ಶಿಕ್ಷಕರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೆ ಮೊಬೈಲ್ ಆ್ಯಪ್‌ಗಳ ಮೂಲಕ ಹಾಜರಾತಿ ದಾಖಲಿಸುವಂತೆ ಒತ್ತಡ ಹೇರುತ್ತಿರುವುದು ಶೈಕ್ಷಣಿಕ ಗುಣಮಟ್ಟಕ್ಕೆ ಮಾರಕವಾಗಿದೆ.
ಕನ್ನಡಪ್ರಭ ವಾರ್ತೆ ಮುಂಡರಗಿ
ಶಿಕ್ಷಕರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೆ ಮೊಬೈಲ್ ಆ್ಯಪ್‌ಗಳ ಮೂಲಕ ಹಾಜರಾತಿ ದಾಖಲಿಸುವಂತೆ ಒತ್ತಡ ಹೇರುತ್ತಿರುವುದು ಶೈಕ್ಷಣಿಕ ಗುಣಮಟ್ಟಕ್ಕೆ ಮಾರಕವಾಗಿದೆ. ಇಲಾಖೆ ತಕ್ಷಣವೇ ಆನ್‌ಲೈನ್ ಹಾಗೂ ಬೋಧನೇತರ ಕೆಲಸಗಳ ಹೊರೆಯಿಂದ ಶಿಕ್ಷಕರನ್ನು ಮುಕ್ತಗೊಳಿಸಬೇಕು ಎಂದು ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಗುರಿಕಾರ ಹೇಳಿದರು.ಪಟ್ಟಣದ ಎಂ.ಸಿ.ಎಸ್. ಶಾಲೆಯ ಆವರಣದಲ್ಲಿ ಶನಿವಾರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮುಂಡರಗಿ ತಾಲೂಕು ಘಟಕ ಹಮ್ಮಿಕೊಂಡಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ, ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಹಾಗೂ ಧನ್ಯತಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಂದು ಶಾಲೆಗೂ ಕೊಠಡಿಗೆ ಒಬ್ಬ ಶಿಕ್ಷಕ, ವಿಷಯವಾರು ಶಿಕ್ಷಕರು ಹಾಗೂ ಅಧಿಕೃತ ಮುಖ್ಯೋಪಾಧ್ಯಾಯರನ್ನು ನೇಮಿಸುವುದು ಸರ್ಕಾರದ ಆದ್ಯ ಕರ್ತವ್ಯ. ಆದರೆ ಶಾಲೆಗಳಲ್ಲಿ ಅಗತ್ಯ ಸೌಲಭ್ಯ ನೀಡದೆ, ಶಿಕ್ಷಕರು ಶಾಲೆಗೆ ತಲುಪಿದ ತಕ್ಷಣ ಕ್ಯಾಮರಾ ಮುಂದೆ ನಿಂತು ಹಾಜರಾತಿ ಹಾಕಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಜತೆಗೆ ಮಕ್ಕಳ ನಿರಂತರ ಹಾಜರಾತಿ, ಘಟಕ ಪರೀಕ್ಷೆಗಳ ಅಂಕ ನಮೂದು ಎಂದು ಆನ್‌ಲೈನ್ ಕೆಲಸಗಳಲ್ಲೇ ಕಾಲ ಕಳೆಯಬೇಕಾಗಿದೆ. ನೆಟ್‌ವರ್ಕ್ ಸಮಸ್ಯೆ ನಡುವೆ ದಿನದ ಒಂದೂವರೆಯಿಂದ ಎರಡು ಗಂಟೆ ಕೇವಲ ತಾಂತ್ರಿಕ ಕಾರ್ಯಗಳಿಗೇ ವ್ಯರ್ಥವಾಗುತ್ತಿದ್ದು, ಪಾಠ ಮಾಡಲು ಸಮಯವೇ ಸಿಗದಂತಾಗಿದೆ. ಇಲಾಖೆ ಈ ನೀತಿಯನ್ನು ಪುನರ್ ಪರಿಶೀಲಿಸಬೇಕು ಎಂದರು.ಶಾಲಾ ಸಮಯದ ನಂತರ ಮನೆಗೆ ಬಂದರೂ ಆನ್‌ಲೈನ್ ಕೆಲಸಗಳನ್ನು ಮಾಡಬೇಕಾದ ಅನಿವಾರ್ಯತೆ ಇದೆ. ಇದು ಶಿಕ್ಷಕರ ಮಾನಸಿಕ ನೆಮ್ಮದಿಯನ್ನು ಕಸಿದುಕೊಂಡಿದೆ ಎಂದ ಗುರಿಕಾರ, ಸೇವೆಯಲ್ಲಿರುವ ಶಿಕ್ಷಕರಿಗೆ ಟಿಇಟಿ (ಶಿಕ್ಷಕರ ಅರ್ಹತಾ ಪರೀಕ್ಷೆ) ಕಡ್ಡಾಯಗೊಳಿಸಿರುವುದು ಅವೈಜ್ಞಾನಿಕ. ಈಗಾಗಲೇ ಬಿಇಡಿ, ಡಿಇಡಿ ಮತ್ತು ಸಿಇಟಿ ತೇರ್ಗಡೆಯಾಗಿ ಸೇವೆಗೆ ಸೇರಿದವರಿಗೆ ಮತ್ತೆ ಪರೀಕ್ಷೆ ನಡೆಸುವುದು ಸರಿಯಲ್ಲ. ಈ ಆದೇಶದ ವಿರುದ್ಧ ಅಖಿಲ ಭಾರತ ಶಿಕ್ಷಕರ ಫೆಡರೇಷನ್ ವತಿಯಿಂದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ ಎಂದರು.
ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಆರ್.ಎಸ್. ಬುರಡಿ ಮಾತನಾಡಿ, ಸರ್ಕಾರಿ ಶಾಲೆಗಳು ಮತ್ತು ವಸತಿ ನಿಲಯಗಳು ಕೇವಲ ಶಿಕ್ಷಣ ನೀಡುವ ಕೇಂದ್ರಗಳಲ್ಲ, ಅವು ಸಾಮಾಜಿಕ ನ್ಯಾಯ ಒದಗಿಸುವ ದೇವಾಲಯಗಳು. ಸರ್ಕಾರಿ ಶಾಲೆಯಲ್ಲಿ ಓದಿದ ಅನೇಕರು ಇಂದು ಉನ್ನತ ಹುದ್ದೆಗಳಲ್ಲಿದ್ದಾರೆ. ಶಿಕ್ಷಕರ ಜವಾಬ್ದಾರಿಯುತ ಕರ್ತವ್ಯದಿಂದ ಸರ್ಕಾರಿ ಶಾಲೆಗಳನ್ನು ಇನ್ನಷ್ಟು ಬಲಪಡಿಸಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.ಪ್ರ.ಶಾ.ಶಿ.ಸಂ.ಜಿಲ್ಲಾಧ್ಯಕ್ಷ ವಿ.ಎಂ. ಹಿರೇಮಠ ಮಾತನಾಡಿದರು.
ತಾಲೂಕಾ ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಎಂ.ಪಿ. ಶೀರನಹಳ್ಳಿ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ, ನೂತನ ಪದಾಧಿಕಾರಿಗಳ ಪದಗ್ರಹಣ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಜರುಗಿತು. ಈ ಸಂದರ್ಭ ನಾಗರಾಜ ಹಳ್ಳಿಕೇರಿ, ಆರ್.ಸಿ. ಪಟ್ಟೇದ, ಎ.ಡಿ. ಬಂಡಿ, ಎಸ್.ಆರ್. ಬಂಡಿ, ಬಿ.ಕೆ. ಹಡಪದ, ವಿ.ಆರ್. ಹೂಗಾರ, ಡಾ. ನಿಂಗು ಸೊಲಗಿ, ಎಂ.ವಿ. ಪಾಟೀಲ, ಎನ್.ಎಂ. ಕುಕನೂರ, ಜಗದೀಶ ಗುಳ್ಳಾರಿ, ಮೋಹನ್ ಮೆಣಸಿನಕಾಯಿ, ಶಂಕರ್ ಸರ್ವದೆ, ವಿ.ಆರ್. ಕುರಡಗಿ, ಸಂಗಮೇಶ ನಿಡಗುಂದಿ, ಎಚ್.ಜೆ. ಪವಾರ, ಎಂ.ಎಚ್. ಬಿಚಗತ್ತಿ, ಎಸ್.ಕೆ. ನಿಂಬಣಗೌಡರ್, ಮಧುಮತಿ ಕರ್ಜಗಿ, ಸುಮಾ ಸೊರಟೂರ, ಜೆ.ಬಿ. ತಿಮ್ಮಾಪೂರ, ವಿಜಯಕುಮಾರ ಚವಡಿ, ಎಂ.ಎಂ. ಬಂಡಿ, ಬಸವರಾಜ ಮೇಗಲಮನಿ, ಹನುಮರಡ್ಡಿ ಇಟಗಿ ಉಪಸ್ಥಿತರಿದ್ದರು. ವಿಶ್ವನಾಥ ಉಳ್ಳಾಗಡ್ಡಿ ಸ್ವಾಗತಿಸಿ, ಸಂಘದ ತಾಲೂಕಾ ಪ್ರ.ಕಾರ್ಯದರ್ಶಿ ಎಸ್.ಡಿ. ಬಸೇಗೌಡ್ರ ನಿರೂಪಿಸಿದರು.