ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡಿ

| Published : Dec 25 2024, 12:48 AM IST

ಸಾರಾಂಶ

ಭೂಮಿಗೆ ವಿಷ ಉಣಿಸುವ ಜತೆಗೆ ನಾವು ಸಹ ವಿಷದ ಸೇವನೆ ಮಾಡುತ್ತಿದ್ದೇವೆ. ಇದಕ್ಕೆ ಕಾರಣ ರಾಸಾಯನಿಕ ಗೊಬ್ಬರ. ಇದರ ಹೆಚ್ಚಾದ ಬಳಕೆಯಿಂದ ಇಂತಹ ಸಂದಿಗ್ಧ ಸ್ಥಿತಿಗೆ ನಾವು ಬಂದಿದ್ದೇವೆ

ನರೇಗಲ್ಲ: ವಿದ್ಯಾರ್ಥಿಗಳು ತಮ್ಮ ಪಾಲಕರಿಗೆ ಸಾವಯವ ಕೃಷಿ ಮಾಡಲು ಒತ್ತಾಯ ಮಾಡಬೇಕು ಎಂದು ಸಾವಯವ ಕೃಷಿ ತಜ್ಞ ವೀರೇಶ ನೇಗಲಿ ಹೇಳಿದರು.ಸಮೀಪದ ಕೋಟುಮಚಗಿಯ ಶ್ರೀ ಸೋಮೇಶ್ವರ ಪ್ರೌಢಶಾಲೆಯಲ್ಲಿ ತಂಬಾಕು ಮುಕ್ತ ದಿನಾಚರಣೆ, ಸಾವಯವ ಕೃಷಿ ಮತ್ತು ರಾಷ್ಟ್ರೀಯ ಗಣಿತ ದಿನಾಚರಣೆಯಲ್ಲಿ ಅವರು ಮಾತನಾಡಿದರು. ರೈತರು ಸಾವಯವ ಗೊಬ್ಬರಕ್ಕಿಂತ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಹೆಚ್ಚು ಮಾಡುತ್ತಿದ್ದಾರೆ. ಇದು ಭೂಮಿಯ ಫಲವತ್ತತೆಯನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದರು.

ಭೂಮಿಗೆ ವಿಷ ಉಣಿಸುವ ಜತೆಗೆ ನಾವು ಸಹ ವಿಷದ ಸೇವನೆ ಮಾಡುತ್ತಿದ್ದೇವೆ. ಇದಕ್ಕೆ ಕಾರಣ ರಾಸಾಯನಿಕ ಗೊಬ್ಬರ. ಇದರ ಹೆಚ್ಚಾದ ಬಳಕೆಯಿಂದ ಇಂತಹ ಸಂದಿಗ್ಧ ಸ್ಥಿತಿಗೆ ನಾವು ಬಂದಿದ್ದೇವೆ. ಇದನ್ನು ತಪ್ಪಿಸಲು ನಾವು ಅನಿವಾರ್ಯವಾಗಿ ಸಾವಯವ ಕೃಷಿಯೆಡೆಗೆ ಗಮನ ಹರಿಸಬೇಕು ಎಂದು ನೇಗಲಿ ಹೇಳಿದರು.

ತಂಬಾಕು ಸೇವನೆ ದೇಹದ ಮೇಲೆ ಏನೆಲ್ಲ ಪರಿಣಾಮ ಬೀರುತ್ತದೆ ಎಂಬುದರ ಕುರಿತು ವಿಜ್ಞಾನ ಶಿಕ್ಷಕ ಕೆ.ಆರ್. ಹಾಳಕೇರಿ ಪ್ರಾಯೋಗಿಕವಾದ ವಿವರಣೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕಿ ವಿ.ಎಸ್. ಚಲವಾದಿ ಮಾತನಾಡಿ, ಗಣಿತಜ್ಞ ರಾಮಾನುಜನ್ ಅವರ ಜೀವನ ಚರಿತ್ರೆಯನ್ನು ಓದಿ, ನೀವು ಸಹ ಶ್ರೇಷ್ಠ ಗಣಿತಜ್ಞರಾಗಲು ಪ್ರಯತ್ನಿಸಿ ಎಂದರು. ಶಿಕ್ಷಕಿ ಟಿ.ಜಿ. ಕಂಬಾಳಿಮಠ ಕಾರ್ಯಕ್ರಮ ನಿರೂಪಿಸಿದರು. ಆರ್.ಡಿ. ಜಗ್ಗಲ ಸ್ವಾಗತಿಸಿದರು. ರಾಜೇಶ್ವರಿ ನೀರಲಗಿ ವಂದಿಸಿದರು.