ಕನ್ನಡಪ್ರಭ ವಾರ್ತೆ ಮೈಸೂರು

ಕ್ಷೇತ್ರ ಮರುವಿಂಗಡನೆಯನ್ನು ಹೊಸ ಜನಗಣತಿಯಾದ ನಂತರ ಮಾಡುವುದು ಸೂಕ್ತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಮೈಸೂರು ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಅದಕ್ಕಾಗಿಯೇ ಈಗ ಕ್ಷೇತ್ರ ಮರು ವಿಂಗಡಣೆಯನ್ನು ವಿರೋಧ ಮಾಡಿದೆವು. ಆದರೆ ನಾವು ಎಂದಿಗೂ ಮಹಿಳಾ ಮೀಸಲಾತಿಯ ಪರವಾಗಿಯೇ ಇದ್ದೇವೆ ಎಂದು ಸ್ಪಷ್ಟಪಡಿಸಿದರು.

ಸಂವಿಧಾನಕ್ಕೆ 73, 74ನೇ ತಿದ್ದುಪಡಿಯನ್ನು ತಂದಿದ್ದು ಕಾಂಗ್ರೆಸ್ ಪಕ್ಷ. ಸ್ಥಳೀಯ ಸಂಸ್ಥೆಗಳಲ್ಲಿ ಶೇ.50 ಮಹಿಳಾ ಮೀಸಲಾತಿ ತಂದಿದ್ದು ಕೂಡ ಕಾಂಗ್ರೆಸ್. 2023ರಲ್ಲಿಯೇ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗಿದ್ದು, ಆಗಲೇ ಅದನ್ನು ಜಾರಿ ಮಾಡಬೇಕಿತ್ತು, ಇಲ್ಲಿಯವರೆಗೆ ಏಕೆ ಕಾಯಬೇಕಿತ್ತು ಎಂದು ಅವರು ಪ್ರಶ್ನಿಸಿದರು.

ಮಹಿಳಾ ಮೀಸಲಾತಿ ಮಸೂದೆಯನ್ನು ತಿರಸ್ಕರಿಸುವ ಮೂಲಕ ಕಾಂಗ್ರೆಸ್ ಭ್ರೂಣ ಹತ್ಯೆ ಮಾಡಿದೆ ಎಂದು ಪ್ರಧಾನಿ ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಮೋದಿ ಅವರದ್ದು ತಾರತಮ್ಯದ ಧೋರಣೆ. ಅವರು ಸಾಮಾಜಿಕ ನ್ಯಾಯದ ಪರವಾಗಿಲ್ಲ. ಮೋದಿ ಅವರು ಅಧಿಕಾರಕ್ಕೆ ಬಂದು 12 ವರ್ಷಗಳಲ್ಲಿ ಮಹಿಳಾ ಮೀಸಲಾತಿ ಏಕೆ ಜಾರಿ ಮಾಡಲಿಲ್ಲ? ಎಂದು ಅವರು ಪ್ರಶ್ನಿಸಿದರು.


ಈಗಲೂ 2023ರ ಪ್ರಕಾರ ಜಾರಿ ಮಾಡಲಿ. ಲೋಕಸಭಾ ಸ್ಥಾನಗಳನ್ನು ಶೇಕಡ 50ರಷ್ಟು ಹೆಚ್ಚು ಮಾಡುವುದಾಗಿ ಹೇಳಿದ್ದು, ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ. ಜನಗಣತಿ ಮಾಡಿ ಎಲ್ಲರಿಗೂ ಸಮಾನವಾಗಿ ಸ್ಥಾನಗಳನ್ನು ಕೊಡಬೇಕು. ಜನಸಂಖ್ಯೆ ನಿಯಂತ್ರಣವನ್ನು ದಕ್ಷಿಣ ಭಾರತದ ರಾಜ್ಯಗಳು ಉತ್ತಮವಾಗಿ ಮಾಡಿದ್ದು, ಉತ್ತರ ಭಾರತದ ರಾಜ್ಯಗಳು ಮಾಡಿಲ್ಲ. ಸಹಜವಾಗಿಯೇ ಅವರಿಗೆ ಅನುಕೂಲ ಹಾಗೂ ದಕ್ಷಿಣ ಭಾರತದ ರಾಜ್ಯಗಳಿಗೆ ಅನಾನುಕೂಲವಾಗಲಿದೆ ಎಂದರು.

ಮುಂದಿನ ದಿನಗಳಲ್ಲಿ ಕಾಂಗ್ರೆಸ್ಸಿಗೆ ಜನ ಪಾಠ ಕಲಿಸಲಿದ್ದಾರೆ ಎಂಬ ಪ್ರಧಾನಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಮೋದಿಯವರು ರಾಜಕೀಯ ಮಾಡುತ್ತಿದ್ದಾರೆ. ಮೂರನೇ ಎರಡರಷ್ಟು ಬಹುಮತವಿಲ್ಲ ಎಂದು ಗೊತ್ತಿದ್ದೂ ಮಹಿಳಾ ಮೀಸಲಾತಿ, ಕ್ಷೇತ್ರ ಮರು ವಿಂಗಡಣೆಯನ್ನು ಒಟ್ಟಿಗೆ ತರಬೇಕಾದ ಅಗತ್ಯವಿರಲಿಲ್ಲ ಎಂದು ಹೇಳಿದರು.

ಗ್ಯಾರಂಟಿಗಳನ್ನು ಎಲ್ಲಾ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಿರುವ ಬಗ್ಗೆ ಮಾತನಾಡಿ, 2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧಿಸಿದ್ದರು. ಈಗ ಅವರೇ ಯೋಜನೆಗಳನ್ನು ಘೋಷಿಸುತ್ತಿದ್ದಾರೆ ಎಂದು ಹೇಳಿದರು.

ಕೇರಳದಲ್ಲಿ ಕಾಂಗ್ರೆಸ್‌ಗೆ ಗೆಲುವು:

ಮೂಲಗಳ ಪ್ರಕಾರ ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಮಿತ್ರ ಪಕ್ಷಗಳು ಗೆಲ್ಲಲಿದ್ದು ಕೇರಳದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಇ.ಡಿ. ದಾಳಿ ತಿಳಿದಿಲ್ಲ:

ಶಾಸಕ ಎನ್.ಎ ಹ್ಯಾರೀಸ್ ಅವರ ಮನೆಯ ಮೇಲೆ ಇ.ಡಿ. ದಾಳಿಯಾಗಿರುವ ಬಗ್ಗೆ ಸುದ್ದಿಗಾರರ ಪ್ರಶ್ನಿಸಿದಾಗ ಈ ಬಗ್ಗೆ ನನಗೆ ತಿಳಿದಿಲ್ಲ ಎಂದರು.ಬಸವಣ್ಣನ ಕನಸಿನ ಸಮಾಜ ನಿರ್ಮಿಸೋಣ:

ಬಸವಣ್ಣನವರು ಪ್ರತಿಪಾದಿಸಿದ ಸಮಾನತೆಯ ಸಮಾಜ ನಿರ್ಮಿಸುವುದೇ ನಮ್ಮ ಸರ್ಕಾರದ ಮೂಲ ಉದ್ದೇಶವಾಗಿದ್ದು, ಅವರು ಕನಸು ಕಂಡ ಸಮ ಸಮಾಜ ನಿರ್ಮಿಸಲು ಎಲ್ಲರೂ ಪ್ರಯತ್ನಿಸೋಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ ಮತ್ತು ಬಸವ ಬಳಗಗಳ ಒಕ್ಕೂಟವು ಆಯೋಜಿಸಿದ್ದ ರಾಜ್ಯಮಟ್ಟದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ನಾನು ಬಸವಣ್ಣನ ಪಕ್ಕಾ ಅನುಯಾಯಿ. ಅದಕ್ಕಾಗಿಯೇ ನಾನು ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಬಸವ ಜಯಂತಿಯಂದೇ ಪ್ರಮಾಣ ವಚನ ಸ್ವೀಕರಿಸಿದ್ದೆ. ಬಸವಣ್ಣನವರು ಮೇಲ್ಜಾತಿಯಲ್ಲಿ ಹುಟ್ಟಿದರೂ ಜಾತಿ ವ್ಯವಸ್ಥೆ ತಿರಸ್ಕರಿಸಿ, ತಳ ಸಮುದಾಯದವರೊಂದಿಗೆ ಗುರುತಿಸಿಕೊಂಡಿದ್ದ ಕ್ರಾಂತಿಕಾರಿ. ಲಿಂಗಾಯತ ಧರ್ಮವು ಸಮಾನತೆಯ ಸಂಕೇತ. ಅಕ್ಷರ ಸಂಸ್ಕೃತಿಯಿಂದ ವಂಚಿತರಾದವರಿಗೆ ಶರಣರು ದನಿಯಾದರು ಎಂದರು.ಪ್ರತಿಯೊಬ್ಬರೂ ಉತ್ಪಾದನೆಯಲ್ಲಿ ತೊಡಗಿ ಸಮಾನವಾಗಿ ಹಂಚಿಕೊಳ್ಳಬೇಕು ಎಂಬ ಬಸವಣ್ಣನವರ ಕಾಯಕ-ದಾಸೋಹ ತತ್ತ್ವವನ್ನೇ ನಮ್ಮ ಸರ್ಕಾರ ಅನುಸರಿಸುತ್ತಿದೆ. ಬಸವಣ್ಣನವರ ಸಮಾಜದಲ್ಲಿ ಕುಳಿತು ತಿನ್ನುವಂತಿಲ್ಲ. ಅಸಮಾನತೆ ಹೋಗಲಾಡಿಸಲು ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡಿದೆ. ಗ್ಯಾರಂಟಿಗಳು ಯಾವುದೇ ಜಾತಿ ಅಥವಾ ಧರ್ಮಕ್ಕೆ ಸೀಮಿತವಾಗಿಲ್ಲ ಎಂದು ಸ್ಮರಿಸಿದರು.ದೇವನೊಬ್ಬ ನಾಮ ಹಲವು ಎಂಬ ಸತ್ಯ ಅರಿತು ಪ್ರತಿಯೊಬ್ಬರೂ ಪರಸ್ಪರ ಪ್ರೀತಿಯಿಂದ ಬಾಳಬೇಕು. 12ನೇ ಶತಮಾನದಲ್ಲಿಯೇ ಬಸವಣ್ಣನವರು ಸಾಮಾಜಿಕ ಅವ್ಯವಸ್ಥೆ, ಅಸಮಾನತೆ ಮತ್ತು ಮೂಢನಂಬಿಕೆಗಳ ವಿರುದ್ಧ ಹೋರಾಡಿದ್ದರು. ಕರ್ಮ ಸಿದ್ಧಾಂತ ಮತ್ತು ಪುನರ್ಜನ್ಮದಂತಹ ನಂಬಿಕೆಗಳು ಪಟ್ಟಭದ್ರ ಹಿತಾಸಕ್ತಿಗಳು ಸೃಷ್ಟಿಸಿದ ಸುಳ್ಳು ವಿಚಾರ. ಮನುಷ್ಯನಿಗೆ ಇರುವುದೊಂದೇ ಜನ್ಮ, ಅದನ್ನು ಮನುಷ್ಯತ್ವದಿಂದ ಬದುಕಬೇಕು ಎಂದರು.ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸಾನ್ನಿದ್ಯ ವಹಿಸಿದ್ದ ಕಾರ್ಯಕ್ರಮದಲ್ಲಿ, ರಾಷ್ಟ್ರೀಯ ಬಸವ ಪ್ರಶಸ್ತಿ ಪುರಸ್ಕೃತ ಸಿದ್ದರಾಮ ಶರಣರು, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಶಿವರಾಜ್ ತಂಗಡಗಿ, ಇತರರು ಇದ್ದರು.