ನಕಲಿ ವೈದ್ಯರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಬೀದರ್‌ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಸೂಚಿಸಿದರು. ಕಮಲನಗರದಲ್ಲಿ ನಕಲಿ ವೈದ್ಯ ವೃತ್ತಿ ನಡೆಸುತ್ತಿದ್ದ ಕೋಲ್ಕತ್ತಾ ಮೂಲದ ಗೌತಮ ಸಮದರ ಹಾಗೂ ಸುಜಲಕುಮಾರ ಸೇನ ಎಂಬುವರಿಗೆ ಈ ಹಿಂದೆ ತಲಾ 25 ಸಾವಿರ ರು. ದಂಡ ವಿಧಿಸಿ, ಪುನಃ ವೈದ್ಯ ವೃತ್ತಿ ನಡೆಸದಂತೆ ಎಚ್ಚರಿಕೆ ನೀಡಲಾಗಿತ್ತು.

ಕನ್ನಡಪ್ರಭ ವಾರ್ತೆ ಬೀದರ್

ನಕಲಿ ವೈದ್ಯರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಬೀದರ್‌ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಸೂಚಿಸಿದರು. ಕಮಲನಗರದಲ್ಲಿ ನಕಲಿ ವೈದ್ಯ ವೃತ್ತಿ ನಡೆಸುತ್ತಿದ್ದ ಕೋಲ್ಕತ್ತಾ ಮೂಲದ ಗೌತಮ ಸಮದರ ಹಾಗೂ ಸುಜಲಕುಮಾರ ಸೇನ ಎಂಬುವರಿಗೆ ಈ ಹಿಂದೆ ತಲಾ 25 ಸಾವಿರ ರು. ದಂಡ ವಿಧಿಸಿ, ಪುನಃ ವೈದ್ಯ ವೃತ್ತಿ ನಡೆಸದಂತೆ ಎಚ್ಚರಿಕೆ ನೀಡಲಾಗಿತ್ತು.

ಆದರೆ, ಇವರು ಮತ್ತೆ ವೈದ್ಯ ವೃತ್ತಿ ಮುಂದುವರಿಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ಸದರಿ ಇಬ್ಬರಿಗೂ ತಲಾ 2.50 ಲಕ್ಷ ರು. ಭಾರಿ ದಂಡ ವಿಧಿಸುವುದರ ಜೊತೆಗೆ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿ ಸೂಚಿಸಿದರು.

ಬೀದರ್‌ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಭಾಂಗಣದಲ್ಲಿ ನಡೆದ ಕೆ.ಪಿ.ಎಂ.ಇ. ಜಿಲ್ಲಾ ಮಟ್ಟದ ನೋಂದಣಿ ಮತ್ತು ಕುಂದುಕೊರತೆ ಪರಿಹಾರ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಭೆಯಲ್ಲಿ ಆರ್ಯುವೇದ ಬದಲು ಅಲೋಪತಿ ವೃತ್ತಿ ಡಾ.ಹರೀಶ ವಿಶ್ವಕರ್ಮ ಅವರು ಆಯುರ್ವೇದ ವೈದ್ಯಕೀಯ ಪದವಿ ಪಡೆದು, ಕಮಠಾಣ ಗ್ರಾಮದ ಪ್ರಗತಿ ಕ್ಲಿನಿಕ್‌ನಲ್ಲಿ ಅಲೋಪತಿ ವೈದ್ಯ ವೃತ್ತಿ ನಡೆಸುತ್ತಿರುವುದು ಕೆ.ಪಿ.ಎಂ.ಇ ಕಾಯಿದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ 50 ಸಾವಿರ ರು. ದಂಡ ವಿಧಿಸಿ, ಅಲೋಪತಿ ಪ್ರಾಕ್ಟೀಸ್ ಮಾಡದಂತೆ ಎಚ್ಚರಿಕೆ ನೀಡಲಾಯಿತು.

ಅರ್ಹತೆಯಿಲ್ಲದ ನಕಲಿ ವೈದ್ಯರಿಗೆ ದಂಡ: ಯಾವುದೇ ಅಧಿಕೃತ ವೈದ್ಯಕೀಯ ಪದವಿ ಇಲ್ಲದೆ ವೈದ್ಯ ವೃತ್ತಿ ನಡೆಸುತ್ತಿದ್ದ ನಕಲಿ ವೈದ್ಯರಾದ ರಾಜಶೇಖರ (ಬಾಲಜಿ ಕ್ಲಿನಿಕ್, ಮು.ಜಂಬಗಿ, ತಾ.ಔರಾದ್-ಬಿ), ಸುಭಾಷದಾಸ (ಮು.ಅಣದೂರ, ತಾ.ಬೀದರ) ಹಾಗೂ ವಿಶ್ವಜೀತ್ (ಮು.ಬೀರಿ-ಕೆ, ತಾ.ಭಾಲ್ಕಿ) ಇವರಿಗೆ ತಲಾ 50 ಸಾವಿರ ರು. ದಂಡ ವಿಧಿಸಿ, ಪುನಃ ವೈದ್ಯ ವೃತ್ತಿ ನಡೆಸದಂತೆ ಎಚ್ಚರಿಕೆ ನೀಡಲಾಗಿದೆ.

ಸರ್ಕಾರಿ ನೌಕರನಿಂದ ನಿಯಮ ಉಲ್ಲಂಘನೆ, ಕಮಲನಗರ ತಾಲ್ಲೂಕಿನ ಚಾಂದೋರಿಯ ಪ್ರೇಮಕುಮಾರ ಅವರು ಸರ್ಕಾರಿ ಶುಶ್ರೂಷಾಧಿಕಾರಿಯಾಗಿ ಪ್ರಾಥ ಮಿಕ ಆರೋಗ್ಯ ಕೇಂದ್ರ, ಮುಧೋಳ (ಬಿ) ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಅನಧಿಕೃತವಾಗಿ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದುದು ದಾಳಿ ವೇಳೆ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರು ಇವರನ್ನು ಕಳೆದ ಜನವರಿ 31ರಂದು ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿದ್ದರು. ಎರಡನೇ ಬಾರಿ ದಾಳಿ ಹಾಗೂ ಕ್ರಮ ಅಮಾನತಿನಲ್ಲಿದ್ದರೂ ಸಹ ಪ್ರೇಮಕುಮಾರ ಅವರು ಖಾಸಗಿ ವೈದ್ಯ ವೃತ್ತಿ ಮುಂದುವರಿಸಿದ ಕಾರಣ, ಅ.5 ರಂದು ಎರಡನೇ ಬಾರಿ ದಾಳಿ ನಡೆಸಿ ಕ್ಲಿನಿಕ್ ಅನ್ನು ಸೀಜ್ ಮಾಡಲಾಗಿದೆ. ಪ್ರೇಮಕುಮಾರ ಈತನಿಗೆ ದೊರೆಯುವ ಜೀವನಾಂಶದ ಭತ್ಯೆಯನ್ನು ತಡೆಹಿಡಿಯುವಂತೆ ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರಿಗೆ ಶಿಫಾರಸ್ಸು ಮಾಡಲು ಬೀದರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗಿಟ್ಟೆ ಮಾಧವ ವಿಠ್ಠಲರಾವ್, ಬೀದರ್‌ ಸಹಾಯಕ ಆಯುಕ್ತ ಅಭಿನವ್ ಜೈನ್, ಬೀದರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಅನೀಲಕುಮಾರ ಚಿಂತಾಮಣಿ, ಬೀದರ ಕೆ.ಪಿ.ಎಂ.ಇ ಜಿಲ್ಲಾ ನೋಡಲ್ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು ಉಪಸ್ಥಿತರಿದ್ದರು.