ್ತು.

ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದರಿಂದ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳ ಜಲಾಶಯಗಳಲ್ಲಿ ಒಳ ಹರಿವು ಹೆಚ್ಚಳವಾಗುತ್ತಿದೆ. ಮಂಗಳವಾರ ಭದ್ರಾ ಜಲಾಶಯದಲ್ಲಿ ಒಳ ಹರಿವು 20,774 ಕ್ಯುಸೆಕ್‌ ಇತ್ತು. ಆದ್ದರಿಂದ ಜಲಾಶಯದಿಂದ 30,000 ಕ್ಯುಸೆಕ್‌ ನೀರನ್ನು ಇದೇ ಮೊದಲ ಬಾರಿಗೆ ನದಿಗೆ ಬಿಡಲಾಯಿತು. ಜಲಾಶಯದಿಂದ ಬಿಟ್ಟ ನೀರು ತರೀಕೆರೆ ತಾಲೂಕಿನ ಸೋಮಪುರ, ಅಲಸೂರು ಸುತ್ತಮುತ್ತಲ ಗ್ರಾಮಗಳಿಗೆ ಅನಾನುಕೂಲವಾಗಿದೆ. ಇಲ್ಲಿನ 17 ಕುಟುಂಬಗಳನ್ನು ಬಾವಿಕೆರೆ, ಎ. ರಂಗಾಪುರ ಗ್ರಾಮಗಳಲ್ಲಿ ತೆರೆಯಲಾದ ಗಂಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ. ಕಲ್ಲತ್ತಗಿರಿ ಹಾಗೂ ಹೆಬ್ಬೆ ಜಲಪಾತ ವೀಕ್ಷಣೆಗೆ ತೆರಳುವ ಪ್ರವಾಸಿಗರಿಗೆ ನಿರ್ಬಂಧ ಹಾಕಲು ಕಲ್ಲತ್ತಿಪುರ ಬಳಿ ಪೊಲೀಸರು ಬ್ಯಾರಿಕೇಡ್‌ ಹಾಕಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಮಲೆನಾಡಿನ ಗಿರಿ ಪ್ರದೇಶದಲ್ಲಿ ಧರೆ ಕುಸಿತ ಉಂಟಾಗಿದೆ. ಹಳ್ಳಗಳು ತುಂಬಿ ಹರಿಯುತ್ತಿವೆ. ಬಿಡುವಿಲ್ಲದೆ ಮಳೆ ಸುರಿಯುತ್ತಿರುವ ಪರಿಣಾಮ ಜನರು ಮನೆಯಿಂದ ಹೊರಗೆ ಹೋಗಲು ಆಗುತ್ತಿಲ್ಲ, ಕಡೂರು ಹಾಗೂ ಅಜ್ಜಂಪುರ ತಾಲೂಕುಗಳಲ್ಲೂ ಬಿಡುವಿಲ್ಲದೆ ಮಳೆ ಸುರಿಯುತ್ತಿದೆ. ಒಟ್ಟಾರೆ ಮಳೆಯಿಂದಾಗಿ ಕಾಫಿ ನಾಡು ತತ್ತರಿಸುತ್ತಿದೆ.

ಚಾರ್ಮಾಡಿ ಘಾಟ್‌ನಲ್ಲಿ ಕುಸಿತ:

ಮೂಡಿಗೆರೆಯಿಂದ ದಕ್ಷಿಣಕನ್ನಡ ಜಿಲ್ಲೆ ಸಂಪರ್ಕಿಸುವ ಚಾರ್ಮಾಡಿ ಘಾಟ್‌ ರಸ್ತೆ 9ನೇ ತಿರುವಿನಲ್ಲಿ ಭೂ ಕುಸಿತ ಉಂಟಾಗಿತ್ತು. ಹಾಗಾಗಿ ಸುಮಾರು 2 ಗಂಟೆಗಳ ಕಾಲ ಚಾರ್ಮಾಡಿ ಘಾಟ್‌ ರಸ್ತೆಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಕೊಟ್ಟಿಗೆಹಾರದ ಬಳಿ ಪೊಲೀಸರು ವಾಹನ ತಡೆದು ನಿಲ್ಲಿಸಿದ್ದರು.

ಶಿರಾಡಿ ಘಾಟ್‌ ರಸ್ತೆಯ ಸಂಚಾರ ಬಂದ್‌ ಆಗಿದ್ದರಿಂದ ದಕ್ಷಿಣ ಕನ್ನಡಕ್ಕೆ ಹೋಗಬೇಕಾಗಿರುವ ವಾಹನಗಳು ಚಾರ್ಮಾಡಿ ರಸ್ತೆಯಲ್ಲಿ ಸಂಚರಿಸುತ್ತಿವೆ. ಆದ್ದರಿಂದ ವಾಹನಗಳ ದಟ್ಟಣೆ ಹೆಚ್ಚಾಗಿದೆ. ಈ ಭಾಗದಲ್ಲಿ ನಿರಂತರವಾಗಿ ಮಳೆ ಬೀಳುತ್ತಿರುವುದರಿಂದ ಕೆಲವೆಡೆ ಸಣ್ಣ ಪುಟ್ಟ ಧರೆ ಕುಸಿತ ಕಂಡು ಬರುತ್ತಿದೆ.

ಪ್ರವಾಸಿಗರಿಗೆ ಜಿಲ್ಲಾಧಿಕಾರಿ ಸೂಚನೆ

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ವಿಪರೀತ ಮಳೆಯಾಗುತ್ತಿದ್ದು, ಬಹುತೇಕ ಹಳ್ಳ, ಕೆರೆ, ನದಿಗಳು ತುಂಬಿ ಅಪಾಯಕಾರಿ ಮಟ್ಟ ತಲುಪಿದೆ, ತುಂಗಾನದಿ, ಭದ್ರಾ ನದಿ, ಹೇಮಾವತಿ ನದಿ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿನ ನದಿಗಳು ಅಪಾಯಕಾರಿ ಮಟ್ಟ ಮೀರಿ ಹರಿಯುತ್ತಿದೆ. ಹಲವೆಡೆ ಭೂಕುಸಿತ ಉಂಟಾಗುತ್ತಿರುವುದರಿಂದ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಆ.15 ರವರೆಗೆ ಮುಂಜಾಗ್ರತ ಕ್ರಮ ಪಾಲಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಸಾರ್ವಜನಿಕರು, ಪ್ರವಾಸಿಗರು ನದಿಗಳಿಗೆ ಅಥವಾ ತಗ್ಗು ಪ್ರದೇಶಗಳಿಗೆ ಇಳಿಯುವಂತಿಲ್ಲ. ಅತಿಯಾದ ಮಳೆಯಿಂದ ಧರೆ, ಗುಡ್ಡ ಕುಸಿತ ಉಂಟಾಗುವ ಸಂಭವವಿರುವುದರಿಂದ ಚಾರಣಿಗರು ಟ್ರಕ್ಕಿಂಗ್ ಮಾಡುವುದನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಹೋಂ ಸ್ಟೇ, ರೆಸಾರ್ಟ್, ಅರಣ್ಯ ಇಲಾಖೆ ವತಿಯಿಂದ ಕೈಗೊಳ್ಳುವ ಟ್ರಕ್ಕಿಂಗ್ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.

ರಾಜ್ಯದ ವಿವಿಧ ಸ್ಥಳಗಳಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರವಾಸಿಗರು ಚಿಕ್ಕಮಗಳೂರು ಜಿಲ್ಲಾ ಪ್ರವಾಸವನ್ನು ತಾತ್ಕಾಲಿಕವಾಗಿ ಮುಂದೂಡುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ ಮೀನಾ ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.