ಸಾರಾಂಶ
ಆಡಳಿತ ಮಾಡಿರುವ ಹಾಗೂ ಆಡಳಿತ ನಡೆಸುತ್ತಿರುವ ಪಕ್ಷಗಳು ಕೇವಲ ಬೆಂಗಳೂರು ಭಾಗದ ಅಭಿವೃದ್ಧಿಗೆ ಮಾತ್ರ ಸೀಮಿತಗೊಂಡಿವೆ. ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮಹತ್ವ ನೀಡುತ್ತಿಲ್ಲ. ಆದಕಾರಣ ನಾನು ರಾಜ್ಯದ 224 ಕ್ಷೇತ್ರಗಳ ಪ್ರವಾಸ ಕೈಗೊಂಡಿದ್ದು ಅಲ್ಲಿರುವ ಚಿಂತಕರ, ಹೋರಾಟಗಾರರ, ಸಮಾನ ಮನಸ್ಕರ ಅಭಿಪ್ರಾಯ ಸಂಗ್ರಹಿಸಿ ಪ್ರಾದೇಶಿಕ ಪಕ್ಷ ಕಟ್ಟುವ ಚಿಂತನೆ ನಡೆಸಿದ್ದೇನೆ.
ಕುಷ್ಟಗಿ:
ಕಾಂಗ್ರೆಸ್ ಮತ್ತು ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳು ರಾಜ್ಯದ ಜನರ ಅಭಿವೃದ್ಧಿ ಬದಲಿಗೆ ಸ್ವಯಂ ಅಭಿವೃದ್ಧಿ ಮಾಡಿಕೊಳ್ಳುತ್ತಿದ್ದು, ಪರ್ಯಾಯವಾಗಿ ಒಂದು ಪ್ರಾದೇಶಿಕ ಪಕ್ಷದ ಅವಶ್ಯಕತೆ ಇದೆ. ಹೀಗಾಗಿ ಪಕ್ಷ ಕಟ್ಟುವ ಚಿಂತನೆ ಇದೆ ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ ಅಹಿಂಸಾ ಅಭಿಪ್ರಾಯಪಟ್ಟರು.ಮಂಗಳವಾರ ರಾತ್ರಿ ಪಟ್ಟಣಕ್ಕೆ ಭೇಟಿ ನೀಡಿದ ವೇಳೆ ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತ ಮಾಡಿರುವ ಹಾಗೂ ಆಡಳಿತ ನಡೆಸುತ್ತಿರುವ ಪಕ್ಷಗಳು ಕೇವಲ ಬೆಂಗಳೂರು ಭಾಗದ ಅಭಿವೃದ್ಧಿಗೆ ಮಾತ್ರ ಸೀಮಿತಗೊಂಡಿವೆ. ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮಹತ್ವ ನೀಡುತ್ತಿಲ್ಲ. ಆದಕಾರಣ ನಾನು ರಾಜ್ಯದ 224 ಕ್ಷೇತ್ರಗಳ ಪ್ರವಾಸ ಕೈಗೊಂಡಿದ್ದು ಅಲ್ಲಿರುವ ಚಿಂತಕರ, ಹೋರಾಟಗಾರರ, ಸಮಾನ ಮನಸ್ಕರ ಅಭಿಪ್ರಾಯ ಸಂಗ್ರಹಿಸಿ ಪ್ರಾದೇಶಿಕ ಪಕ್ಷ ಕಟ್ಟುವ ಚಿಂತನೆ ನಡೆಸಿದ್ದೇನೆ ಎಂದರು.
ಸಂವಿಧಾನದ ನಿಲುವನ್ನು ಯಾವ ಪಕ್ಷಗಳೂ ಎತ್ತಿ ಹಿಡಿಯುತ್ತಿಲ್ಲ. ಕೇವಲ ತಮ್ಮ ಸ್ವಾರ್ಥಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿವೆ. ನಾವು ಸಂವಿಧಾನದ ನಿಲುವು ಎತ್ತಿ ಹಿಡಿಯುವ ಸಲುವಾಗಿ ಈ ಸಮಾನ ಮನಸ್ಕರ ಸಭೆ ಮಾಡುತ್ತಿದ್ದೇವೆ. ಕೇವಲ ಆಡಳಿತದ ಚುಕ್ಕಾಣಿ ಹಿಡಿದುಕೊಳ್ಳುವ ಸಲುವಾಗಿ ರಾಜಕೀಯ ಪಕ್ಷಗಳು ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಅವುಗಳಿಂದ ಅಭಿವೃದ್ಧಿಯಾಗುತ್ತಿಲ್ಲ. ಸಮ ಸಮಾಜ ಕಟ್ಟುವ ಕೆಲಸ ವಾಗುತ್ತಿಲ್ಲ ಎಂದರು.ಈ ವೇಳೆ ಮಂಜುನಾಥ ನಾಲಗಾರ, ಶಿವಕುಮಾರ ಹಡಪದ, ಶ್ರೀಕಾಂತ, ಹುಸೇನ ಚಲವಾದಿ, ಮುರ್ತುಜಾ ಪೆಂಟರ್ ಸೇರಿದಂತೆ ಅನೇಕರು ಇದ್ದರು.