ಬಿತ್ತನೆ ಬೀಜ ದರ ಕಡಿತಗೊಳಿಸಿ

| Published : Jun 07 2024, 12:33 AM IST

ಸಾರಾಂಶ

ಬಿತ್ತನೆ ಬೀಜಗಳ ದರ ಶೇ. 60ರಿಂದ 70ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಬರದಿಂದ ಕಂಗೆಟ್ಟಿರುವ ರೈತರಿಗೆ ಈ ಬಾರಿ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಿದೆ.

ಧಾರವಾಡ:

ಬಿತ್ತನೆ ಬೀಜಗಳ ದರ ಕಡಿಮೆ ಮಾಡಬೇಕೆಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ರಾಜ್ಯಾದ್ಯಂತ ಇದೀಗ ಮುಂಗಾರು ಮಳೆ ಶುರುವಾಗಿದ್ದು ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ, ಬಿತ್ತನೆ ಬೀಜಗಳ ದರ ಶೇ. 60ರಿಂದ 70ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಬರದಿಂದ ಕಂಗೆಟ್ಟಿರುವ ರೈತರಿಗೆ ಈ ಬಾರಿ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಿದೆ. ಉತ್ತರ ಕರ್ನಾಟಕದ ಪ್ರಮುಖ ಬೆಳೆಗಳಾದ ಸೋಯಾಬಿನ್, ತೊಗರಿ, ಹೆಸರು, ಬತ್ತ, ಮೆಕ್ಕೆಜೋಳ ಬೀಜಗಳ ದರ ಹೆಚ್ಚಳವಾಗಿದ್ದು, ದಕ್ಷಿಣ ಕರ್ನಾಟಕ ಭಾಗದ ರಾಗಿ ಬೀಜ ದರ ಕೂಡ ಅಧಿಕವಾಗಿದೆ. ಇದರಿಂದ ರಾಜ್ಯ ಸರ್ಕಾರ ರೈತರಿಗೆ ದಿಢೀರ್ ಆಘಾತ ನೀಡಿದೆ. ಇದೇ ವೇಳೆ ಕಳೆದ ವರ್ಷದ ಮಳೆ ಕೊರತೆ, ಅಸಮರ್ಪಕ ಬೆಳೆಯಿಂದ ಸರ್ಕಾರ ಬಿಡುಗಡೆ ಮಾಡಿದ ಪರಿಹಾರದ ಮೊತ್ತವನ್ನು ರೈತರ ಸಾಲಕ್ಕೆ ಜಮೆ ಮಾಡಿಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕರಿಗೆ ಗ್ರಾಮಾಂತರ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ರಾಘವೇಂದ್ರ ಪಾಟೀಲ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ಈ ವೇಳೆ ಶಶಿಮೌಳಿ ಕುಲಕರ್ಣಿ, ಬಸವರಾಜ ಕುಂದಗೋಳಮಠ, ನಿಂಗಪ್ಪ ಸುತಗಟ್ಟಿ, ರುದ್ರಯ್ಯ ಚಿಕ್ಕಮಠ, ಮಹಾಂತೇಶ ಕಾರಿಕಾಯಿ ಇದ್ದರು.