ಮಣಿಪಾಲ್ ಆರೋಗ್ಯ ಕಾರ್ಡ್ 2024ರ ನೋಂದಣಿ ಆರಂಭ

| Published : Jun 19 2024, 01:00 AM IST

ಸಾರಾಂಶ

2000ದಲ್ಲಿ ‘ಇಡೀ ಕುಟುಂಬಕ್ಕಾಗಿ, ಶ್ರೇಷ್ಠ ಮೌಲ್ಯ, ವಿಶ್ವಾಸಾರ್ಹ ಸೇವೆ’ ಎಂಬ ಧ್ಯೇಯದೊಂದಿಗೆ ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸುವ ಗುರಿಯಿಂದ ಮಾಹೆಯ ಕುಲಪತಿ ಡಾ. ರಾಮದಾಸ್ ಎಂ. ಪೈ ಅವರ ನೇತೃತ್ವದಲ್ಲಿ ಮಣಿಪಾಲ್ ಹೆಲ್ತ್ ಕಾರ್ಡ್‌ನ್ನು ಆರಂಭಿಸಲಾಯಿತು.

ಕನ್ನಡಪ್ರಭ ವಾರ್ತೆ ಮಣಿಪಾಲ

ಆರ್ಥಿಕವಾಗಿ ಹಿಂದುಳಿದವರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡುವ ಮಣಿಪಾಲ ಆರೋಗ್ಯ ಕಾರ್ಡ್‌ನಿಂದ 2023ರಲ್ಲಿ 3.60 ಲಕ್ಷ ಮಂದಿ ಸುಮಾರು 16 ಕೋಟಿ ರು.ಗಳ ಉಚಿತ ಸೇವೆಯನ್ನು ಪಡೆದಿದ್ದಾರೆ. ಈ ಬಾರಿ 4 ಲಕ್ಷ ಮಂದಿಗೆ ಈ ಉಚಿತ ಆರೋಗ್ಯ ಸೇವೆಯನ್ನು ನೀಡುವ ಗುರಿ ಹೊಂದಲಾಗಿದೆ ಎಂದು ಇಲ್ಲಿನ ಮಾಹೆ ವಿವಿಯ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಹೇಳಿದ್ದಾರೆ.

ಅವರು ಮಂಗಳವಾರ ಮಣಿಪಾಲ ಆರೋಗ್ಯ ಕಾರ್ಡ್ 2024ರ ನೋಂದಣಿಗೆ ಚಾಲನೆ ನೀಡಿ ಸುದ್ದಿದಾರರೊಂದಿಗೆ ಮಾತನಾಡಿದರು.

2000ದಲ್ಲಿ ‘ಇಡೀ ಕುಟುಂಬಕ್ಕಾಗಿ, ಶ್ರೇಷ್ಠ ಮೌಲ್ಯ, ವಿಶ್ವಾಸಾರ್ಹ ಸೇವೆ’ ಎಂಬ ಧ್ಯೇಯದೊಂದಿಗೆ ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸುವ ಗುರಿಯಿಂದ ಮಾಹೆಯ ಕುಲಪತಿ ಡಾ. ರಾಮದಾಸ್ ಎಂ. ಪೈ ಅವರ ನೇತೃತ್ವದಲ್ಲಿ ಮಣಿಪಾಲ್ ಹೆಲ್ತ್ ಕಾರ್ಡ್‌ನ್ನು ಆರಂಭಿಸಲಾಯಿತು.

ಮಾಹೆಯ ಸಹ ಕುಲಪತಿ (ಆರೋಗ್ಯ ವಿಜ್ಞಾನ) ಡಾ. ಶರತ್ ಕೆ. ರಾವ್ ಮಾತನಾಡಿ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳೂ ಸೇರಿ ರಾಜ್ಯದ 15 ಜಿಲ್ಲೆಗಳು ಮತ್ತು ನೆರೆಯ ಕೇರಳ ಮತ್ತು ಗೋವಾಗಳಲ್ಲಿಯೂ ಕಾರ್ಡ್‌ನ ಲಾಭ ನೀಡಲಾಗುತ್ತಿದೆ ಎಂದವರು ಹೇಳಿದರು.

ಈ ಕಾರ್ಡುದಾರರು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ, ಉಡುಪಿಯ ಡಾ.ಟಿಎಂಎ ಪೈ ಆಸ್ಪತ್ರೆ, ಕಾರ್ಕಳದ ಡಾ.ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ, ಮಂಗಳೂರು ಮತ್ತು ಅತ್ತಾವರಗಳ ಕೆಎಂಸಿ ಆಸ್ಪತ್ರೆ, ಕಟೀಲಿನ ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆ ಮತ್ತು ಗೋವಾದ ಮಣಿಪಾಲ್ ಆಸ್ಪತ್ರೆಯಲ್ಲಿ ಪ್ರಯೋಜನ ಪಡೆಯಬಹುದು ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ತಿಳಿಸಿದರು.

ಆಸ್ಪತ್ರೆಗಳಲ್ಲಿನ ಇತರ ರಿಯಾಯಿತಿಗಳು ಮತ್ತು ಹೆಚ್ಚಿನ ಮಾಹಿತಿಗಾಗಿ, www.manipalhealthcard.com ಗೆ ಭೇಟಿ ನೀಡಿ ಅಥವಾ 9980854700 / 08202923748 ಅನ್ನು ಸಂಪರ್ಕಿಸಿ. ಎಲ್ಲ ಅಧಿಕೃತ ಪ್ರತಿನಿಧಿಗಳ ಮೂಲಕ ಕೂಡ ನೋಂದಣಿ ಸೌಲಭ್ಯ ಲಭ್ಯವಿದೆ ಎಂದವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದ ವ್ಯವಸ್ಥಾಪಕ ಮೋಹನ್ ಶೆಟ್ಟಿ, ಉಡುಪಿ ಟಿಎಂಎ ಪೈ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಶಶಿಕಿರಣ್, ಮಾಹೆ ಮಣಿಪಾಲದ ನಿರ್ವಹಣಾಧಿಕಾರಿ ಸಿ.ಜಿ. ಮುತ್ತಣ್ಣ, ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ.ಆನಂದ್ ವೇಣುಗೋಪಾಲ್, ಮಾರ್ಕೆಟಿಂಗ್ ಮುಖ್ಯಸ್ಥ ಕೆ. ಸಚಿನ್ ಕಾರಂತ್ ಉಪಸ್ಥಿತರಿದ್ದರು.

ಈ ಕಾರ್ಡಿನಿಂದ ಏನೇನು ರಿಯಾಯಿತಿಗಳಿವೆ?

ಮಣಿಪಾಲ ಆರೋಗ್ಯ ಕಾರ್ಡ್‌ದಾರರು ತಜ್ಞ ಮತ್ತು ಸೂಪರ್ ಸ್ಪೆಷಲಿಸ್ಟ್ ವೈದ್ಯರೊಂದಿಗೆ ಸಮಾಲೋಚನೆ ಶುಲ್ಕದಲ್ಲಿ ಶೇ.50, ರೋಗನಿರ್ಣಯ ಮತ್ತು ಪ್ರಯೋಗಾಲಯ ತನಿಖೆಗಳಲ್ಲಿ ಶೇ.25, ವಿಕಿರಣ ಶಾಸ್ತ್ರ ಸೇವೆ, ಹೊರರೋಗಿಯ ಸೇವೆ ಮತ್ತು ಮಧುಮೇಹ ಪಾದದ ಆರೈಕೆಯಲ್ಲಿ ಶೇ.20, ಡಯಾಲಿಸಿಸ್‌ನಲ್ಲಿ 100 ರು. ರಿಯಾಯಿತಿ, ಆಸ್ಪತ್ರೆಯ ಔಷಧಿಗಳ ಮೇಲೆ ಶೇ.10ರ ವರೆಗೆ ರಿಯಾಯಿತಿ ಮತ್ತು ಜನರಲ್ ವಾರ್ಡ್‌ನಲ್ಲಿ ಒಳರೋಗಿಗಳ ಬಿಲ್‌ಗಳಲ್ಲಿ (ಕನ್ಸುಮಬೆಲ್ಸ್ ಮತ್ತು ಪ್ಯಾಕೇಜ್‌ಗಳನ್ನು ಹೊರತುಪಡಿಸಿ) ಶೇ.25 ರಿಯಾಯಿತಿ ದೊರೆಯುತ್ತದೆ.