ಜಾನಪದ ಹಳ್ಳಿ ಬದುಕಿನ ಪ್ರತಿಬಿಂಬ: ಡಾ.ಬಲ್ಲಾಳ್

| Published : Nov 05 2024, 12:31 AM IST

ಸಾರಾಂಶ

ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ಕರ್ನಾಟಕ ಜಾನಪದ ಪರಿಷತ್ತು, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಹಾಗೂ ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ‘ಜಾನಪದ ಹಬ್ಬ-೨೦೨೪’ರ ಸಮಾರೋಪ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ನಮ್ಮ ನಾಡಿನ ಜಾನಪದ ಕಲೆಗಳು ಹಳ್ಳಿಯ ಬದುಕನ್ನು ಬಿಂಬಿಸುವ ಪ್ರತಿಬಿಂಬಗಳಾಗಿವೆ ಎಂದು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್ ಹೇಳಿದರು.ಅವರು ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ಕರ್ನಾಟಕ ಜಾನಪದ ಪರಿಷತ್ತು, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಹಾಗೂ ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನಗಳ ಸಂಯುಕ್ತ ಆಶ್ರಯದಲ್ಲಿ ನಡೆದ ‘ಜಾನಪದ ಹಬ್ಬ-೨೦೨೪’ರ ಸಮಾರೋಪದಲ್ಲಿ ಮಾತನಾಡಿದರು.ಸಾಧಕರಿಗೆ ಸನ್ಮಾನ ನೆರವೇರಿಸಿದ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ, ಜನಪದ ಕಲೆಗಳನ್ನು ಉಳಿಸಿ ಬೆಳೆಸುವ ಇಂತಹ ಕಾರ್ಯಕ್ರಮಗಳು ನಿತ್ಯ ನಿರಂತರವಾಗಿರಲಿ ಎಂದು ಹಾರೈಸಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಜಾನಪದ ಕಲಾವಿದರು ಆರ್ಥಿಕವಾಗಿ ತುಂಬಾ ಹಿಂದುಳಿದಿರುವುದರಿಂದ ಅವರಿಗೆ ಸಂಘಸಂಸ್ಥೆಗಳ ಪ್ರೋತ್ಸಾಹದ ಅಗತ್ಯವಿದೆ. ಅಬಾಲವೃದ್ಧರಾಗಿ ಜಾನಪದ ಕಲೆಗಳನ್ನು ಇಷ್ಟ ಪಡುವ ಪ್ರೇಕ್ಷಕರಿಂದ ಕಲಾವಿದರಿಗೆ ವೇದಿಕೆ ಕೊಟ್ಟರೆ ಅವರ ಬದುಕಿಗೆ ಆಸರೆಯಾಗುತ್ತಿದೆ. ಇದಕ್ಕೆ ಡಾ.ತಲ್ಲೂರು ಅವರು ಬೆಳೆಸಿದ ಕಲಾಮಯಂ ತಂಡವೇ ಸಾಕ್ಷಿ ಎಂದರು.ಮಾಹೆಯ ಸಾಂಸ್ಕೃತಿಕ ಸಂಸ್ಥೆಗಳ ಮುಖ್ಯಸ್ಥ ಡಾ.ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು. ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ.ತಲ್ಲೂರು ಶಿವರಾಮ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಐಯ್ಯಂಗಾರ್ ಯೋಗ ಶಿಕ್ಷಕಿ ಶೋಭಾ ಶೆಟ್ಟಿ ಅವರನ್ನು ಪತಿ ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಸುರೇಶ್ ಶೆಟ್ಟಿ ಸಮೇತ ಸನ್ಮಾನಿಸಿ, ‘ಜಾನಪದ ಸಾಂಸ್ಕೃತಿಕ ಯೋಗ ಸಾಧಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟಿನ ನಿರ್ದೇಶಕಿ ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ, ಪರಿಷತ್ತಿನ ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಅರುಣ್ ಕುಮಾರ್ ಹೆಗ್ಡೆ, ಖಜಾಂಚಿ ಪ್ರಶಾಂತ ಭಂಡಾರಿ, ಎಂ.ಕೃಷ್ಣ ಆಳ್ವ, ಗೌರವಾಧ್ಯಕ್ಷ ಶ್ರೀಧರ ಶೇಣವ, ಅಂಬಲಪಾಡಿ ರೋಟರಿ ಕ್ಲಬ್ ಅಧ್ಯಕ್ಷ ರಾಜು ಪೂಜಾರಿ ವೇದಿಕೆಯಲ್ಲಿದ್ದರು. ತಲ್ಲೂರ್ಸ್ ಪ್ಯಾಮಿಲಿ ಟ್ರಸ್ಟ್‌ನ ಶಿವಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.ಕರ್ನಾಟಕ ಜಾನಪದ ಪರಿಷತ್ತಿನ ಕಾರ್ಯದರ್ಶಿ ರವಿರಾಜ್ ನಾಯಕ್ ನಿರೂಪಿಸಿದರು. ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ, ಅನುಷಾ ಆಚಾರ್ಯ ವಂದಿಸಿದರು.