ಪ್ರೌಢ ಶಾಲಾ ಶಿಕ್ಷಕರ ಹೊರೆ ತಗ್ಗಿಸಿ

| Published : Dec 17 2024, 01:01 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಮರು ಸಿಂಚನ, ಕಲಿಕಾ, ಆಸರೆ ಮೊದಲಾದ ಕಾರ್ಯಕ್ರಮಗಳ ದಾಖಲೀಕರಣದಿಂದ ಶಿಕ್ಷಕರಿಗೆ ಆಗುತ್ತಿರುವ ಒತ್ತಡ ನಿವಾರಣೆ ಮಾಡಿ ಏಕರೂಪದ ಕಾರ್ಯಕ್ರಮ ರೂಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ಮರು ಸಿಂಚನ, ಕಲಿಕಾ, ಆಸರೆ ಮೊದಲಾದ ಕಾರ್ಯಕ್ರಮಗಳ ದಾಖಲೀಕರಣದಿಂದ ಶಿಕ್ಷಕರಿಗೆ ಆಗುತ್ತಿರುವ ಒತ್ತಡ ನಿವಾರಣೆ ಮಾಡಿ ಏಕರೂಪದ ಕಾರ್ಯಕ್ರಮ ರೂಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿತು.

ಈ ವೇಳೆ ಜಿಲ್ಲಾಧ್ಯಕ್ಷ ಶಿವರಾಜ ಬಿರಾದಾರ ಮಾತನಾಡಿ, ಜಿಲ್ಲೆಯ ಪ್ರೌಢಶಾಲಾ ಸಹ ಶಿಕ್ಷಕರು ಶೈಕ್ಷಣಿಕ ಗುಣಮಟ್ಟ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಆದರೆ, ಆಸರೆ, ಮರು ಸಿಂಚನ ಎಂಬಿತ್ಯಾದಿ ಕಾರ್ಯಕ್ರಮಗಳ ದಾಖಲೀಕರಣವೇ ಹೊರೆಯಾಗಿದೆ. ಅಧ್ಯಯನ ಹಾಗೂ ಬೋಧನೆಗೆ ಸಮಯವಿಲ್ಲದಂತಾಗಿದೆ. ಈ ರೀತಿಯ ಹಲವಾರು ಕಾರ್ಯಕ್ರಮಗಳ ದಾಖಲೀಕರಣಕ್ಕೆ ಸಮಯ ವ್ಯರ್ಥವಾಗುವ ಬದಲು ಈ ಎಲ್ಲ ಕಾರ್ಯಕ್ರಮಗಳನ್ನು ಸಮೀಕರಿಸಿ ಒಂದೇ ಯೋಜನೆಯಡಿ ರೂಪಿಸಿದರೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪದ್ಧತಿಯಲ್ಲಿ ವಿವಿಧ ಹಂತಗಳ ಪರೀಕ್ಷೆಗಳ ಬದಲು ಹಿಂದಿನಂತೆ 2 ಪರೀಕ್ಷೆಗಳನ್ನು ಆಯೋಜಿಸುವುದು. ಖಾಸಗಿ ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವುದು. ರಾಜ್ಯದಲ್ಲಿಯ ಉನ್ನತೀಕರಿಸಿದ ಪ್ರೌಢಶಾಲೆ ಮತ್ತು ಆರ್‌ಎಂಎಸ್‌ಎ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ನಿಯಮಿತವಾಗಿ ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಕ್ಕೊತ್ತಾಯ ಮಂಡಿಸಿದರು.

ಜಿಲ್ಲಾಕಾರ್ಯದರ್ಶಿ ಮಲ್ಲನಗೌಡ ಹಡಲಗೇರಿ, ಕೋಶಾಧ್ಯಕ್ಷ ಎಸ್.ಜಿ.ಹಂಚಿನಾಳ, ಅಧೀಕ್ಷಕ ದಶರಥ ಸಲಗರಕರ, ಐ.ಎಫ್.ಅರಳಿಮಟ್ಟಿ, ಅಡಿವೆಪ್ಪ ಬ್ರಿಜೇಷಪುರ, ಜಿ.ಎಂ.ಪಾಟೀಲ, ಎಸ್.ಬಿ.ಬಿರಾದಾರ, ವಿನೋದ ಹಂಚಿನಾಳ, ವಿನೋದ ಕಾಖಂಡಕಿ ಸೇರಿದಂತೆ ಇತರರು ಉಪಸ್ಥಿತರಿದ್ದರು.