ಪಟ್ಟಣದ ಕಾರ್ಮಿಕಭವನದಲ್ಲಿ ಪ್ರತಿಭಾವಂತ ಮಕ್ಕಳ ಪ್ರೋತ್ಸಾಹಕ್ಕಾಗಿ ಪ್ರತಿಬಿಂಬ ಹಾಗೂ ಹವ್ಯಕ ಪರಂಪರೆ ಉಳಿಸುವಲ್ಲಿ ಸಂಸ್ಕಾರೋತ್ಸವವನ್ನು ಮೇ ೨೩, ೨೪ ರಂದು ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಪಟ್ಟಣದ ಕಾರ್ಮಿಕಭವನದಲ್ಲಿ ಪ್ರತಿಭಾವಂತ ಮಕ್ಕಳ ಪ್ರೋತ್ಸಾಹಕ್ಕಾಗಿ ಪ್ರತಿಬಿಂಬ ಹಾಗೂ ಹವ್ಯಕ ಪರಂಪರೆ ಉಳಿಸುವಲ್ಲಿ ಸಂಸ್ಕಾರೋತ್ಸವವನ್ನು ಮೇ ೨೩, ೨೪ ರಂದು ಆಯೋಜಿಸಲಾಗಿದೆ ಎಂದು ತಾಲೂಕಾ ಹವ್ಯಕ ಸಂಘದ ಅಧ್ಯಕ್ಷ ಡಿ.ಶಂಕರ ಭಟ್ಟ, ಮಹಾಸಭೆಯ ನಿರ್ದೇಶಕ ಪ್ರಶಾಂತ ಪ್ರಮೋದ ಹೆಗಡೆ ಹೇಳಿದರು.

ಪಟ್ಟಣದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

೨೩ರಂದಂದು ಹವ್ಯಕ ಮಕ್ಕಳಿಗಾಗಿ ೬ ವರ್ಷದೊಳಗಿನವರಿಗೆ ಶ್ಲೋಕ ಪಠಣ, ಛದ್ಮವೇಷ, ಬಣ್ಣ ತುಂಬುವುದು; ೭-೧೨ ವರ್ಷ ವಯೋಮಿತಿಯವರಿಗೆ ಭಗವದ್ಗೀತಾ ಕಂಠಪಾಠ, ಚಿತ್ರಕಲೆ, ಏಕಪಾತ್ರಾಭಿನಯ; ೧೨-೧೮ ವರ್ಷ ವಯೋಮಾನದವರಿಗೆ ರಸಪ್ರಶ್ನೆ, ಆಶುಭಾಷಣ, ಚರ್ಚಾಸ್ಪರ್ಧೆ, ದೇಶಭಕ್ತಿಗೀತೆ ಹಾಗೂ ೧೮ ವರ್ಷ ಮೇಲ್ಪಟ್ಟವರಿಗೆ ಹವ್ಯಕ ಸಂಪ್ರದಾಯ ಗೀತೆ, ಚುಕ್ಕಿ ರಂಗೋಲಿ, ಜಾನಪದಗೀತೆ, ಹವಿಗನ್ನಡ ಆಶುಭಾಷಣ, ಹವಿರುಚಿ ಹಾಗೂ ಮಿಮಿಕ್ರಿ ಸ್ಪರ್ಧೆಗಳು ಸಮಯಮಿತಿಯಲ್ಲಿ ನಡೆಸಲಾಗುತ್ತದೆ ಎಂದು ವಿವರಿಸಿದರು.

೨೩ರಂದು ಬೆಳಗ್ಗೆ ೯.೩೦ಕ್ಕೆ ಶ್ರೀಮಾತಾ ಸಹಕಾರಿ ಸಂಸ್ಥೆಯ ಅಧ್ಯಕ್ಷ ಜಿ.ಎನ್. ಹೆಗಡೆ ಹಿರೇಸರ ಉದ್ಘಾಟಿಸುವರು. ಅಭ್ಯಾಗತರಾಗಿ ಯಲ್ಲಾಪುರ ಹವ್ಯಕ ಸಂಘದ ಅಧ್ಯಕ್ಷ ಡಿ.ಶಂಕರ ಭಟ್ಟ, ಅಂಕೋಲಾ ಹವ್ಯಕ ಸಂಘದ ಅಧ್ಯಕ್ಷ ಎಲ್.ಪಿ. ಭಟ್ಟ, ಸ್ವರ್ಣವಲ್ಲಿ ಮಾತೃಮಂಡಳಿ ನಗರಭಾಗೀ ಅಧ್ಯಕ್ಷೆ ಆಶಾ ಬಗನಗದ್ದೆ, ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಆರ್. ಭಟ್ಟ, ಗುಂದ ಸೀಮಾ ಪರಿಷತ್ ಅಧ್ಯಕ್ಷ ಡಿ.ಟಿ.ಹೆಗಡೆ, ಭಾಗವಹಿಸುವರು. ಮಹಾಸಭಾ ಉಪಾಧ್ಯಕ್ಷ ಶ್ರೀಧರ ಭಟ್ಟ ಕೆಕ್ಕಾರ ಅಧ್ಯಕ್ಷತೆ ವಹಿಸುವರು. ಸಮಾರೋಪ ಸಮಾರಂಭ ಮಹಾಸಭಾ ಉಪಾಧ್ಯಕ್ಷ ಆರ್.ಎಂ. ಹೆಗಡೆ ಬಾಳೆಸರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

೨೪ರಂದು ನಡೆಯುವ ಸಂಸ್ಕಾರೋತ್ಸವದಲ್ಲಿ ಬೆಳಗ್ಗೆ ೬.೩೦ರಿಂದ ಗಾಯತ್ರಿ ಹವನ, ಧನ್ವಂತರಿ ಹವನ, ಮಾತೆಯರಿಂದ ಕುಂಕುಮಾರ್ಚನೆ, ಭಗವದ್ಗೀತಾ ಪಠಣ ನಂತರ ಮಾಜಿ ಸಂಸದ ಅನಂತಕುಮಾರ ಹೆಗಡೆ ಉದ್ಘಾಟಿಸುವರು. ಮಹಾಸಭಾದ ಅಧ್ಯಕ್ಷ ಡಾ. ಗಿರಿಧರ ಕಜೆ ಅಧ್ಯಕ್ಷತೆ ವಹಿಸುವರು. ಮಹಿಳಾ ವೇದಿಕೆಯನ್ನು ಪ್ರಮೋದ ಹೆಗಡೆ ಉದ್ಘಾಟಿಸುವರು. ವಾಗ್ಮಿಗಳಾದ ಎಂ.ಎನ್. ಹೆಗಡೆ ಹಳವಳ್ಳಿಯವರ ಅಧ್ಯಕ್ಷತೆಯಲ್ಲಿ ಚಿಂತನ-ಮಂಥನ, ಜಿ.ಎಸ್. ನಟೇಶ ಸಂಸ್ಕಾರಗಳ ವೈಜ್ಞಾನಿಕ ಹಿನ್ನೆಲೆ ಹಾಗೂ ವಿ.ಜಗದೀಶ ಶರ್ಮ ಸಂಪ ಷೋಡಶ ಸಂಸ್ಕಾರಗಳ ಮಹತ್ವದ ಕುರಿತು ಉಪನ್ಯಾಸ ನೀಡುವರು. ನಂತರ ರಾಮಕೃಷ್ಣ ಹೆಗಡೆ ಹಿಲ್ಲೂರು, ನರಸಿಂಹ ಭಟ್ಟ ಹಂಡ್ರಮನೆ, ಗಣೇಶ ಗಾಂವ್ಕರ ಹಳವಳ್ಳಿ, ವಿನಯ ಭಟ್ಟ ಬೇರೊಳ್ಳಿ, ಅಶ್ವಿನಿ ಕೊಂಡದಕುಳಿ ಇವರಿಂದ ಗಾನ-ನಾಟ್ಯ ವೈಭವ ಹಾಗೂ ಜಾನಪದನೃತ್ಯ ನಡೆಯಲಿದೆ. ಮಧ್ಯಾಹ್ನ ವಿ.ಉಮಾಕಾಂತ ಭಟ್ಟ ಕೆರೆಕೈ ಇವರ ಅಧ್ಯಕ್ಷತೆಯಲ್ಲಿ ವಿದ್ವದ್ಗೋಷ್ಠಿ ನಂತರ ವಾಗ್ಮಿ ರೋಹಿತ್ ಚಕ್ರತೀರ್ಥ ಭಾರತೀಯ ಸಂಸ್ಕಾರದ ಕುರಿತು ಉಪನ್ಯಾಸ; ಬಹುಮಾನ ವಿತರಣೆ ಮತ್ತು ಸಮಾರೋಪದಲ್ಲಿ ಸ್ವರ್ಣವಲ್ಲೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಡಾ. ಗಿರಿಧರ ಕಜೆ ಅಧ್ಯಕ್ಷತೆಯಲ್ಲಿ ಜರುಗಲಿದೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಶಿವರಾಮ ಹೆಬ್ಬಾರ, ವಿಶ್ವದರ್ಶನ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಭಾಗವಹಿಸುವರು ಎಂದು ಮಾಹಿತಿ ನೀಡಿದರು.

ಈ ಸಂದರ್ಭ ವಿವಿಧ ಕಾರ್ಯಕ್ರಮಗಳ ಸಂಚಾಲಕರಾದ ಅನಂತ ಗಾಂವ್ಕರ, ಸಣ್ಣಪ್ಪ ಭಾಗ್ವತ, ರಾಜಾರಾಮ ಹೆಗಡೆ, ಕೆ.ಆರ್. ಕೃಷ್ಣಮೂರ್ತಿ, ಶಾಂತಾರಾಮ ಹೆಗಡೆ ಕೊಂಡದಕುಳಿ ಮತ್ತಿತರರು ಉಪಸ್ಥಿತರಿದ್ದರು.