ಸಾರಾಂಶ
ಮಂಜುನಾಥ ಕೆ.ಎಂ.
ಬಳ್ಳಾರಿ: ಮಾಜಿ ಸಚಿವ ಬಿ. ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ನಡುವಿನ ಮುನಿಸಿನಿಂದ ಜಿಲ್ಲೆಯ ಬಿಜೆಪಿಯಲ್ಲಿ ಎರಡು ಬಣಗಳು ಸೃಷ್ಟಿಯಾಗಿದ್ದು, ಪಕ್ಷದ ಸಂಘಟನೆಗೆ ದೊಡ್ಡ ಪೆಟ್ಟುಬೀಳುವ ಸಾಧ್ಯತೆ ಸ್ಪಷ್ಟವಾಗಿ ಗೋಚರಿಸುತ್ತಿದೆ.ಬಿಜೆಪಿ ಕಾರ್ಯಕರ್ತರೇ ಹೇಳುವಂತೆ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಇಲ್ಲದೆ ಗಣಿ ಜಿಲ್ಲೆಯ ಕಮಲ ಅರಳುವುದಿಲ್ಲ. ಮೂಲ ಬಿಜೆಪಿಗರು ಎಂದು ಹೇಳಿಕೊಳ್ಳುವವರ ಪೈಕಿ ವರ್ಚಸ್ಸಿನ ನಾಯಕರಿಲ್ಲ. ಹೀಗಾಗಿ, ಈ ಇಬ್ಬರ ಮೇಲೆಯೇ ಪಕ್ಷ ಸಂಘಟನೆ ಆಧರಿಸಿದ್ದು, ಇವರಿಬ್ಬರ ನಡುವಿನ ಮನಃಸ್ತಾಪಗಳು ಮುಂದುವರಿದರೆ ಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿಗಳ ಗೆಲುವು ಕಷ್ಟಸಾಧ್ಯ ಎಂದು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಆತಂಕ ವ್ಯಕ್ತಪಡಿಸುತ್ತಾರೆ.
ಏತನ್ಮಧ್ಯೆ ರೆಡ್ಡಿ-ರಾಮುಲು ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿಸಿಕೊಂಡಿದ್ದು, ಈ ಬೆಳವಣಿಗೆ ಪಕ್ಷದ ಕಾರ್ಯಕರ್ತರಲ್ಲದೆ, ಬಿಜೆಪಿ ಬೆಂಬಲಿತರು ಹಾಗೂ ಅಭಿಮಾನಿಗಳಲ್ಲಿ ತೀವ್ರ ಮುಜುಗರಕ್ಕೀಡು ಮಾಡಿದೆ. ಸದ್ಯದ ಬೆಳವಣಿಗೆ ಗಮನಿಸಿದರೆ, ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಶ್ರೀರಾಮುಲು, ಜನಾರ್ದನ ರೆಡ್ಡಿ ಅವರನ್ನು ಎಷ್ಟೇ ಸಮಾಧಾನಪಡಿಸಿದರೂ ಮೇಲ್ನೋಟಕ್ಕಷ್ಟೇ ಜೊತೆಗೂಡಬಹುದೇ ವಿನಃ ಮುರಿದ ಮನಸ್ಸು ಮತ್ತೆ ಒಂದಾಗದು ಎಂಬ ವಾತಾವರಣ ಸೃಷ್ಟಿಯಾಗಿದೆ.ರೆಡ್ಡಿ-ರಾಮುಲು ಮೇಲೆಯೇ ಅವಲಂಬಿತ
ರಾಷ್ಟ್ರೀಯ ಪಕ್ಷ ಎನಿಸಿಕೊಂಡಿರುವ ಬಿಜೆಪಿ ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಇವರ ಮೇಲೇಯೇ ಜೀವ ಉಳಿಸಿಕೊಂಡಿದೆಯೇ ಹೊರತು, ಪಕ್ಷ ಸಂಘಟನೆಯಾಗಿ ಬಲ ಪಡೆದುಕೊಂಡಿಲ್ಲ. ಜಿಲ್ಲೆಯಲ್ಲಿ ಬಿಜೆಪಿ ಮುನ್ನೆಲೆಗೆ ಬಂದು ಎರಡೂವರೆ ದಶಕ ಕಳೆದರೂ ಇನ್ನು ವ್ಯಕ್ತಿ ಅವಲಂಬಿತ ಪಕ್ಷವಾಗಿಯೇ ಉಳಿದಿದೆ.2008ರಲ್ಲಿ ಜರುಗಿದ ವಿಧಾನಸಭಾ ಚುನಾವಣೆಯಲ್ಲಿ ಇಬ್ಬರು ಜೋಡಿಗಳು ಮಾಡಿದ ಕಮಾಲ್‌ನಿಂದ ಬಳ್ಳಾರಿ ಜಿಲ್ಲೆಯ ಆಗಿನ 9 ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಿತ್ತು. ನಂತರದಲ್ಲಾದ ರಾಜಕೀಯ ಪಲ್ಲಟಗಳಿಂದ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಜೊತೆಗೂಡಿ ಬಿಎಸ್‌ಆರ್ ಪಕ್ಷ ಸ್ಥಾಪಿಸಿ, ಕಮಲ ಪಕ್ಷದಿಂದ ಹೊರಗುಳಿದಾಗ ಜಿಲ್ಲೆಯಲ್ಲಿ ಬಿಜೆಪಿ ಸ್ಥಿತಿ ಅಯೋಮಯವಾಗಿತ್ತು. 2013ರಲ್ಲಿ ಜರುಗಿದ ವಿಧಾನಸಭಾ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಬಿಜೆಪಿಯಿಂದ ದೂರ ಉಳಿದಿದ್ದರಿಂದಾಗಿಯೇ ಬಿಜೆಪಿಯಿಂದ ಅಖಂಡ ಬಳ್ಳಾರಿ ಜಿಲ್ಲೆಯಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಪೈಕಿ ಹೊಸಪೇಟೆಯ ಆನಂದಸಿಂಗ್ ಹೊರತುಪಡಿಸಿದರೆ ಉಳಿದವರು ಸೋಲುಂಡರು. ಬಿಜೆಪಿಯ ಬಹುತೇಕ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು. ಮತ್ತೆ ಶ್ರೀರಾಮುಲು-ಜನಾರ್ದನ ರೆಡ್ಡಿ ಪಕ್ಷಕ್ಕೆ ಮರಳಿದ ಬಳಿಕ ಬಿಜೆಪಿ ಹಿಂದಿನ ಶಕ್ತಿ ಪಡೆದುಕೊಂಡಿತು. ಹೀಗಾಗಿಯೇ ಈ ಇಬ್ಬರು ಪಕ್ಷದಲ್ಲಿಯೇ ಇರಬೇಕು ಎಂದು ಪಕ್ಷದ ಕಾರ್ಯಕರ್ತರು ಬಯಸುತ್ತಾರೆ.
ರೆಡ್ಡಿ ವಾಪಸಾತಿಗೆ ಸಂಭ್ರಮಅಕ್ರಮ ಗಣಿಗಾರಿಕೆ ಆರೋಪದಡಿ ಜೈಲು ಸೇರಿದ್ದ ಜನಾರ್ದನ ರೆಡ್ಡಿ ಜಾಮೀನಿನ ಮೇಲೆ ಹೊರ ಬಂದ ಬಳಿಕ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಹುಮ್ಮಸ್ಸು ತಂದಿತ್ತು. ಬಳ್ಳಾರಿಗೆ ಬರಲು ಅವಕಾಶ ಸಿಕ್ಕಾಗಲಂತೂ ಪಕ್ಷದ ಎರಡನೇ ಹಂತದ ನಾಯಕರು ಹಾಗೂ ಕಾರ್ಯಕರ್ತರು ಸಂಭ್ರಮಿಸಿದ್ದರು. ರೆಡ್ಡಿ-ರಾಮುಲು ಮತ್ತೆ ಪಕ್ಷವನ್ನು ಬಲಪಡಿಸುತ್ತಾರೆ. ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ರಣಕಹಳೆ ಮೊಳಗಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ಈ ಇಬ್ಬರು ನಡುವಿನ ಮುಸುಕಿನ ಗುದ್ದಾಟ ಸ್ಫೋಟಗೊಂಡ ಬಳಿಕ ಪಕ್ಷದ ಮುಂದಿನ ಗತಿ ಏನು? ಬರುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವುದು ಹೇಗೆ ಎಂಬಿತ್ಯಾದಿ ಗೊಂದಲಗಳು ಕಾರ್ಯಕರ್ತರಲ್ಲಿ ಮೂಡಿವೆ. ಕಾಂಗ್ರೆಸ್ಸಿಗೆ ಕರೀತಾರೆ
ರೆಡ್ಡಿ-ರಾಮುಲು ಸಂಘರ್ಷದ ಬಳಿಕ ಬಿಜೆಪಿ ಜಿಲ್ಲೆಯಲ್ಲಿ ಮಕಾಡೆ ಮಲಗುತ್ತದೆ. ಮುಂದಿನ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಯ ಟಿಕೆಟ್ ಕೇಳಲು ಯಾರೂ ಮುಂದೆ ಬರುವುದಿಲ್ಲ. ಹೀಗಾಗಿ, ನಮ್ಮ ಪಕ್ಷಕ್ಕೆ ಬಂದು ಬಿಡು. ಅಲ್ಲಿದ್ದೇನು ಲಾಭ ಎಂದು ಕಾಂಗ್ರೆಸ್ಸಿನಲ್ಲಿರುವ ಗೆಳೆಯರು ಕರೆಯುತ್ತಿದ್ದಾರೆ. ಸದ್ಯದ ಪರಿಸ್ಥಿತಿ ನೋಡಿದರೆ ನಮಗೂ ಹಾಗೆಯೇ ಅನಿಸುತ್ತಿದೆ. ಏನು ಮಾಡುವುದು ತೋಚುತ್ತಿಲ್ಲ ಎಂದು ಬಿಜೆಪಿಯ ಕೆಲ ನಾಯಕರು ಕನ್ನಡಪ್ರಭ ಜೊತೆ ತಮ್ಮ ಅಳಲು ತೋಡಿಕೊಂಡರು.