ಸಾರಾಂಶ
ಗಾಂಧಿ ವೃತ್ತದಲ್ಲಿ ಕುಡಿವ ನೀರಿನ ಅರವಟಿಕೆ ; ಬಿಜೆಪಿ ಮುಖಂಡ ಉಮೇಶ್ ಕಾರಜೋಳ ಚಾಲನೆ
ಕನ್ನಡಪ್ರಭ ವಾರ್ತೆ, ಚಿತ್ರದುರ್ಗಪರಿಸರದಲ್ಲಿ ತಂಪಾದ ವಾತಾವರಣ ಇರಬೇಕಾದರೆ ಪ್ರತಿಯೊಬ್ಬರು ಗಿಡ-ಮರ ನೆಟ್ಟು ಉಷ್ಣಾಂಶ ಕಡಿಮೆ ಮಾಡಬೇಕೆಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ ಮನವಿ ಮಾಡಿದರು.
ಇಲ್ಲಿನ ಗಾಂಧಿ ವೃತ್ತದಲ್ಲಿ ಎರಡು ಮಣ್ಣಿನ ಅರವಟಿಕೆಗಳನ್ನು ಇರಿಸಿ ಸಾರ್ವಜನಿಕರಿಗೆ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಿ ಮಾತನಾಡಿದ ಅವರು, ಬಿಸಿಲಿನ ಝಳ ದಿನದಿಂದ ದಿನಕ್ಕೆ ಏರುತ್ತಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಸಿಗುವುದು ಕಷ್ಟ. ಹಾಗಾಗಿ ಅರವಟಿಕೆಗಳ ಮೂಲಕ ತಣ್ಣನೆಯ ನೀರನ್ನು ಮಳೆಗಾಲ ಆರಂಭವಾಗುವತನಕ ಪ್ರತಿನಿತ್ಯವೂ ಪೂರೈಸಲಾಗುವುದು. ನೀರು ಬರಿ ಜಲವಲ್ಲ. ಅದೊಂದು ಜೀವ ಜಲ ಹಾಗಾಗಿ ಹನಿ ನೀರನ್ನು ವ್ಯರ್ಥ ಮಾಡದೆ ಮಿತವಾಗಿ ಬಳಸುವಂತೆ ಸಾರ್ವಜನಿಕರಲ್ಲಿ ವಿನಂತಿಸಿದರು.ಆರಂಭದಲ್ಲಿ ಎರಡು ಕಡೆ ಅರವಟಿಕೆ ಇರಿಸಲಾಗಿದೆ. ನೀರಿನ ಲಭ್ಯತೆ ಆಧರಿಸಿ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಹಾಗೂ ಗ್ರಾಮೀಣ ಭಾಗಗಳಲ್ಲಿಯೂ ಅರವಟಿಕೆಗಳ ಮೂಲಕ ಶುದ್ದ ಕುಡಿವ ನೀರು ಒದಗಿಸಲಾಗುವುದು. ಬಿಸಿಲ ತೀವ್ರತೆ ಹೆಚ್ಚಿರುವುದರಿಂದ ಪಶು, ಪಕ್ಷಿಗಳಿಗೂ ನೀರಿನ ದಾಹ ತಣಿಸಲು ವಿಶೇಷ ಅರವಟಿಕೆ ಯೋಜನೆ ರೂಪಿಸಲಾಗುವುದು ಎಂದರು.
ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಭದ್ರಿನಾಥ್ ಮಾತನಾಡಿ, ಬೇಸಿಗೆಯಲ್ಲಿ ಪ್ರತಿನಿತ್ಯ ನೀರಿನ ಅರವಟಿಕೆ ಮೂಲಕ ಜನತೆಗೆ ಶುದ್ದ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಿರುವ ಉಮೇಶ್ ಕಾರಜೋಳರವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಆದರ್ಶ್, ಸುದರ್ಶನ್, ಅರುಣ್, ನಾಗರಾಜ್‍ಬೇದ್ರೆ ಇದ್ದರು.