ಸಾರಾಂಶ
ಜಿಲ್ಲೆಯಲ್ಲಿ ನದಿ, ಕೊಳ್ಳಗಳು ತುಂಬಿ ಹರಿಯುತ್ತಿವೆ. ದಿನಪೂರ್ತಿ ನಿರಂತರ ಮಳೆಯಾಗಿದ್ದು, ಚಳಿ ಹಿಡಿಸಿದೆ.
ಮಂಗಳೂರು: ಕರಾವಳಿಯಾದ್ಯಂತ ಭಾನುವಾರ ಅಪರಾಹ್ನದಿಂದ ಧಾರಾಕಾರ ಮಳೆ ಕಾಣಿಸಿದೆ. ಭಾರತೀಯ ಹವಾಮಾನ ಇಲಾಖೆ ಜು.15 ಮತ್ತು 16ರಂದು ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಿಸಿದೆ.
ದ.ಕ.ಜಿಲ್ಲೆಯಲ್ಲಿ ಭಾನುವಾರ ಮುಂಜಾನೆಯಿಂದಲೇ ಮಳೆ ಚುರುಕುಗೊಂಡಿದೆ. ಇಡೀ ದಿನ ಆಗಾಗ ಮಳೆ ಸುರಿಯುತ್ತಲೇ ಇತ್ತು. ಅಪರಾಹ್ನ ಮಳೆ ಬಿರುಸುಗೊಂಡಿದ್ದು, ಧಾಕಾರಾರ ಮಳೆಯಾಗಿದೆ. ಈ ಮಳೆ ರಾತ್ರಿಯೂ ಮುಂದುವರಿದಿದೆ.ಜಿಲ್ಲೆಯಲ್ಲಿ ನದಿ, ಕೊಳ್ಳಗಳು ತುಂಬಿ ಹರಿಯುತ್ತಿವೆ. ದಿನಪೂರ್ತಿ ನಿರಂತರ ಮಳೆಯಾಗಿದ್ದು, ಚಳಿ ಹಿಡಿಸಿದೆ.ಭಾನುವಾರ ಬೆಳಗ್ಗಿನ ವರೆಗೆ ಬೆಳ್ತಂಗಡಿ 43.3 ಮಿಲಿ ಮೀಟರ್, ಬಂಟ್ವಾಳ 43.3 ಮಿ.ಮೀ, ಮಂಗಳೂರು 40.8 ಮಿ.ಮೀ, ಪುತ್ತೂರು 47 ಮಿ.ಮೀ, ಸುಳ್ಯ 39 ಮಿ.ಮೀ, ಮೂಡುಬಿದಿರೆ 46.9 ಮಿ.ಮೀ. ಕಡಬ 44 ಮಿ.ಮೀ, ಮೂಲ್ಕಿ 40.8 ಮಿ.ಮೀ, ಉಳ್ಳಾಲ 40.5 ಮಿ.ಮೀ. ಮಳೆಯಾಗಿದೆ. ಜಿಲ್ಲೆಯ ದಿನದ ಸರಾಸರಿ ಮಳೆ 34.5 ಮಿ.ಮೀ. ಆಗಿದೆ.
ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಅಡಿಮಾರು ಇಂದಿರಾ ಎಂಬವರ ಮನೆಯ ಮೇಲೆ ಮರ ಬಿದ್ದು, ಅಡುಗೆ ಕೋಣೆ ಭಾಗಶಃ ಹಾನಿಯಾಗಿದೆ.ಮೂಲ್ಕಿ ತಾಲೂಕಿನಲ್ಲಿ ಮಳೆ ಹಾನಿ
ಮೂಲ್ಕಿ: ಮೂಲ್ಕಿ ತಾಲೂಕಿನಲ್ಲಿ ಭಾನುವಾರ ಬೆಳಿಗ್ಗೆಯಿಂದ ಬಿರುಸಿನ ಮಳೆಯಾಗಿದ್ದು , ಗಾಳಿ ಸಹಿತ ಭಾರಿ ಮಳೆಗೆ ಕೆಲವೆಡೆ ಹಾನಿ ಸಂಭವಿಸಿದೆ. ಬಿರುಸಿನ ಗಾಳಿಯಿಂದಾಗಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು.ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ತಾಳಿಪಾಡಿ ಗ್ರಾಮದಲ್ಲಿ ಬೇಬಿ ಎಂಬವರ ಮನೆಯ ಮಾಡು ಸಂಪೂರ್ಣ ಕುಸಿದು ಹೆಚ್ಚಿನ ಹಾನಿ ಸಂಭವಿಸಿದೆ. ಸ್ಥಳಕ್ಕೆ ಮೂಲ್ಕಿ ತಾಲೂಕು ಉಪ ತಹಶೀಲ್ದಾರ್ ದಿಲೀಪ್ ರೋಡ್ಕರ್, ಕಂದಾಯ ನಿರೀಕ್ಷಕ ದಿನೇಶ್ ಮತ್ತು ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.