ಬಿಕೋ ಎನ್ನುತ್ತಿರುವ ರೆಡ್ಡಿ ನಿವಾಸ

| Published : May 07 2025, 12:51 AM IST

ಸಾರಾಂಶ

ಜನಾರ್ದನ ರೆಡ್ಡಿಗೆ ಜೈಲು ಶಿಕ್ಷೆ ಪ್ರಕಟಗೊಳ್ಳುತ್ತಿದ್ದಂತೆಯೇ ಇಲ್ಲಿನ ಹವಾಂಭಾವಿ ಪ್ರದೇಶದಲ್ಲಿರುವ ರೆಡ್ಡಿ ನಿವಾಸ ಬಣಗುಟ್ಟುತ್ತಿತ್ತು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಜನಾರ್ದನ ರೆಡ್ಡಿಗೆ ಜೈಲು ಶಿಕ್ಷೆ ಪ್ರಕಟಗೊಳ್ಳುತ್ತಿದ್ದಂತೆಯೇ ಇಲ್ಲಿನ ಹವಾಂಭಾವಿ ಪ್ರದೇಶದಲ್ಲಿರುವ ರೆಡ್ಡಿ ನಿವಾಸ ಬಣಗುಟ್ಟುತ್ತಿತ್ತು. ಬಳ್ಳಾರಿಗೆ ಬರಲು ಸುಪ್ರೀಂಕೋರ್ಟ್ ಅನುಮತಿ ನೀಡಿದ ಬಳಿಕ ಜನಾರ್ದನ ರೆಡ್ಡಿ ಹೆಚ್ಚಾಗಿ ಬಳ್ಳಾರಿಯ ನಿವಾಸದಲ್ಲಿಯೇ ಇರುತ್ತಿದ್ದರು. ಆತ್ಮೀಯರು ಹಾಗೂ ಕುಟುಂಬ ಸದಸ್ಯರು ನಿತ್ಯ ಬಂದು ಹೋಗುತ್ತಿದ್ದರು. ಇದರಿಂದ ರೆಡ್ಡಿ ನಿವಾಸ ನಿತ್ಯ ಜನ ಜಂಗುಳಿಯಿಂದ ಕೂಡಿರುತ್ತಿತ್ತು. ಮಂಗಳವಾರ ಬೆಳಗ್ಗೆಯಿಂದಲೇ ರೆಡ್ಡಿ ನಿವಾಸ ಎದುರು ಬಣಗುಟ್ಟುತ್ತಿತ್ತು. ಕೋರ್ಟ್ ತೀರ್ಪು ಹಿನ್ನೆಲೆ ರೆಡ್ಡಿ ಕುಟುಂಬ ಸದಸ್ಯರು ಬೆಂಗಳೂರಿನ ನಿವಾಸ ಸೇರಿದ್ದರು. ಹೀಗಾಗಿ ರೆಡ್ಡಿ ನಿವಾಸ ಎದುರು ಬಿಕೋ ಎನ್ನುತ್ತಿತ್ತು.

ಶ್ರೀರಾಮುಲು ಮೊಬೈಲ್ ಸ್ವಿಚ್ ಆಫ್‌

ಗಾಲಿ ಜನಾರ್ದನ ರೆಡ್ಡಿ ಮಾಜಿ ಸ್ನೇಹಿತ ಬಿ.ಶ್ರೀರಾಮುಲು ಮಂಗಳವಾರ ಮಧ್ಯಾಹ್ನದಿಂದಲೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. ರೆಡ್ಡಿಗೆ ಜೈಲು ಶಿಕ್ಷೆ ಪ್ರಕಟವಾಗುತ್ತಿದ್ದಂತೆಯೇ ಶ್ರೀರಾಮುಲು ಮೊಬೈಲ್ ಸ್ವಿಚ್ ಆಫ್ ಮಾಡಿದ್ದು, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಮನಸ್ಸಿಲ್ಲದೆ ಸ್ವಿಚ್‌ ಆಫ್ ಮಾಡಿದ್ದಾರೆ ಎಂದು ಹೇಳಲಾಗಿದೆ.ಜನಾರ್ದನ ರೆಡ್ಡಿಗೆ ಜೈಲು ಶಿಕ್ಷೆಯಾಗಿರುವ ಕುರಿತು ಬಿಜೆಪಿ ನಾಯಕರು ಪ್ರತಿಕ್ರಿಯಿಸಲು ನಿರಾಕರಿಸಿದರು.

ಬಳ್ಳಾರಿಯ ಬಿಜೆಪಿಯಲ್ಲಿ ಎರಡು ಬಣಗಳಾಗಿದ್ದು, ಜನಾರ್ದನ ರೆಡ್ಡಿ ಪರ ಒಂದಷ್ಟು ನಾಯಕರು ಗುರುತಿಸಿಕೊಂಡಿದ್ದರೆ, ಶ್ರೀರಾಮುಲು ಪರ ಒಂದಷ್ಟು ನಾಯಕರಿದ್ದಾರೆ. ರೆಡ್ಡಿ ಹಾಗೂ ಶ್ರೀರಾಮುಲು ನಡುವೆ ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಮುನಿಸು ಶುರುಗೊಂಡು ಇಬ್ಬರು ನಾಯಕರು ಬಹಿರಂಗವಾಗಿ ಪರಸ್ಪರ ಬೈದಾಡುಕೊಂಡಿದ್ದರು. ಇದರಿಂದ ಬಿಜೆಪಿಯ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಇರಸುಮುರಸಾಗಿತ್ತು.ರೆಡ್ಡಿ ಜೈಲುಪಾಲು ಸುದ್ದಿ ಕೆಲ ನಾಯಕರಿಗೆ ಬೇಸರಕ್ಕೀಡು ಮಾಡಿದ್ದರೆ, ಮತ್ತೆ ಕೆಲವರಿಗೆ ಸಂತಸ ತಂದಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.