ನಿಗದಿತ ಅವಧಿಯಲ್ಲಿ ಜನನ, ಮರಣ ದಾಖಲಿಸಿ: ಡಿಸಿ ಜಾನಕಿ

| Published : May 18 2025, 01:13 AM IST

ನಿಗದಿತ ಅವಧಿಯಲ್ಲಿ ಜನನ, ಮರಣ ದಾಖಲಿಸಿ: ಡಿಸಿ ಜಾನಕಿ
Share this Article
  • FB
  • TW
  • Linkdin
  • Email

ಸಾರಾಂಶ

ಆಸ್ಪತ್ರೆಗಳಲ್ಲಿ ಸಂಭವಿಸಿದ ಜನನ, ಮರಣ ಮತ್ತು ನಿರ್ಜೀವ ಜನನ ಘಟನೆಗಳನ್ನು ನಿಗದಿತ ಸಮಯದೊಳಗೆ ನೋಂದಣಿಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಾನಕಿ ಜೆ.ಎಂ. ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಆಸ್ಪತ್ರೆಗಳಲ್ಲಿ ಸಂಭವಿಸಿದ ಜನನ, ಮರಣ ಮತ್ತು ನಿರ್ಜೀವ ಜನನ ಘಟನೆಗಳನ್ನು ನಿಗದಿತ ಸಮಯದೊಳಗೆ ನೋಂದಣಿಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಾನಕಿ ಜೆ.ಎಂ. ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಾಗರಿಕ ನೋಂದಣಿ ಪದ್ಧತಿ ಉತ್ತಮಪಡಿಸುವ ಸಲುವಾಗಿ ಜರುಗಿದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇ-ಜನ್ಮ ತಂತ್ರಾಂಶದಲ್ಲಿ ಜನನ ಮತ್ತು ಮರಣವನ್ನು 21 ದಿನಗಳ ಒಳಗಾಗಿ ನೋಂದಣಿ ಆಗಬೇಕು. ನೋಂದಣಿಯಾಗದೇ ಸಾರ್ವಜನಿಕರಿಗೆ ತೊಂದರೆಯಾದಲ್ಲಿ ಸಂಬಂಧಿಸಿದ ಉಪ ನೋಂದಣಾಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದೆಂದು ಸೂಚಿಸಿದರು.

ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಗಳ ಸಹಕಾರ ಪಡೆದು ನೊಂದಣಿ ಪ್ರಕ್ರಿಯೆ ಶೇ.100ರಷ್ಟು ಆಗಬೇಕು. ಜಿಲ್ಲೆಯ ಎಲ್ಲ ಆರೋಗ್ಯ ಸಂಸ್ಥೆಗಳಲ್ಲಿ ಘಟಿಸಿದ ಜನನ, ಮರಣ ಹಾಗೂ ನಿರ್ಜೀವ ಜನನ ಘಟನೆಗಳನ್ನು 21 ದಿನಗಳಲ್ಲಿ ನೋಂದಾಯಿಸಿ ಉಚಿತ ಪ್ರಮಾಣ ಪತ್ರವನ್ನು ಸಂಬಂಧಿಸಿದ ಮಾಹಿತಿದಾರರಿಗೆ ವಿತರಣೆಯಾಗಬೇಕು ಎಂದು ತಿಳಿಸಿದರು.

ಜನನ, ಮರಣ ತಿದ್ದುಪಡಿ, ರದ್ದತಿಗೆ ಸಂಬಂಧಿಸಿದಂತೆ ಜನನ, ಮರಣ ನೋಂದಣಾಧಿಕಾರಿಗಳು, ಉಪ ನೋಂದಣಾಧಿಕಾರಿಗಳು ತಾವೇ ಆದೇಶ ಮಾಡಿ ಮೂಲ ದಾಖಲೆಯಲ್ಲಿ ತಿದ್ದುಪಡಿ ಮಾಡಬಹುದಾಗಿದೆ. ಜನನ, ಮರಣಗಳ ದಾಖಲೆಗಳಲ್ಲಿ ತಿದ್ದುಪಡಿ ಮಾಡಲು ಸತ್ಯಾಸತ್ಯತೆ ಪರಿಶೀಲಿಸಿ ಕ್ರಮ ವಹಿಸಬೇಕು. ನೋಂದಣಿ ಘಟಕಗಳ ಪರಿಶೀಲನಾ ಸಮಯದಲ್ಲಿ ಕೆಲವು ನ್ಯೂನ್ಯತೆಗಳು ಕಂಡುಬಂದಿವೆ. ಅವುಗಳನ್ನು ಗಣನೆಗೆ ತೆಗೆದುಕೊಂಡು ನೋಂದಣಿ ಪ್ರಕ್ರಿಯೆ ನಡೆಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಸಭೆಯಲ್ಲಿ ಗೈರು ಹಾಜರಾದ ಮೂರು ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನೋಟಿಸ್ ನೀಡಲು ಸೂಚಿಸಿದರು.

ಕಳೆದ 2024-25ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ಬೆಳೆ ಕಟಾವು ಪ್ರಯೋಗಗಳನ್ನು ನಿಯಮಾನುಸಾರ ಕೈಗೊಳ್ಳಲು ಮತ್ತು ಯಾವುದೇ ಪ್ರಯೋಗಗಳು ನಷ್ಟಗೊಳಿಸದಂತೆ ನೋಡಿಕೊಳ್ಳಲು ಹಾಗೂ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಎಲ್ಲ ಜಿಲ್ಲಾಮಟ್ಟದ ಅಧಿಕಾರಿಗಳಿಗೆ, ತಾಲೂಕಿನ ಅನುಷ್ಠಾನಾಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಅಂಕಿ ಸಂಖ್ಯೆ ಅಧಿಕಾರಿ ಗೌರಮ್ಮ ಪಿ. ಸುಂಕದ, ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೇನ್ನವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಮಂಜುನಾಥ ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಪ್ರಭಾಕರ ಕೆ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರವೀಂದ್ರ ಹಕಾಟಿ, ಜಿಲ್ಲಾ ಆರೋಗ್ಯ ಸೇರಿದಂತೆ ಆಯಾ ತಾಲೂಕಿನ ತಹಶೀಲ್ದಾರರು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.

ಇ-ಜನ್ಮ ತಂತ್ರಾಂಶ ಜಾರಿಗೊಳ್ಳುವ ಪೂರ್ವದಲ್ಲಿ ದಾಖಲಾತಿಗಳ ಸ್ಕ್ಯಾನಿಂಗ್ ಮತ್ತು ಡಿಜಿಟ್ಯಾಜೇಷನ್ ಪ್ರಕ್ರಿಯೆ ಮೊದಲ ಹಂತದಲ್ಲಿ ಆಗಿದ್ದು, ಎರಡನೇ ಹಂತದಲ್ಲಿ ಈ ಕಾರ್ಯ ಆಗಿಲ್ಲ. ಜಿಲ್ಲೆಯಲ್ಲಿ ಒಟ್ಟು ಜನನಕ್ಕೆ ಸಂಬಂಧಿಸಿದ 26100 ಮತ್ತು ಮರಣಕ್ಕೆ ಸಂಬಂಧಿಸಿದ 13600 ಸೇರಿ ಒಟ್ಟು 39700 ದಾಖಲಾತಿಗಳ ಸ್ಕ್ಯಾನಿಂಗ್ ಮತ್ತು ಡಿಜಿಟ್ಯಾಜೇಷನ್‌ ಬಾಕಿ ಉಳಿದಿವೆ. ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.

-ಜಾನಕಿ ಕೆ.ಎಂ., ಜಿಲ್ಲಾಧಿಕಾರಿ