ಸಾರಾಂಶ
ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯ ಹಿರಿಯ ಪ್ರಾಥಮಿಕ ವಿದ್ಯಾರ್ಥಿಗಳಿಗೆ ‘ಮಾನಸಿಕ ತುಮುಲಗಳು’ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಖ್ಯಾತ ಪ್ರಸೂತಿ ತಜ್ಞೆ ಡಾ.ರಾಜಲಕ್ಷ್ಮೀ ಉಪನ್ಯಾಸ ನೀಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಇಂದು ಮಕ್ಕಳಿಂದ ಹಿಡಿದು ವೃದ್ಧರ ತನಕ ಸಮಾಜವು ರೀಲ್ಸ್‌ಗಳಲ್ಲಿ ಮುಳುಗಿದೆ. ಅವುಗಳನ್ನೇ ನಿಜವೆಂದು ನಂಬಿ, ಅನೇಕ ತೊಂದರೆಗಳನ್ನು ಅನುಭವಿಸುವಂತಾಗಿದೆ. ಮಕ್ಕಳು ಬೆಳೆಯುತ್ತಿದ್ದಂತೆ ಕೂತೂಹಲ ಮೂಡಿಸುವ, ಚಿತ್ತವನ್ನು ಕೆರಳಿಸುವ ಅನೇಕ ಸಂಗತಿಗಳು ದೃಶ್ಯಮಾಧ್ಯಮಗಳಿಂದ ಆಕರ್ಷಿತರಾಗುತ್ತಾರೆ. ಆದರೆ ರೀಲ್ಸ್‌ಗಳು ರಿಯಲ್ ಅಲ್ಲ, ಅವುಗಳಿಗಿಂತ ರಿಯಲ್ ಹೀರೊಗಳಾದ ರಾಷ್ಟ್ರ ನಾಯಕರ, ವಿಜ್ಞಾನಿಗಳ, ಸಂತರ, ಸಾಹಿಸಿಗಳ, ಕ್ರೀಡಾ ಸಾಧಕರ ಕಥೆಗಳನ್ನು ತಿಳಿಯಿರಿ, ಸಾಮಾಜಿಕ ಮಾಧ್ಯಮಗಳ ಒಳಿತನ್ನು ಮಾತ್ರ ಸ್ವೀಕರಿಸಿ. ದೇಹದ ಮತ್ತು ಮನಸ್ಸಿನ ಆರೋಗ್ಯವನ್ನು ಸದಾ ಕಾಪಾಡಿಕೊಳ್ಳಿ ಎಂದು ಖ್ಯಾತ ಪ್ರಸೂತಿ ತಜ್ಞೆ ಡಾ.ರಾಜಲಕ್ಷ್ಮೀ ಹೇಳಿದರು.ಅವರು ಇಲ್ಲಿನ ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯ ಹಿರಿಯ ಪ್ರಾಥಮಿಕ ವಿದ್ಯಾರ್ಥಿಗಳಿಗೆ ‘ಮಾನಸಿಕ ತುಮುಲಗಳು’ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.ಶಾಲೆಯ ಮುಖ್ಯಶಿಕ್ಷಕಿ ಆನ್ಸಿಲ್ಲಾ ಮಾತನಾಡಿ, ಕುರುಕಲು ತಿಂಡಿ ಮತ್ತು ಮೊಬೈಲ್‌ನಲ್ಲಿ ರೀಲ್ಸ್‌ಗಳು ಒಟ್ಟಿಗೆ ನಮ್ಮ ದೇಹ ಮತ್ತು ಮನಸ್ಸನ್ನು ಹಾಳು ಮಾಡುತ್ತದೆ. ಈ ಸಂಗತಿಗಳಿಂದ ದೂರವಿರಬೇಕು ಎಂದು ಕರೆ ನೀಡಿದರು.ಶಿಕ್ಷಕಿ ಮಿಲನ ಸ್ವಾಗತಿಸಿದರು. ವಿನೇಟ್ ಆಂದ್ರಾದೆ ನಿರೂಪಿಸಿ, ವಂದಿಸಿದರು.