ಗ್ರಾಮ ಆಡಳಿತಾಧಿಕಾರಿಗಳ ಕೆಲಸ ಒತ್ತಡ ಕಡಿಮೆ ಮಾಡಿ

| Published : Sep 27 2024, 01:29 AM IST

ಸಾರಾಂಶ

ಗೂಗಲ್ ಕ್ರೋಮ್ ಬುಕ್, ಲ್ಯಾಪ್‌ಟಾಪ್, ಟೇಬಲ್, ಕುರ್ಚಿ ಮತ್ತು ಅಲ್ಮೇರಾ ನೀಡಬೇಕು. ಪದೋನ್ನತಿ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗಿದೆ

ಶಿರಹಟ್ಟಿ: ತಾಲೂಕಿನ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಗಳು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಹಸೀಲ್ದಾರ್‌ ಕಚೇರಿ ಆವರಣದಲ್ಲಿ ಗುರುವಾರದಿಂದ ಕೈಗೆ ಕಪ್ಪುಪಟ್ಟಿ ಕಟ್ಟಿಕೊಂಡು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ.

ಈ ವೇಳೆ ಗ್ರಾಮ ಲೆಕ್ಕಿಗರ ತಾಲೂಕು ಸಂಘದ ಅಧ್ಯಕ್ಷ ನಾಗರಾಜ ಚೊಳಮ್ಮನವರ, ಉಪಾಧ್ಯಕ್ಷ ಪ್ರವೀಣ ಬರಡಿ ಮಾತನಾಡಿ, ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಕಾರ್ಯಕಾರಿಣಿ ಸಭೆಯ ನಿರ್ಣಯದಂತೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೊಬೈಲ್ ಆ್ಯಪ್‌ಗಳಲ್ಲಿ ಒಂದೇ ಬಾರಿಗೆ ಪ್ರಗತಿ ಸಾಧಿಸುವಂತೆ ಒತ್ತಡ ಹೇರಿರುವುದರಿಂದ ಗ್ರಾಮ ಆಡಳಿತ ಅಧಿಕಾರಿಗಳಿಗೆ ಅಧಿಕ ಕೆಲಸದ ಒತ್ತಡ ಉಂಟಾಗಿದೆ. ಅಧಿಕ ಕೆಲಸದ ಒತ್ತಡದಿಂದಾಗಿ ನೌಕರರು ಹೃದಯಾಘಾತದಿಂದ ಮರಣ ಹೊಂದಿದ್ದಾರೆ. ಕೆಲವು ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ಕೆಲಸಕ್ಕೆ ರಾಜಿನಾಮೆ ಸಲ್ಲಿಸುವ ಹಂತಕ್ಕೆ ತಲುಪಿದ್ದಾರೆ ಎಂದು ದೂರಿದರು. ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೂಲಭೂತ ಸೌಲಭ್ಯಗಳಾದ ನಿರ್ದಿಷ್ಟ ಕಚೇರಿ, ಉತ್ತಮ ಗುಣಮಟ್ಟದ ಮೊಬೈಲ್, ಸಿಯುಜಿ ಸಿಮ್ ಮತ್ತು ಡೇಟಾ, ಗೂಗಲ್ ಕ್ರೋಮ್ ಬುಕ್, ಲ್ಯಾಪ್‌ಟಾಪ್, ಟೇಬಲ್, ಕುರ್ಚಿ ಮತ್ತು ಅಲ್ಮೇರಾ ನೀಡಬೇಕು. ಪದೋನ್ನತಿ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗಿದೆ ಎಂದರು.

ಸರ್ಕಾರದ ವತಿಯಿಂದ ಕನಿಷ್ಠ ಸೌಲಭ್ಯಗಳನ್ನು ನೀಡದೆ, ಕೆಲಸವನ್ನು ಮಾತ್ರ ಮಾಡಿ ಎಂದು ಹೇಳುತ್ತಿರುವುದು ನಮಗೆ ಮಾಡುತ್ತಿರುವ ಅನ್ಯಾಯವಾಗಿದೆ. ಅದಕ್ಕಾಗಿಯೇ ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಸರ್ಕಾರಿ ರಜಾ ದಿನಗಳಲ್ಲಿಯೂ ನಮಗೆ ಕೆಲಸ ಮಾಡಲು ಹೇಳುತ್ತಾರೆ. ಈಗ ಎಲ್ಲ ಕೆಲಸವನ್ನು ಆನ್‌ಲೈನ್ ತಂತ್ರಾಂಶಗಳ ಮೂಲಕ ಮಾಡಬೇಕು. ಅದಕ್ಕೆ ಬೇಕಾದ ಮೋಬೈಲ್ ಲ್ಯಾಪ್‌ಟಾಪ್‌ಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ನಮ್ಮಲ್ಲಿ ಕೂಡಾ ಪತಿ-ಪತ್ನಿಯರ ವರ್ಗಾವಣೆಗೆ ಅವಕಾಶ ಮಾಡಿಕೊಡಬೇಕು. ಗ್ರಾಮ ಸಹಾಯಕರ ಹುದ್ದೆಯನ್ನು ಕಾಯಂ ಮಾಡಿ ಅವರಿಗೂ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಪರಶುರಾಮ ತಳವಾರ, ಶರಣಬಸಪ್ಪ ಮೈನಾಳ, ಚನ್ನವೀರಸ್ವಾಮಿ ಸಿದ್ಧಾಂತಿಮಠ, ಬಿ.ಸಿ. ನಂದಗಾವಿ, ಸಿ.ಸಿ. ನಾಗನೂರ, ಶಂಭುಲಿಂಗಯ್ಯ ಹೆಬ್ಬಾಳಮಠ, ನಾಗಪ್ಪ ರಾಠೋಡ, ಪಿ.ಟಿ. ಬಾರಕೇರ, ಪಿ.ಬಿ. ಗೋರೆಖಾನ, ಲಕ್ಷ್ಮಣ ಲಮಾಣಿ, ಎಸ್.ಎಚ್. ಮುಲ್ಲಾ, ಬಿ.ಎಫ್. ಜಿನಗಿ, ಶ್ರುತಿ ಮಡ್ಡಿ, ರಾಧಾ ದೇಸಾಯಿಪಟ್ಟಿ, ಎಲ್. ಶಿವಲೀಲಾ, ಸಿ.ಪಿ. ತಳಕೇರಿ ಉಪಸ್ಥಿತರಿದ್ದರು.