ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಉತ್ತಮ ಆರೋಗ್ಯಕ್ಕಾಗಿ ಯೋಗ ಮುಖ್ಯ. ಪ್ರತಿಯೊಬ್ಬರು ಯೋಗ ಮಾಡಿ ರೋಗ ಕಡಿಮೆ ಮಾಡಿಕೊಳ್ಳುವಂತೆ ನಿವೃತ್ತ ಶಿಕ್ಷಕ ಚಂದ್ರಶೇಖರಯ್ಯ ಸಲಹೆ ನೀಡಿದರು.ಪಟ್ಟಣದ ಟಿಎಪಿಸಿಎಂಎಸ್ ರೈತಸಭಾಂಗಣದಲ್ಲಿ ಪತಂಜಲಿ ಯೋಗ ಸಮಿತಿ ವತಿಯಿಂದ ಯೋಗ ತರಬೇತಿಯಲ್ಲಿ ಮಾತನಾಡಿ, ಸಾಮಾಜಿಕ, ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕವಾಗಿ ಆರೋಗ್ಯವಾಗಿರಲು ಯೋಗ ಮುಖ್ಯ. ಆದ್ದರಿಂದ ಹೊಸ ವರ್ಷದಲ್ಲಿ ಯೋಗದ ಮೂಲಕ ರೋಗ ಕಡಿಮೆ ಮಾಡಿಕೊಂಡು ಪ್ರತಿಯೊಬ್ಬರೂ ಆರೋಗ್ಯವಂತರಾಗಿರಬೇಕು ಎಂದರು.
ಮನಸ್ಸು ಮತ್ತು ದೇಹ, ಆತ್ಮ ಮತ್ತು ಪರಮಾತ್ಮ ಇವುಗಳ ಕೂಡುವಿಕೆಯ ಕೆಲಸವೇ ಯೋಗ. ಪತಂಜಲಿ ಮುನಿಗಳು ಕ್ರಿಸ್ತ ಪೂರ್ವದಲ್ಲೇ ಅಷ್ಟಾಂಗ ಯೋಗದ ಬಗ್ಗೆ ತಿಳಿಸಿದ್ದಾರೆ. ಅವರ ಪ್ರಕಾರ ಯೋಗದರ್ಶನವು 196 ಸೂತ್ರಗಳನ್ನು ಹೊಂದಿದೆ. ಕರ್ಮಯೋಗ, ಭಕ್ತಿಯೋಗ, ಜ್ಞಾನಯೋಗ, ರಾಜಯೋಗಗಳೆಂಬ ವಿಧಗಳುಂಟು ಎಂದರು.ಕರ್ಮಯೋಗದಲ್ಲಿ ಫಲಾಪೇಕ್ಷೆಯಿಲ್ಲದೆ ಕೆಲಸ ಮಾಡುವ ಬಗ್ಗೆ, ಭಕ್ತಿಯೋಗದಲ್ಲಿ ಭಕ್ತಿಯಿಂದ ಭಗವಂತನನ್ನು ಭಜಿಸುವ ಬಗ್ಗೆ, ಜ್ಞಾನಯೋಗದಲ್ಲಿ ಭಗವಂತನನ್ನು ಜ್ಞಾನದಿಂದ ಕಾಣುವ ಬಗ್ಗೆ, ರಾಜಯೋಗದಲ್ಲಿ ಉಸಿರಾಟವನ್ನು ಹತೋಟಿಯಲ್ಲಿಡುವ ಬಗ್ಗೆ ತಿಳಿಸಲಾಗಿದೆ ಎಂದರು.
ಅಷ್ಟಾಂಗ ಯೋಗದಲ್ಲಿ ಶಿಸ್ತಿನ ಬಗ್ಗೆ ತಿಳಿಸಿದ್ದು, ಯಮ-ಸಾಮಾಜಿಕ ಶಿಸ್ತು, ನಿಯಮ-ವೈಯಕ್ತಿಕ ಶಿಸ್ತು, ಆಸನ-ದೈಹಿಕ ಶಿಸ್ತು, ಪ್ರಾಣಾಯಾಮ-ಉಸಿರಾಟದ ಶಿಸ್ತು, ಪ್ರತ್ಯಾಹಾರ-ಇಂದ್ರಿಯಗಳ ಶಿಸ್ತು, ಧಾರಣ-ಗುರಿಯ ಶಿಸ್ತು, ಧ್ಯಾನ-ಮಾನಸಿಕ ಶಿಸ್ತು, ಸಮಾಧಿ-ಪರಿಪೂರ್ಣತೆಯ ಶಿಸ್ತಿನ ಬಗ್ಗೆ ತಿಳಿಸಿದ್ದಾರೆ ಎಂದರು.2015ರಂದು ಮೊಟ್ಟ ಮೊದಲು ಭಾರತದಲ್ಲಿ ವಿಶ್ವ ಯೋಗದಿನ ಆಚರಿಸಲಾಯಿತು. ಅಂದು 84 ದೇಶಗಳು ಯೋಗ ಮಾಡಿ ದಾಖಲೆ ಮಾಡಿದವು. ನಂತರ 185 ದೇಶಗಳು ಐದನೇ ವಿಶ್ವಯೋಗದಿನವನ್ನು ಆಚರಿಸಿದವು. ಅಮೇರಿಕಾ, ರಷ್ಯಾ, ಲಂಡನ್, ಚೀನಾ, ಜಪಾನ್ ಈ ಎಲ್ಲಾ ದೇಶಗಳು ಒಂದೇ ಬಾರಿಗೆ ಕೋಟ್ಯಾಂತರ ಜನ ಸೇರಿ ಜೂ.21,2024ರಂದು ವಿಶ್ವಯೋಗದಿನ ಆಚರಿಸಿದವು. ಹೀಗೆ ಭಾರತ ವಿಶ್ವದ ಭಾವೈಕ್ಯತೆಗೆ ನಾಂದಿ ಹಾಡಿದೆ ಎಂದರು.
ಈ ವೇಳೆ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಎಸ್.ಜಯರಾಂ ಇತರರು ಉಪಸ್ಥಿತರಿದ್ದರು.