ಸಾರಾಂಶ
ಕನ್ನಡಪ್ರಭ ವಾರ್ತೆ ತುರುವೇಕೆರೆ
ನ್ಯಾಫೆಡ್ ಕೇಂದ್ರಕ್ಕೆ ಕೊಬ್ಬರಿ ನೀಡುವ ಸಲುವಾಗಿ ನೋಂದಣಿ ಪ್ರಕ್ರಿಯೆ ಸೋಮವಾರದಿಂದ ಪ್ರಾರಂಭವಾಗಿರುವುದರಿಂದ ರೈತರು ನಾ ಮುಂದು ತಾ ಮುಂದು ಎಂದು ನೋಂದಣಿ ಮಾಡಿಸುತ್ತಿರುವುದರಿಂದ ನೂಕು ನುಗ್ಗಲು ಉಂಟಾಗಿದೆ.ಪಟ್ಟಣದ ಎಪಿಎಂಸಿ ಆವರಣದಲ್ಲಿ ಕೊಬ್ಬರಿ ಖರೀದಿಸಲು ನೋಂದಣಿ ಕಾರ್ಯ ಆರಂಭಗೊಂಡಿದೆ.
ಕೊಬ್ಬರಿ ಬೆಲೆ ಕುಸಿತದಿಂದಾಗಿ ಕೊಬ್ಬರಿ ಬೆಳೆಗಾರರು ಬಹಳ ಸಂಕಷ್ಟ ಎದುರಿಸುವಂತಾಗಿದೆ. ಸರ್ಕಾರ ಕಳೆದ ತಿಂಗಳು ೨೦ ರಂದೇ ನ್ಯಾಫೆಡ್ ಮೂಲಕ ಕೊಬ್ಬರಿ ಖರೀದಿ ಕೇಂದ್ರ ತೆರೆಯುವುದಾಗಿ ಭರವಸೆ ನೀಡಿತ್ತು. ನಂತರ ಫೆಬ್ರವರಿ ಒಂದರಿಂದ ಆರಂಭಿಸುವುದಾಗಿ ಹೇಳಿತ್ತು. ಈಗ ಫೆಬ್ರವರಿ ೫ ರಿಂದ ನೋಂದಣಿ ಕಾರ್ಯ ಪ್ರಾರಂಭಿಸುವುದಾಗಿ ಘೋಷಿಸಿದೆ.ಈ ವಿಷಯ ತಿಳಿದ ತಾಲೂಕಿನ ರೈತರು ಸೋಮವಾರ ಬೆಳಿಗ್ಗೆಯಿಂದಲೇ ಆಧಾರ್ ಕಾರ್ಡ್, ಪಹಣಿ ಹಿಡಿದು ಸರತಿ ಸಾಲಿನಲ್ಲಿ ನಿಂತಿದ್ದರು. ಈ ಬಾರಿ ಎಫ್ಐ ಡಿ ರೈತರ ಬಯೋ ಮೆಟ್ರಿಕ್ ಮಾಡಲಾಗಿರುವುದರಿಂದ ಸರ್ವರ್ ಸಮಸ್ಯೆಯುಂಟಾಗಿ ರೈತರು ನೋಂದಣಿ ಸಾಧ್ಯವಾಗದೆ ನೂಕುನುಗ್ಗಲು ಉಂಟಾಗಿತ್ತು. ನೋಂದಣಿ ಮಾಡಲು ಆಗಮಿಸಿದ್ದ ಎಲ್ಲ ರೈತರೂ ಬಿಸಿಲಿನಲ್ಲಿ ನಿಂತಿದ್ದರು. ಹೆಚ್ಚು ನೋಂದಣಿ ಕೇಂದ್ರಗಳನ್ನು ತೆರೆಯಿರಿ, ಇಲ್ಲವಾದರೆ ಹೋಬಳಿವಾರು ನೋಂದಣಿ ಕೇಂದ್ರಗಳನ್ನು ತೆರೆಯುವಂತೆ ನ್ಯಾಫೆಡ್ ಅಧಿಕಾರಿಗಳು, ತಹಸೀಲ್ದಾರ್ ರನ್ನು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ವೈ.ಎಂ.ರೇಣುಕುಮಾರ್, ರೈತರು ಹಾಗೂ ನ್ಯಾಫೆಡ್ ಅಧಿಕಾರಿಗಳ ಜೊತೆ ಮಾತನಾಡಿದರು. ಸರ್ವರ್ ಸಮಸ್ಯೆ ಬಗೆಹರಿಸುವಂತೆಯೂ ನೋಂದಣಿ ಹಾಗೂ ಖರೀದಿ ಕೇಂದ್ರಗಳನ್ನು ಪ್ರತಿ ಹೋಬಳಿಗಳಲ್ಲಿ ಎರಡೆರೆಡು ಕೇಂದ್ರಗಳನ್ನು ತೆರೆಯುವಂತೆಯೂ ನ್ಯಾಫೆಡ್ ಅಧಿಕಾರಿಗೆ ಸೂಚಿಸಿದರು.ಜಿಲ್ಲಾ ನ್ಯಾಫೆಡ್ ಅಧಿಕಾರಿ ಕಿರಣ್ ಮಾತನಾಡಿ, ಇಂದು ನೋಂದಣಿ ಖರೀದಿಯನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದೆ. ಬುಧವಾರದಿಂದ ತಾಲೂಕಿನ ರೈತರ ಅನುಕೂಲಕ್ಕಾಗಿ ಹೋಬಳಿವಾರು ನೋಂದಣಿ ಖರೀದಿ ಕೇಂದ್ರ ಸ್ಥಾಪಿಸಲಾಗುವುದು. ತಾಲೂಕಿನಲ್ಲಿ ೮ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು, ಪಟ್ಟಣದ ಎಪಿಎಂಸಿಯಲ್ಲಿ ೨ ಕೇಂದ್ರ, ಮಾಯಸಂದ್ರ ೨, ದಬ್ಬೇಘಟ್ಟ ೨, ದಂಡಿನಶಿವರ ಹೋಬಳಿಯಲ್ಲಿ ೨ ಕೇಂದ್ರಗಳನ್ನು ತೆರೆಯಲಾಗುವುದು. ಆಯಾ ಹೋಬಳಿ ರೈತರು ತಮ್ಮ ಎಫ್ ಐಡಿ ನಂಬರ್, ಆಧಾರ್ ಕಾರ್ಡ್ ನೊಂದಿಗೆ ಹೆಬ್ಬೆಟ್ಟು ನೀಡಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.
---------ತುರುವೇಕೆರೆ ಎಪಿಎಂಸಿ ಆವರಣದಲ್ಲಿ ಕೊಬ್ಬರಿ ಖರೀದಿ ನೋಂದಣಿ ಮಾಡಿಸಲು ಸರತಿ ಸಾಲಿನಲ್ಲಿ ನಿಂತಿರುವ ರೈತರು.