ಸಾರಾಂಶ
ಹೊಸದುರ್ಗದಲ್ಲಿ ಮಾಜಿ ಶಾಸಕ ವೈ.ಎಸ್.ವಿ.ದತ್ತಾ ಹೇಳಿಕೆ ಕನ್ನಡಪ್ರಭ ವಾರ್ತೆ ಹೊಸದುರ್ಗ
ಚುನಾವಣೆಯ ಪ್ರಕ್ರಿಯೆಯಲ್ಲಿ ಸುಧಾರಣೆಯಾದರೆ ರಾಜಕಾರಣದಲ್ಲಿ ಪರಿವರ್ತನೆ ತರಲು ಸಾಧ್ಯ. ಕುವ್ಯವಸ್ಥೆಯಿಂದ ಅವ್ಯವಸ್ಥೆಗೆ, ಅವ್ಯವಸ್ಥೆಯಿಂದ ವ್ಯವಸ್ಥೆಗೆ ತರುವುದೇ ಪರಿವರ್ತನೆ. ಆದರೆ ಇಂದಿನ ರಾಜಕಾರಣದಲ್ಲಿ ಸುವ್ಯವಸ್ಥೆಯಿಂದ ಕುವ್ಯವಸ್ಥೆಯ ಕಡೆಗೆ ಹೋಗುತ್ತಿರುವುದು ದೊಡ್ಡ ದುರಂತ ಎಂದು ಮಾಜಿ ಶಾಸಕ ವೈ ಎಸ್.ವಿ.ದತ್ತಾ ಹೇಳಿದರು.ತಾಲೂಕಿನ ಸಾಣೇಹಳ್ಳಿಯ ಲತಾ ಮಂಟಪದಲ್ಲಿ ನಡೆಯುತ್ತಿರುವ 2ನೇ ದಿನದ ಕರ್ನಾಟಕದ ಪರಿವರ್ತನೆಯ ಚಿಂತನೆ ಮತ್ತು ಕ್ರಿಯಾಯೋಚನೆ’ಕುರಿತ ಸಮಾನ ಮನಸ್ಕರರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾಳೆ ಏನಾಗುತ್ತದೆ ಎಂದು ತಿಳಿದುಕೊಳ್ಳಬೇಕಾದರೆ ಇಂದು ಏನಾಗುತ್ತಿದೆ ಎಂದು ಅರಿಯುವುದು ಸೂಕ್ತ. ಸರ್ವೋದಯದಲ್ಲಿ ನಿರ್ಣಯಗಳು ಆಗುವ ಸಂದರ್ಭದಲ್ಲಿ ಚರ್ಚೆಯಾಗುವ ಅಗತ್ಯ ಇದೆ ಎಂದರು.
ಜಗತ್ತಿನ ಕುಬೇರರಲ್ಲಿ ಭಾರತದ ಕುಬೇರರು 271 ಜನರಿದ್ದಾರೆ. ಇದರಲ್ಲಿ ಒಂದು ವರ್ಷದಿಂದೀಚಿಗೆ 98 ಜನ ಕುಬೇರರು ಆ ಪಟ್ಟಿಗೆ ಹೊಸದಾಗಿ ಸೇರಿದ್ದಾರೆ. ಅಂದರೆ ಭಾರತದಲ್ಲಿ ಎಷ್ಟರಮಟ್ಟಿಗೆ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎನ್ನುವುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ. ಭಾರತದಲ್ಲಿ ಶ್ರೀಮಂತರು ಶ್ರೀಮಂತರಾಗುತ್ತಲೇ ಇದ್ದಾರೆ ಅವರೆಲ್ಲರೂ ರಾಜಕಾರಣಿಗಳೇ. ಬಡವರು ಬಡವರಾಗಿಯೇ ಇದ್ದಾರೆ ಅವರೆಲ್ಲರೂ ಕೃಷಿಕರು, ಶ್ರಮ ಜೀವಿಗಳು. ಈ ತಾರತಮ್ಯವನ್ನು ಹೋಗಲಾಡಿಸಬೇಕಾದರೆ ಮತದಾರ ಜಾಗೃತನಾಗಬೇಕು. ಆಗ ಮಾತ್ರ ಪರಿವರ್ತನೆ ತರಲು ಸಾಧ್ಯ ಎಂದರು.ಭ್ರಷ್ಟಾಚಾರ ಮುಕ್ತ ರಾಜಕಾರಣ ಕುರಿತು ಎಎಪಿ ಪಕ್ಷದ ಅಧ್ಯಕ್ಷ ರವಿಕೃಷ್ಣರೆಡ್ಡಿ ಮಾತನಾಡಿ, ಸಾರ್ವಜನಿಕರ ಆಸ್ತಿಯನ್ನು ಕದೀಮರು, ಅಧಿಕಾರಿಗಳು, ರಾಜಕಾರಣಿಗಳು ಸುಳ್ಳು ದಾಖಲೆಯನ್ನು ಸೃಷ್ಟಿಸಿ ಲಪಾಟಾಯಿಸುತ್ತಿದ್ದಾರೆ. ಹಣವನ್ನು ಬಳಸಿಕೊಂಡು ಸಮಾಜದಲ್ಲಿ ಪ್ರಭಾವಿಯಾಗುತ್ತಿದ್ದಾರೆ. ಪಟ್ಟಣಗಳಲ್ಲಿ ಕೆರೆ, ಕುಂಟೆ, ಹಳ್ಳಗಳನ್ನು ನುಂಗಿದವರು ಇವತ್ತು ವಿಧಾನಸಭೆಯಲ್ಲಿರುವುದು ನಾಚಿಕೆಗೇಡಿನ ಸಂಗತಿ. ಇವತ್ತಿನ ರಾಜಕಾರಣಿಗಳು ಶಿಕ್ಷಣವನ್ನು ಬ್ಯುಜಿನೆಸ್ ಮಾಡಿಕೊಂಡಿದ್ದಾರೆ ಇದರಿಂದಾಗಿ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಭ್ರಷ್ಟ ಮಠಾಧೀಶರು, ರಾಜಕಾರಣಿಗಳು ಕೆಲ ಜಿಲ್ಲೆಗಳಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜುಗಳನ್ನು ತೆರೆಯಲು ಬಿಡುತ್ತಿಲ್ಲ ನಮ್ಮ ದೇಶದ ಸತ್ವಯುತ ರಾಜಕಾರಣದಲ್ಲಿ ಭ್ರಷ್ಟ, ದುಷ್ಟ, ವಾಮಮಾರ್ಗದ ವ್ಯಕ್ತಿಗಳು ರಾಜಕಾರಣ ಮಾಡುತ್ತಿದ್ದಾರೆ. ಎಲ್ಲರೂ ವ್ಯಕ್ತಿಗತವಾಗಿ ಒಳ್ಳೆಯವರೇ. ಆದರೆ ಸಾಮಾಜಿಕವಾಗಿ ಬಂದರೆ ನಾವೆಲ್ಲರೂ ಭ್ರಷ್ಟರೇ ಎಂದರು.
ಮತದಾರರ ಜವಾಬ್ದಾರಿ ಕುರಿತು ಮುಖ್ಯಮಂತ್ರಿ ಚಂದ್ರು ಮಾತನಾಡಿ, ಎಲ್ಲ ಕ್ಷೇತ್ರಗಳಲ್ಲಿ ರಾಜಕಾರಣ ಇದೆ. ರಾಜಕಾರಣದಲ್ಲಿ ಪರಿವರ್ತನೆಗಿಂತ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಇವತ್ತು 50 ಕೋಟಿ ಇದ್ದರೆ ಮಾತ್ರ ಚುನಾವಣೆ ಮಾಡಲು ಸಾಧ್ಯ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಅದರ ಬದಲಾಗಿ ಸಾಲಗಾರರೆಲ್ಲಾ ಸೇರಿ ಒಂದಾಗಿ ಚುನಾವಣೆ ಮಾಡುವ ಪರ್ಯಾಯ ಕಾರ್ಯ ಆಗಬೇಕು. ವಿಚಾರ ಕ್ರಾಂತಿ ಎನ್ನುವುದು ವಿಚಾರಗಳ ವಾಂತಿಯಾಗುತ್ತಿವೆ. ಇದಕ್ಕೆ ಕಸಪೊರಕೆಯ ಅವಶ್ಯಕತೆ ಇದೆ ಎಂದರು.ರಾಮಮಂದಿರ ಎಂದು ಹೇಳುವವರು, ಕುಂಬಮೇಳ ಎನ್ನುವವವರು, ಕುಟುಂಬ ರಾಜಕಾರಣದಿಂದ, ಮೌಢ್ಯವನ್ನು ಬಿತ್ತುವವರಿಂದ ಮತದಾರ ದಿಕ್ಕುತಪ್ಪುತ್ತಿದ್ದಾನೆ. ಕ್ರಾಂತಿ ಎನ್ನುವುದು ಒಂದೇ ದಿನದಲ್ಲಿ ಆಗುವಂಥದ್ದಲ್ಲ. ಅದಕ್ಕೆ ಸಮಯಬೇಕು. ಉಳ್ಳವರ ಮನೆ ಬಿಟ್ಟು ಇಲ್ಲದವರ ಮನೆಗೆ ಬೆಂಕಿ ಹಚ್ಚುವ ಕೆಲಸ ನಡೀತಾ ಇದೆ. ಗಣರಾಜ್ಯ ಗುಣರಾಜ್ಯವಲ್ಲ. ಮತದಾರರನ್ನು ಭ್ರಷ್ಟಾಚಾರಿಗಳನ್ನು ಮಾಡಿದರೆ ರಾಜಕಾರಣಿಗಳ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಸಾಧ್ಯ ಎನ್ನುವ ಮನಸ್ಥಿತಿ ಬೆಳೆಸಿಕೊಂಡಿದ್ದಾರೆ. ನಮ್ಮ ರಾಜ್ಯದಲ್ಲಿ ಪುಡಾರಿಗಳ ಸಂಖ್ಯೆ ಹೆಚ್ಚಿದೆ. ಸಾತ್ವಿಕರು ಇಲ್ಲ. ನದಿ ಮೂಲವನ್ನೇ ಕೆಡಿಸಿ ಹೊರಗೆ ಶುದ್ಧಿ ನೀರನ್ನು ಹುಡುಕುತ್ತಿರುವ ರಾಜಕಾರಣಿಗಳು ಇದ್ದಾರೆ ಎಂದರು.
ಪ್ರಸ್ತುತ ರಾಜಕಾರಣದ ಮುನ್ನೋಟದ ಬಗ್ಗೆ ಮಾಜಿ ಶಾಸಕ ಮಹಿಮಾ ಪಟೇಲ್, ಪರಿಸರ ರಾಜಕಾರಣ ಕುರಿತು ಬೈರೇಗೌಡ ಮಾತನಾಡಿದರು.