ಚಿಕಿತ್ಸೆ ಜೊತೆಗೆ ರೋಗಿಗಳ ಮನೋಬಲ ಹೆಚ್ಚಿಸಿ

| Published : Jul 23 2025, 12:30 AM IST

ಚಿಕಿತ್ಸೆ ಜೊತೆಗೆ ರೋಗಿಗಳ ಮನೋಬಲ ಹೆಚ್ಚಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ವೈದ್ಯರು ಮಾಡಿದ ತಪ್ಪು ಒಂದು ಜೀವ ಕಸಿಯಬಹುದು. ವೈದ್ಯರನ್ನು ಹಲವರು ದೇವರ ಸ್ಥಾನದಲ್ಲಿ ನಂಬುತ್ತಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ವೈದ್ಯರು ಚಿಕಿತ್ಸೆ ಜೊತೆಗೆ ರೋಗಿಗಳ ಮನೋಬಲ ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಉಷಾರಾಣಿ ಸಲಹೆ ನೀಡಿದರು.

ಮೈಸೂರು ವಕೀಲರ ಸಂಘ ಹಾಗೂ ಸುಯೋಗ ಆಸ್ಪತ್ರೆ ಸಹಯೋಗದಲ್ಲಿ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಹೃದಯ ಮತ್ತು ಸಕ್ಕರೆ ಕಾಯಿಲೆ ಉಚಿತ ತಪಾಸಣೆ ಹಾಗೂ ಅರಿವಿನ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ವೈದ್ಯರು ಮಾಡಿದ ತಪ್ಪು ಒಂದು ಜೀವ ಕಸಿಯಬಹುದು. ವೈದ್ಯರನ್ನು ಹಲವರು ದೇವರ ಸ್ಥಾನದಲ್ಲಿ ನಂಬುತ್ತಾರೆ. ಅವರ ಸಲಹೆಗಳಿಂದಲೇ ಅರ್ಧ ರೋಗ ಕಡಿಮೆಯಾದ ಅನೇಕ ಉದಾಹರಣೆ ಇದೆ. ಹೀಗಾಗಿ, ಚಿಕಿತ್ಸೆ ಜೊತೆಗೆ ಮನೋಬಲ ಹೆಚ್ಚಿಸಬೇಕು ಎಂದು ಹೇಳಿದರು.

ಒತ್ತಡ ಹೆಚ್ಚಿದೆ

ಸುಯೋಗ ಆಸ್ಪತ್ರೆಯ ಅಧ್ಯಕ್ಷ ಡಾ.ಎಸ್‌.ಪಿ. ಯೋಗಣ್ಣ ಮಾತನಾಡಿ, ವಕೀಲ ವೃತ್ತಿಯಲ್ಲಿ ಒತ್ತಡ ಹೆಚ್ಚಿದೆ. ಒತ್ತಡ ಹೃದಯಾಘಾತಕ್ಕೆ ಪ್ರಮುಖ ಕಾರಣ. ವಕೀಲರು, ನ್ಯಾಯಾಧೀಶರ ವೃತ್ತಿಯಲ್ಲಿ ಒತ್ತಡ ಕಡಿಮೆ ಮಾಡಬಲ್ಲ ದೊಡ್ಡ ಬದಲಾವಣೆ ಅಗತ್ಯವಿದೆ ಎಂದರು.

ಹೃದಯಾಘಾತ ತಡೆಯಲು ನಾವೇ ಸ್ವಯಂ ವೈದ್ಯರಾಗಬೇಕು. ನಾವು ಗಾಡಿಗೆ ಪೆಟ್ರೋಲ್ ಹಾಕಲು ಯೋಚಿಸುತ್ತೇವೆ. ದೇಹಕ್ಕೆ ಶಕ್ತಿ ನೀಡುವ ಆಹಾರದ ಸೇವಿಸುವಾಗ ಚಿಂತಿಸುವುದಿಲ್ಲ. ಇದರಿಂದ ಆಹಾರದ ಸಮಸ್ಯೆ ಹೆಚ್ಚುತ್ತಿದೆ ಎಂದು ಅವರು ಎಚ್ಚರಿಸಿದರು.

ವೈದ್ಯರಿಗೆ ತಂತ್ರಜ್ಞಾನದೊಂದಿಗೆ ಸಂವಹನ ಸಾಮರ್ಥ್ಯ ಬೇಕು. ರೋಗಿ ಹಾಗೂ ವೈದ್ಯರ ನಡುವಿನ ಸಂಬಂಧವು ವಿಜ್ಞಾನ ಲೋಕವನ್ನೂ ವಿಸ್ಮಯಗೊಳಿಸುತ್ತದೆ. ವೈದ್ಯಕೀಯ ಕ್ಷೇತ್ರ ವಾಣಿಜ್ಯಮಯವಾದ ಬಳಿಕ ಈ ಸಂಬಂಧ ಕ್ಷೀಣಿಸುತ್ತಿದೆ. ವೈದ್ಯರಿಗೆ ತಂತ್ರಜ್ಞಾನದೊಂದಿಗೆ ಮಾತುಕತೆ ಸಾಮರ್ಥ್ಯ ಇರಬೇಕು. ವೈದ್ಯನ ಕೆಲಸಕ್ಕೆ ಸ್ಥಾಪಿತ ಸಿದ್ಧಾಂತ ಇಲ್ಲ ಅನುಭವ, ವಿಮರ್ಶೆಯಿಂದ ಕೆಲಸ ಮಾಡುತ್ತಾನೆ ಎಂದರು.

ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್‌. ಲೋಕೇಶ್‌, ಕಾರ್ಯದರ್ಶಿ ಎ.ಜಿ. ಸುಧೀರ್‌, ಉಪಾಧ್ಯಕ್ಷ ಎಂ.ವಿ. ಚಂದ್ರಶೇಖರ್‌, ಸುಯೋಗ್‌ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಸುಯೋಗ್‌ ಯೋಗಣ್ಣ ಮೊದಲಾದವರು ಇದ್ದರು.