ಸಾರಾಂಶ
ಯುವನಿಧಿ ಯೋಜನೆಗೆ ಈಗಾಗಲೇ ಸುಮಾರು 70 ಸಾವಿರ ವಿದ್ಯಾರ್ಥಿ ವಿದ್ಯಾರ್ಥಿನಿಯರು ನೋಂದಾಯಿಸಿಕೊಂಡಿದ್ದು, ಈ ವರ್ಷ ಪದವಿ ಮುಗಿಸಿರುವ ಸುಮಾರು 5 ಲಕ್ಷ ವಿದ್ಯಾರ್ಥಿಗಳೂ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಯುವಜನತೆ ಕೌಶಲ್ಯಾಭಿವೃದ್ಧಿ ಇಲಾಖೆ ಕಾರ್ಯಕ್ರಮಕ್ಕೆ ಸೇವಾಸಿಂಧು ಯೋಜನೆಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಇಲಾಖೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಶಿವಮೊಗ್ಗದಲ್ಲಿ ಯುವನಿಧಿ ಯೋಜನೆ ಚಾಲನೆ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಶಿವಮೊಗ್ಗ: ಯುವನಿಧಿ ಯೋಜನೆಗೆ ಈಗಾಗಲೇ ಸುಮಾರು 70 ಸಾವಿರ ವಿದ್ಯಾರ್ಥಿ ವಿದ್ಯಾರ್ಥಿನಿಯರು ನೋಂದಾಯಿಸಿಕೊಂಡಿದ್ದು, ಈ ವರ್ಷ ಪದವಿ ಮುಗಿಸಿರುವ ಸುಮಾರು 5 ಲಕ್ಷ ವಿದ್ಯಾರ್ಥಿಗಳೂ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಇಲಾಖೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದರು.
ನಗರದ ಫ್ರೀಡಂ ಪಾರ್ಕ್‌ನಲ್ಲಿ ಶುಕ್ರವಾರ ಯುವನಿಧಿ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಪದವಿ, ಡಿಪ್ಲೊಮಾ ವ್ಯಾಸಂಗ ಮಾಡುತ್ತಿರುವ ಯುವಜನರು ಕೂಡ ಯೋಜನೆ ಬಗ್ಗೆ ತಿಳಿದುಕೊಳ್ಳಬೇಕು. ಯುವ ನಿರುದ್ಯೋಗಿಗಳಿಗೆ ಕೇವಲ ಭತ್ಯೆ ನೀಡುವುದಷ್ಟೇ ಅಲ್ಲ, ಯುವಜನತೆಗೆ ಕೌಶಲ್ಯ ತರಬೇತಿ ನೀಡಿ, ರಾಜ್ಯ, ರಾಷ್ಟ್ರ, ವಿದೇಶಗಳಲ್ಲಿ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಕೌಶಲ್ಯ ತರಬೇತಿ ನೀಡಲಾಗುವುದು. ಯುವಜನತೆ ಕೌಶಲ್ಯಾಭಿವೃದ್ಧಿ ಇಲಾಖೆ ಕಾರ್ಯಕ್ರಮಕ್ಕೆ ಸೇವಾಸಿಂಧು ಯೋಜನೆಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಸ್ವಾವಲಂಬನೆಯ ಯುವಸಮುದಾಯಕ್ಕೆ ಆರ್ಥಿಕ ಶಕ್ತಿ ನೀಡಿ ಪ್ರೋತ್ಸಾಹಿಸುವ ಈ ಮಹತ್ವಾಕಾಂಕ್ಷೆ ಕಾರ್ಯಕ್ರಮವನ್ನು ಯುವಜನರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಫ್ರೀಡಂ ಪಾರ್ಕ್‌ಗೆ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ ಅವರ ಹೆಸರು ಇಡುವಂತೆ ಒತ್ತಾಯಿಸಿದರು.ಕಾರ್ಯಕ್ರಮದಲ್ಲಿ ಯುವನಿಧಿ ಯೋಜನೆ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಚೆಕ್ ನೀಡಲಾಯಿತು. ಸಚಿವರಾದ ಡಾ. ಎಂ.ಸಿ. ಸುಧಾಕರ್, ಕೆ.ಜೆ.ಜಾರ್ಜ್, ಬಿ.ನಾಗೇಂದ್ರ, ಮಂಕಾಳ ಎಸ್ ವೈದ್ಯ, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಬಿ.ಕೆ.ಸಂಗಮೇಶ, ಡಿ.ಜಿ.ಶಾಂತನಗೌಡ, ಶಾರದಾ ಪೂರ್ಯಾನಾಯ್ಕ್, ಟಿ.ಡಿ.ರಾಜೇಗೌಡ, ಜಿ.ಎಚ್.ಶ್ರೀನಿವಾಸ, ಎಚ್.ಡಿ.ತಮ್ಮಯ್ಯ, ಭೀಮಣ್ಣ ನಾಯ್ಕ, ವಿಧಾನಪರಿಷತ್ತು ಸದಸ್ಯ ಡಿ.ಎಸ್. ಅರುಣ್, ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಜಿಪಂ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‌ಕುಮಾರ್, ಜಿಲ್ಲಾ ಹಾಗೂ ರಾಜ್ಯಮಟ್ಟದ ಅಧಿಕಾರಿಗಳು ಇದ್ದರು.- - -ಬಾಕ್ಸ್:
ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ಐದನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಚನ್ನಬಸಪ್ಪ ಮತ್ತು ವಿಧಾನ ಪರಿಷತ್ತು ಸದಸ್ಯ ಡಿ.ಎಸ್.ಅರುಣ್ ಭಾಗಿಯಾಗಿದ್ದು ವಿಶೇಷವಾಗಿತ್ತು. ರಾಘವೇಂದ್ರ ಮತ್ತು ಚನ್ನಬಸಪ್ಪ ಅವರು ತಮ್ಮ ಪಕ್ಷದ ಕಾರ್ಯಕ್ರಮದ ಕುರಿತು ಸಭೆಯಲ್ಲಿ ಮಾತನಾಡಿದರು. ಯುವನಿಧಿ ಯೋಜನೆಯ ಜಾರಿ ಮಾಡಿದ ಸಿದ್ದರಾಮಯ್ಯ ಅವರನ್ನು ಶ್ಲಾಘಿಸಿದರು.- - - (-ಫೋಟೋ: )