ಧರ್ಮದ ಹೆಸರಿನಲ್ಲಿ ರಾಜ್ಯಭಾರ: ಪ್ರಜಾಪ್ರಭುತ್ವಕ್ಕೆ ಪೂರಕ ಅಲ್ಲ

| Published : Nov 04 2024, 12:22 AM IST

ಧರ್ಮದ ಹೆಸರಿನಲ್ಲಿ ರಾಜ್ಯಭಾರ: ಪ್ರಜಾಪ್ರಭುತ್ವಕ್ಕೆ ಪೂರಕ ಅಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮದ ಹೆಸರಿನಲ್ಲಿ ರಾಜ್ಯಭಾರ ನಡೆಯುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೂರಕ ಅಲ್ಲ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಧರ್ಮದ ಹೆಸರಿನಲ್ಲಿ ರಾಜ್ಯಭಾರ ನಡೆಯುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೂರಕ ಅಲ್ಲ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

ನವನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ ಎದ್ದರೆ ಸಾಕು ದೇಶದಲ್ಲಿ ಧರ್ಮದ ಹೆಸರಿನಲ್ಲಿ ರಾಜಕೀಯ, ಜಾತಿ ವ್ಯವಸ್ಥೆಯಲ್ಲಿ ವಿಷ ಬೀಜ ಬಿತ್ತುವ ಕೆಲಸ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ದೇಶದಲ್ಲಿ ಸಶಕ್ತರು ಗ್ಯಾಸ್‌ ಸಬ್ಸಿಡಿಯನ್ನು ಬಿಡಬೇಕು ಎಂದು ಪ್ರಧಾನಿ ಮೋದಿಯವರು ಜನರಿಗೆ ಹೇಳುತ್ತಾರೆ. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಕುರಿತು ಸಣ್ಣತನ ಹೇಳಿಕೆ ನೀಡುವುದನ್ನು ಬಿಡಬೇಕು. ಗ್ಯಾರಂಟಿ ಯೋಜನೆ ಪಡೆಯುವವರು ಸಶಕ್ತರಿದ್ದರೆ ಬಿಡಬಹುದು ಎಂದು ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿರುವುದರಲ್ಲಿ ತಪ್ಪೇನಿಲ್ಲ ಎಂದು ಸಮರ್ಥಿಸಿಕೊಂಡರು.ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಲ್ಲಿ ಅವ್ಯವಹಾರ ಮಾಡಿರುವ ಅಧಿಕಾರಿಗಳನ್ನು ಈಗಾಗಲೇ ಸಸ್ಪಂಡೆ ಮಾಡಲಾಗಿದೆ. ಇನ್ನೂ ಸೋಮವಾರದಿಂದ ಈ ಸ್ವತ್ತು ಖಾತೆ ಉತಾರ ಕೊಡುವ ಕೆಲಸ ನಡೆಯಲಿದೆ ಆಸ್ತಿ ಖರೀದಿ ಮಾಡಿಕೊಳ್ಳಲು ಅವಕಾಶ ಸಿಗಲಿದೆ ಎಂದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಪತ್ರಿಕಾಗೋಷ್ಠಿ ಯಲ್ಲಿದ್ದರು.

ಜೆ.ಕೆ.ಸಿಮೆಂಟ್‌ನಿಂದ ಹಾನಿಯಾದರೆ ಕ್ರಮ

ಜಿಲ್ಲೆಯ ಲೋಕಾಪುರ ಸಮೀಪ ಜೆ.ಕೆ.ಸಿಮೆಂಟ್ ಕಾರ್ಖಾನೆಯಿಂದ ಅಕ್ರಮ ಗಣಿಗಾರಿಕೆ ನಡೆದ ಬಗ್ಗೆ ಗಮನಕ್ಕೆ ಬಂದಿಲ್ಲ. ಆದರೆ, ಕಲ್ಲು ಸ್ಫೋಟದಿಂದ ಬೆಳೆ, ಮನೆಗಳಿಗೆ ಹಾನಿಯಾಗುತ್ತಿರುವ ಕುರಿತು ಮಾಹಿತಿ ಪಡೆಯಲಾಗಿದೆ. ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ.ತಿಮ್ಮಾಪೂರ ಹೇಳಿದರು.ಜೆ.ಕೆ.ಸಿಮೆಂಟ್‌ನಿಂದ ಆಗುತ್ತಿರುವ ಅಪಾಯ ಮತ್ತು ಹಾನಿಯ ಕುರಿತು ಕನ್ನಡಪ್ರಭವು ಅ.23ರಂದು ಗಣಿಗಾರಿಕೆಯಿಂದ ಕೃಷಿಕರ ನೆಮ್ಮದಿ ಹಾಳು ಎಂಬ ತಲೆಬರಹದಡಿ ವಿಶೇಷ ವರದಿ ಪ್ರಕಟಿಸಿತ್ತು. ಈ ವರದಿ ಕುರಿತು ಈಗ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ.ತಿಮ್ಮಾಪುರ ಅವರು ಪ್ರತಿಕ್ರಿಯೆ ನೀಡಿದ್ದು, ಕ್ರಮದ ಭರವಸೆ ನೀಡಿದ್ದಾರೆ.