ರಾಷ್ಟ್ರ ಅಭಿವೃದ್ಧಿಯಲ್ಲಿ ರೆಡ್ ಕ್ರಾಸ್ ಕೊಡುಗೆ ಶ್ಲಾಘನೀಯ: ಲಕ್ಷ್ಮಣ್

| Published : May 09 2025, 12:33 AM IST

ಸಾರಾಂಶ

ಮಾನವೀಯ ತತ್ವ ಹಾಗೂ ಮೌಲ್ಯಗಳನ್ನು ಬೆಳೆಸುವ ಕಾರ್ಯಕ್ರಮಗಳನ್ನು ಶಾಲಾ ಕಾಲೇಜುಗಳಲ್ಲಿ ರೆಡ್ ಕ್ರಾಸ್ ಸಂಸ್ಥೆಯು ರೂಪಿಸುತ್ತಿದೆ. ಧರ್ಮ, ಜಾತಿ ನೋಡದೆ ಚಿಕಿತ್ಸೆಗೆ ಸ್ಪಂದಿಸುತ್ತಿರುವ ರೆಡ್ ಕ್ರಾಸ್ ಸಂಸ್ಥೆ ಸೇವೆ ಅನನ್ಯವಾಗಿದೆ.

ಕನ್ನಡಪ್ರಭ ವಾರ್ತೆ ರಾಮನಗರ

ಸಮಾಜದಲ್ಲಿ ಕಂಡು ಬರುವ ವಿವಿಧ ಸಮಸ್ಯೆಗಳಿಗೆ ಪರಿಹಾರ, ನೈಸರ್ಗಿಕ ವಿಪತ್ತುಗಳ ನಿರ್ವಹಣೆ, ಜನಜಾಗೃತಿ ಕಾರ್ಯಕ್ರಮ, ತೊಂದರೆಯಲ್ಲಿರುವ ಜನರಿಗೆ ಸಹಾಯ ಸೇರಿದಂತೆ ಅನೇಕ ಜನಪರ ಕಾರ್ಯಗಳನ್ನು ನಿರಂತರವಾಗಿ ಮಾಡುವ ಮೂಲಕ ರೆಡ್ ಕ್ರಾಸ್ ಸಂಸ್ಥೆಯು ರಾಷ್ಟ್ರ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದು ಶ್ರೀ ಗಣೇಶ್ ಜ್ಯುವೆಲರ್ಸ್ ಮಾಲೀಕ ಲಕ್ಷ್ಮಣ್ ತಿಳಿಸಿದರು.

ನಗರದ ಶ್ರೀ ಶಾರದಾಂಬ ದೇವಾಲಯದ ಆವರಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ವತಿಯಿಂದ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ವೀಲ್ ಚೇರ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರೆಡ್ ಕ್ರಾಸ್ ಸಂಸ್ಥೆ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ. ಈ ಸಂಸ್ಥೆಯು ಶಾಂತಿ ಕಾಪಾಡುವುದು, ಗಾಯಗೊಂಡ ವ್ಯಕ್ತಿಗಳಿಗೆ ಚಿಕಿತ್ಸೆ ನೀಡುವುದು, ಆಕಸ್ಮಿಕ ಮರಣದ ಪ್ರಮಾಣವನ್ನು ತಗ್ಗಿಸುವುದು, ಸಮುದಾಯದ ಅಭಿವೃದ್ಧಿಯಲ್ಲಿ ತೊಡಗುವ ಮೂಲಕ ಸಬಲೀಕರಣ ಕಾರ್ಯಗಳನ್ನು ಮಾಡುತ್ತಿದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾಲೂಕು ಆಶಾ ಕಾರ್ಯಕರ್ತೆಯರ ಮೇಲ್ವಿಚಾರಕಿ ನಾಗಮಣಿ ಮಾತನಾಡಿ, ಯುದ್ಧದಲ್ಲಿ ಗಾಯಗೊಂಡವರಿಗೆ ವೈದ್ಯಕೀಯ ಚಿಕಿತ್ಸೆ ನೀಡುವುದರೊಂದಿಗೆ ಜಿನೇವಾದಲ್ಲಿ ಜನ್ಮವೆತ್ತಿದ ರೆಡ್ ಕ್ರಾಸ್ ಸಂಸ್ಥೆಯು ತನ್ನ ನಿಸ್ವಾರ್ಥ ಸೇವೆಯೊಂದಿಗೆ ಈಗ ಜಗತ್ತಿನ 200ಕ್ಕೂ ಅಧಿಕ ದೇಶಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ವಿ. ಬಾಲಕೃಷ್ಣ ಮಾತನಾಡಿ, ವಿಪತ್ತು, ಆರೋಗ್ಯ ಆರೈಕೆ, ನೊಂದವರ ಮತ್ತು ದುರ್ಬಲರ ಸೇವೆಗೆ ತನ್ನನ್ನು ತಾನು ಸಮರ್ಪಿಸಿಕೊಳ್ಳಲು ಮಾನವನಿಗೆ ಮಾನವೀಯತೆ, ಸ್ವಾತಂತ್ರ್ಯ ಹಾಗೂ ನಿಷ್ಪಕ್ಷಪಾತ ಮನೋಭಾವ ಅಗತ್ಯವಾಗಿದೆ ಎಂದರು.

ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಪತಿ ಎಚ್.ವಿ. ಶೇಷಾದ್ರಿ ಅಯ್ಯರ್ ಮಾತನಾಡಿ, ಮಾನವೀಯ ತತ್ವ ಹಾಗೂ ಮೌಲ್ಯಗಳನ್ನು ಬೆಳೆಸುವ ಕಾರ್ಯಕ್ರಮಗಳನ್ನು ಶಾಲಾ ಕಾಲೇಜುಗಳಲ್ಲಿ ರೆಡ್ ಕ್ರಾಸ್ ಸಂಸ್ಥೆಯು ರೂಪಿಸುತ್ತಿದೆ. ಧರ್ಮ, ಜಾತಿ ನೋಡದೆ ಚಿಕಿತ್ಸೆಗೆ ಸ್ಪಂದಿಸುತ್ತಿರುವ ರೆಡ್ ಕ್ರಾಸ್ ಸಂಸ್ಥೆ ಸೇವೆ ಅನನ್ಯವಾಗಿದೆ ಎಂದು ತಿಳಿಸಿದರು.

ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎಸ್.ರುದ್ರೇಶ್ವರ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆಯ ಚಟುವಟಿಕೆಗಳಲ್ಲಿ ಮಾನವೀಯತೆ, ನಿಷ್ಪಕ್ಷಪಾತ, ತಟಸ್ಥತೆ, ಸ್ವಯಂಸೇವೆ, ಏಕತೆ ಮತ್ತು ವಿಶ್ವವ್ಯಾಪಕತೆಯ ಮೂಲತತ್ವವನ್ನು ಪಾಲಿಸಲಾಗುತ್ತಿದೆ. ರೆಡ್ ಕ್ರಾಸ್ ಸಂಸ್ಥೆಯ ಸಂಸ್ಥಾಪಕ ಹೆನ್ರಿ ಡನಂಟ್ ಅವರ ಜನ್ಮ ದಿನವಾದ ಮೇ 8 ಅನ್ನು ವಿಶ್ವ ರೆಡ್ ಕ್ರಾಸ್ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಹೇಳಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಖಜಾಂಚಿ ಎಂ. ಪರಮಶಿವಯ್ಯ, ಸದಸ್ಯರಾದ ಡಿ. ನರೇಂದ್ರ, ಸಿಕ್ ಬತ್ ಉಲ್ಲಾ ಖಾನ್ ಉಪಸ್ಥಿತರಿದ್ದರು.