ಪ್ರಾದೇಶಿಕ ಅಸಮತೋಲನ ಮರು ಪರಿಶೀಲನೆ ವರದಿ ಸೆಪ್ಟಂಬರ್ ನಲ್ಲಿ ಸಲ್ಲಿಕೆ

| Published : May 28 2025, 12:05 AM IST / Updated: May 28 2025, 12:06 AM IST

ಸಾರಾಂಶ

ಯುವಕರಿಗೆ ಕೌಶಲ್ಯ ಮತ್ತು ಉದ್ಯಮ ಉತ್ತೇಜನ, ಮಹಿಳೆಯರಿಗೆ ಮುಂದಾಳತ್ವ ತರಬೇತಿ, ಸ್ವಸಹಾಯ ಮತ್ತು ಕರಕುಶಲ ತರಬೇತಿ, ಚಲನಶೀಲತೆಗಾಗಿ ಮಾರುಕಟ್ಟೆ ಜೋಡಣೆ, ರಸ್ತೆ ಸಂಪರ್ಕ, ಸಾರಿಗೆ ಸಂಪರ್ಕ, ರಫ್ತು ಉಪಕ್ರಮ ಅನುಷ್ಠಾನಗೊಳಿಸಬೇಕಿದೆ

ಕಾರವಾರ: ಕರ್ನಾಟಕ ಪ್ರಾದೇಶಿಕ ಅಸಮತೋಲನ ಮರು ಪರಿಶೀಲನಾ ವರದಿಯನ್ನು 2025ರ ಸೆಪ್ಟಂಬರ್ ನಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಸಮಿತಿಯ ಸದಸ್ಯ ಡಾ. ಎಸ್.ಟಿ. ಬಾಗಲಕೋಟಿ ತಿಳಿಸಿದ್ದಾರೆ.

ಅವರು ಮಂಗಳವಾರ ಜಿಪಂ ಸಭಾಂಗಣದಲ್ಲಿ ನಡೆದ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಜಿಲ್ಲಾ ಮಟ್ಟದ ಸಂವಾದ ಸಭೆ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯು ಡಾ. ಡಿ.ಎಂ.ನಂಜುಂಡಪ್ಪ ವರದಿ ಸಲ್ಲಿಸಿದ ನಂತರದಲ್ಲಿ ಅಂತರ್ ಜಿಲ್ಲಾ ಮಾನವ ಪ್ರವೃತ್ತಿಗಳು ಹಾಗೂ ಜಿಲ್ಲೆಗಳಲ್ಲಿ ಜೀವನ ಮಟ್ಟದ ಸುಧಾರಣೆ ಹಾಗೂ ಮಾನವ ಅಭಿವೃದ್ಧಿಯ ವ್ಯತ್ಯಾಸಗಳ ಕುರಿತು ವಿಶ್ಲೇಷಣೆ ನಡೆಸುವುದು ಮಾತ್ರವಲ್ಲದೇ ಈ ಸಮಿತಿಯು ಸಲ್ಲಿಸಿದ್ದ ವರದಿ ಆಧರಿಸಿ ಕೈಗೊಂಡ ನೀತಿ ನಿರ್ಣಯಗಳಿಂದಾದ ಪರಿಣಾಮಗಳ ಕುರಿತು ಮೌಲ್ಯ ಮಾಪನ ನಡೆಸಿ ಹೆಚ್ಚು ಪರಿಣಾಮಕಾರಿಯಾಗಿ ನೀತಿಗಳು ಮತ್ತು ಕಾರ್ಯತಂತ್ರಗಳನ್ನು ಗುರುತಿಸಿ ಶಿಫಾರಸು ಮಾಡಲಾಗುವುದು ಎಂದರು.

ಗ್ರಾಮೀಣ ಆದಾಯದ ವೃದ್ಧಿಗಾಗಿ ಸಣ್ಣ ರೈತರಿಗೆ ವೈವಿದ್ಯೀಕರಣ, ಕೃಷಿಕರಿಗೆ ಕೊಯ್ಲೋತ್ತರ ಮೌಲ್ಯವರ್ಧಿತ ಚಟುವಟಿಕೆಗಳು, ಯುವಕರಿಗೆ ಕೌಶಲ್ಯ ಮತ್ತು ಉದ್ಯಮ ಉತ್ತೇಜನ, ಮಹಿಳೆಯರಿಗೆ ಮುಂದಾಳತ್ವ ತರಬೇತಿ, ಸ್ವಸಹಾಯ ಮತ್ತು ಕರಕುಶಲ ತರಬೇತಿ, ಚಲನಶೀಲತೆಗಾಗಿ ಮಾರುಕಟ್ಟೆ ಜೋಡಣೆ, ರಸ್ತೆ ಸಂಪರ್ಕ, ಸಾರಿಗೆ ಸಂಪರ್ಕ, ರಫ್ತು ಉಪಕ್ರಮ ಅನುಷ್ಠಾನಗೊಳಿಸಬೇಕಿದೆ ಎಂದರು.

ಈ ಹಿಂದಿನ ವರದಿಯ ಶಿಫಾರಸುಗಳನ್ನು ಜನಸಂಖ್ಯೆಯ ಆಧಾರದ ಮೇಲೆ ಸಲ್ಲಿಸಲಾಗಿದ್ದು, ಪ್ರಸ್ತುತ ಸಮಿತಿಯ ವರದಿಯನ್ನು ಭೌಗೋಳಿಕ ವ್ಯಾಪ್ತಿಯ ಅಭಿವೃದ್ಧಿಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳುವಂತೆ ಉತ್ತಮ ರೀತಿಯ ವರದಿ ಸಲ್ಲಿಸಲಾಗುವುದು ಎಂದರು.

ಯಾವುದೇ ಜಿಲ್ಲೆಯನ್ನು ಆದಾಯದ ಹೆಚ್ಚಳದ ಮೂಲಕ ಅಭಿವೃದ್ಧಿ ಹೊಂದಿದೆ ಎಂದು ನಿರ್ಧರಿಸಲು ಸಾಧ್ಯವಿಲ್ಲ, ಜಿಲ್ಲೆಯು ಆದಾಯದ ಜತೆಗೆ ಆರೋಗ್ಯ, ವಿದ್ಯಾಭ್ಯಾಸ ಸೇರಿದಂತೆ ಎಲ್ಲ ಆಯಾಮಗಳಲ್ಲಿ ಅಭಿವೃದ್ಧಿ ಹೊಂದಬೇಕು, ಪ್ರಾದೇಶಿಕ ಅಸಮತೋಲನ ಮರು ಪರಿಶೀಲನಾ ವರದಿಯ ಮೂಲಕ ಎಲ್ಲ ಆಯಾಮಗಳಲ್ಲಿ ಅಂತರ ಜಿಲ್ಲಾ ಭಿನ್ನತೆ ತಡೆಯುವ ಉದ್ದೇಶ ಹೊಂದಲಾಗಿದೆ ಎಂದು ಸದಸ್ಯ ಡಾ.ಎಂ.ಎಚ್.ಸೂರ್ಯ ನಾರಾಯಣ್ ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಉತ್ತರ ಕನ್ನಡ ಜಿಲ್ಲೆಯು ಭೌಗೋಳಿಕವಾಗಿ ವಿಸ್ತಾರವಾಗಿದ್ದು, ಶೇ.80 ರಷ್ಟು ಅರಣ್ಯ ಪ್ರದೇಶ ಹೊಂದಿದ್ದು, ಜನಸಂಖ್ಯೆಯು ಕಡಿಮೆಯಿದೆ. ಈ ಹಿಂದಿನ ವರದಿಯಲ್ಲಿ ಜನಸಂಖ್ಯಾ ಆಧಾರದಲ್ಲಿ ಯೋಜನೆಗಳು ಮತ್ತು ಅಭಿವೃದ್ಧಿಗಾಗಿ ಸಂಪನ್ಮೂಲ ಹಂಚಿಕೆ ಮಾಡುತ್ತಿದ್ದು, ಇದರಿಂದ ಜಿಲ್ಲೆಗೆ ಕಡಿಮೆ ಅನುದಾನ ದೊರೆಯುತ್ತಿದೆ. ಆದ್ದರಿಂದ ಭೌಗೋಳಿಕ ವ್ಯಾಪ್ತಿಯ ಆಧಾರದಲ್ಲಿ ಸಂಪನ್ಮೂಲ ಹಂಚಿಕೆ ಮಾಡುವಂತೆ ವರದಿ ಶಿಫಾರಸು ಮಾಡಬೇಕು. ಇಲ್ಲಿ ಹೊಸ ಉದ್ಯಮ, ಕೈಗಾರಿಕೆಗಳನ್ನು ಆರಂಭಿಸಲು ಅರಣ್ಯ ಹಕ್ಕು ಕಾಯ್ದೆ, ಅರಣ್ಯ ಭೂಮಿ, ಸಿ.ಅರ್.ಝಡ್ ನಿಯಮಗಳು ಅಡ್ಡಿಯಾಗುತ್ತಿವೆ ಆದ್ದರಿಂದ ಇಲ್ಲಿನ ಜನತೆ ಉದ್ಯೋಗ ಅರಸಿ ಪಕ್ಕದ ಜಿಲ್ಲೆ, ರಾಜ್ಯ ಮತ್ತು ವಿದೇಶಗಳಿಗೆ ವಲಸೆ ಹೋಗುತ್ತಿದ್ದಾರೆ, ಸರ್ಕಾರಿ ಇಲಾಖೆಗಳಲ್ಲಿ ಸಿಬ್ಬಂದಿಯ ತೀವ್ರ ಕೊರತೆ ಇದೆ, ಪ್ರವಾಸೋದ್ಯಮದ ಬೆಳವಣಿಗೆಗೆ ಉತ್ತಮ ಅವಕಾಶಗಳಿದ್ದು, ಜಿಲ್ಲೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕು ಎನ್ನುವ ಬಹು ವರ್ಷಗಳ ಬೇಡಿಕೆ ಇದೆ, ಈ ಎಲ್ಲ ಅಂಶಗಳನ್ನು ಪರಿಶೀಲಿಸಿ ವರದಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಅಗತ್ಯವಿರುವ ಸೂಕ್ತ ಶಿಫಾರಸ್ಸು ಮಾಡುವಂತೆ ಕೋರಿದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದೂ, ಡಿ.ಎಫ್.ಓ. ರವಿಶಂಕರ್, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಮತ್ತಿತರರು ಇದ್ದರು.