ಸಾರಾಂಶ
ಹಿರಿಯೂರು ನಗರದ ಕೃಷಿ ಸಹಾಯಕರ ಕಚೇರಿ ಮೂಲಕ ಕೃಷಿ ಸಚಿವರಿಗೆ ಮನವಿ ಸಲ್ಲಿಸಿ ಬಿತ್ತನೆ ಬೀಜದ ದರ ಇಳಿಸಿ ಬೆಳೆನಷ್ಟ ಪರಿಹಾರವನ್ನು ಸಮರ್ಪಕವಾಗಿ ವಿತರಿಸಲು ರೈತ ಸಂಘ ಒತ್ತಾಯಿಸಿತು.
ಕನ್ನಡಪ್ರಭ ವಾರ್ತೆ ಹಿರಿಯೂರು
ಬಿತ್ತನೆ ಬೀಜದ ದರವನ್ನು ಇಳಿಸಿ ಬೆಳೆನಷ್ಟ ಪರಿಹಾರವನ್ನು ಸಮರ್ಪಕವಾಗಿ ವಿತರಿಸಿ ಎಂದು ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಶುಕ್ರವಾರ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಮೂಲಕ ಕೃಷಿ ಸಚಿವರಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕೆಸಿ ಹೊರಕೇರಪ್ಪ ಮಾತನಾಡಿ, ಜಿಲ್ಲೆ ಸೇರಿದಂತೆ ಇಡೀ ರಾಜ್ಯದಲ್ಲಿ ಬರಗಾಲ ಆವರಿಸಿದ್ದು, ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಈ ಹಿಂದಿನ ಸರ್ಕಾರ ಬೆಳೆನಷ್ಟ ಅನುಭವಿಸಿದ್ದ ರೈತರಿಗೆ ಯಾವುದೇ ತಾರತಮ್ಯವಿಲ್ಲದೆ ಬರ ಪರಿಹಾರದ ಹಣವನ್ನು ರೈತರ ಖಾತೆಗೆ ಜಮಾ ಮಾಡಿತ್ತು. ಆದರೆ ಈಗ ಕೊಳವೆ ಬಾವಿ ಇರುವ ರೈತರಿಗೆ, ನೀರಾವರಿ ಪ್ರದೇಶದ ರೈತರಿಗೆ ಬೆಳೆನಷ್ಟ ಪರಿಹಾರವನ್ನು ನೀಡದೇ ತಾರತಮ್ಯ ಮಾಡಲಾಗಿದೆ. ರೈತರು ಟ್ಯಾಂಕರ್ ಮೂಲಕ ನೀರು ಹಾಯಿಸಿ ಲಕ್ಷಾಂತರ ಹಣ ಖರ್ಚು ಮಾಡಿಯೂ ತೋಟಗಾರಿಕೆ ಬೆಳೆಗಳಿಂದ ನಷ್ಟ ಅನುಭವಿಸಿದ್ದಾರೆ. ಹಾಗಾಗಿ ಸರ್ಕಾರ ಯಾವುದೇ ತಾರತಮ್ಯ ಮಾಡದೇ ರೈತರ ಖಾತೆಗೆ ಬೆಳೆನಷ್ಟ ಹಣ ಜಮಾ ಮಾಡಬೇಕು. ಎಂದರಲ್ಲದೆ, ಕೂಡಲೇ ಸರ್ಕಾರ ಬಿತ್ತನೆಬೀಜ ಮತ್ತು ಪೈಪ್ ನ ಬೆಲೆಯನ್ನು ಇಳಿಸಬೇಕು. ಇಲ್ಲದಿದ್ದರೆ ಜಿಲ್ಲೆಯ ಎಲ್ಲಾ ಕೃಷಿ ಇಲಾಖೆಗಳಿಗೂ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಬಿಓ ಶಿವಕುಮಾರ್,ತಾಲೂಕು ಯುವ ಘಟಕದ ಅಧ್ಯಕ್ಷ ಚೇತನ್ ಯಳನಾಡು,ತಾಲೂಕು ಕಾರ್ಯದರ್ಶಿ ದಸ್ತಗಿರಿ ಸಾಬ್,ಜಿಲ್ಲಾ ಸಂಘಟನಾ ಕಾರ್ಯದರ್ಶಿ ಲಕ್ಷ್ಮೀಕಾಂತ್,ನಾಗರಾಜ್, ರುದ್ರಪ್ಪ, ಗಿರೀಶ್, ಮುನಿಸ್ವಾಮಿ, ಮಾರುತಿ, ಚಿಕ್ಕ ತಿಮ್ಮಯ್ಯ, ವೀರೇಶ್ ಮುಂತಾದವರು ಹಾಜರಿದ್ದರು.