ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ ತಡೆಗೆ ವಾಣಿಜ್ಯ ಬಳಕೆದಾರರು ಗೇಲ್ ಸಂಸ್ಥೆಯಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಕನ್ನಡಪ್ರಭ ವಾರ್ತೆ ವಿಧಾನಪರಿಷತ್ತು
ಇರಾನ್-ಇಸ್ರೇಲ್ ಯುದ್ಧದ ಪರಿಣಾಮ ರಾಜ್ಯದಲ್ಲಿ ಅಡುಗೆ ಅನಿಲಕ್ಕೆ ಸಂಬಂಧಿಸಿ ಉಂಟಾಗಿರುವ ತೀವ್ರ ಕೊರತೆ ಹಿನ್ನೆಲೆಯಲ್ಲಿ ವಾಣಿಜ್ಯ ಬಳಕೆದಾರರಿಗೆ ಪ್ರತಿ ದಿನದ ಬೇಡಿಕೆಯ ಶೇ.20ರಷ್ಟು ಸಿಲಿಂಡರ್ ಪೂರೈಸಲಾಗುವುದು ಹಾಗೂ ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ ತಡೆಗೆ ವಾಣಿಜ್ಯ ಬಳಕೆದಾರರು ಗೇಲ್ ಸಂಸ್ಥೆಯಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.ರಾಜ್ಯದಲ್ಲಿನ ಅಡುಗೆ ಅನಿಲ ಅಭಾವದ ಸಂಬಂಧ ವಿವರಣೆ ನೀಡಿರುವ ಕೆ.ಎಚ್.ಮುನಿಯಪ್ಪ, ಮುಖ್ಯಮಂತ್ರಿ ಅವರು ಕೇಂದ್ರ ಸರ್ಕಾರಕ್ಕೆ ಎರಡು ಬಾರಿ ಪತ್ರ ಬರೆದ ನಂತರ ಇದೀಗ ಕೇಂದ್ರ ಸರ್ಕಾರ ವಾಣಿಜ್ಯ ಬಳಕೆದಾರರಿಗೆ ಶೇ.20ರಷ್ಟು ಸಿಲಿಂಡರ್ ಮಂಜೂರು ಮಾಡಲಾಗಿದೆ. ಅದರಂತೆ ಪ್ರತಿದಿನ ಶಿಕ್ಷಣ ಸಂಸ್ಥೆಗಳಿಗೆ 4,200 ಸಿಲಿಂಡರ್, ಸರ್ಕಾರಿ ಸಂಸ್ಥೆಗಳು, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿ ಇನ್ನಿತರ ಬಳಕೆದಾರರಿಗೆ 1,200, ಕೃಷಿ ಸಂಬಂಧಿತ ಬಳಕೆದಾರರಿಗೆ 500 ಹಾಗೂ ಹೋಟೆಲ್ ಸೇರಿ ಇನ್ನಿತರ ವಾಣಿಜ್ಯ ಬಳಕೆದಾರರಿಗೆ 10 ಸಾವಿರ ಸಿಲಿಂಡರ್ ನೀಡಲಾಗುತ್ತದೆ. ಉಳಿದ 205 ಸಿಲಿಂಡರ್‌ಗಳನ್ನು ತುರ್ತು ಪರಿಸ್ಥಿತಿಗಾಗಿ ಕಾಯ್ದಿರಿಸಲಾಗುತ್ತದೆ. ಒಟ್ಟಾರೆ 16,105 ಸಿಲಿಂಡರ್‌ಗಳನ್ನು ಹಂಚಿಕೆ ಮಾಡಲಾಗುತ್ತಿದೆ ಎಂದರು.
ಹೋಟೆಲ್‌ಗಳಿಗೆ ಅಡುಗೆ ಅನಿಲ ಸಿಲಿಂಡರ್‌ನ ಹೆಚ್ಚು ಅವಶ್ಯಕತೆಯಿದೆ. ರಾಜ್ಯದಲ್ಲಿ ಪ್ರತಿದಿನ ಸುಮಾರು 45 ಸಾವಿರ ವಾಣಿಜ್ಯ ಸಿಲಿಂಡರ್‌ಗಳು ಹೋಟೆಲ್‌ಗಳಲ್ಲಿ ಬಳಕೆಯಾಗುತ್ತಿತ್ತು. ಈಗ ಅದು 16 ಸಾವಿರಕ್ಕಿಳಿದಿದೆ. ಆದರೂ, ಸೀಮಿತ ಸಂಪನ್ಮೂಲಗಳನ್ನು ಆದ್ಯತೆ ಮೇರೆಗೆ ಹಂಚಿಕೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಸೂಚನೆ ಹಾಗೂ ಸದ್ಯದ ಪರಿಸ್ಥಿತಿ ಆಧರಿಸಿ ಪ್ರತಿದಿನ 10 ಸಾವಿರ ಸಿಲಿಂಡರ್‌ಗಳನ್ನು ಪೂರೈಸಲಾಗುವುದು ಎಂದು ತಿಳಿಸಿದರು.ಸಿಲಿಂಡರ್‌ಗಳನ್ನು ಶೇಖರಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ದಂಧೆ ತಡೆಯಲು ಕೇಂದ್ರ ಸರ್ಕಾರ ಸೂಚಿಸಿ, ಕೆಲ ನಿರ್ದೇಶನ ನೀಡಿದೆ. ಅದರಂತೆ ಕಾಳಸಂತೆಯಲ್ಲಿ ಮಾರಾಟ ತಡೆಗೆ ಎಲ್ಲ ವಾಣಿಜ್ಯ ಬಳಕೆದಾರರು ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ (ಗೇಲ್)ದಲ್ಲಿ ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯಗೊಳಿಸಲಾಗಿದೆ. ಮುಂದಿನ ಒಂದು ವಾರದಲ್ಲಿ ವಾಣಿಜ್ಯ ಬಳಕೆದಾರರು ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ಗೃಹ ಬಳಕೆದಾರರಿಗೆ ಅಷ್ಟಾಗಿ ಸಮಸ್ಯೆಯಾಗಿಲ್ಲ. ಆದರೆ, ಗೃಹ ಬಳಕೆ ಸಿಲಿಂಡರ್ ಪಡೆಯುವ ದಿನ ಹೆಚ್ಚಿಸಲಾಗಿದೆ. ಅದರಂತೆ ನಗರ ಪ್ರದೇಶಗಳಲ್ಲಿ 25 ದಿನಕ್ಕೊಮ್ಮೆ ಹಾಗೂ ಗ್ರಾಮೀಣ ಭಾಗದಲ್ಲಿ 40 ದಿನಕ್ಕೊಮ್ಮೆ ಮಾತ್ರ ಗ್ಯಾಸ್ ಸಿಲಿಂಡರ್ ಪೂರೈಸಲಾಗುವುದು. ಅದರಿಂದ ಎಲ್ಲರಿಗೂ ಸಮಾನವಾಗಿ ಅಡುಗೆ ಅನಿಲ ದೊರೆಯಲಿದೆ. ಇನ್ನು, ಸಮಸ್ಯೆ ತಾತ್ಕಾಲಿಕವಾಗಿದ್ದು, ಅಲ್ಲಿಯವರೆಗೆ ಮರದ ಇಂಧನ, ವಿದ್ಯುತ್ ಆಧಾರಿತ ಇಂಡಕ್ಷನ್ ಸ್ಟೌವ್, ಬಯೋಗ್ಯಾಸ್ ಮತ್ತು ಸೌರಶಕ್ತಿ ಬಳಕೆಯತ್ತ ಗಮನಹರಿಸುವಂತೆ ಸಲಹೆ ನೀಡಿದರು.ಗ್ಯಾಸ್ ಕೊಡದಿದ್ದರೆ ಕಟ್ಟಿಗೆ ಕೊಡಿ:ಅಡುಗೆ ಅನಿಲದ ಅಭಾವದ ಬಗ್ಗೆ ಮುನಿಯಪ್ಪ ಅವರು ವಿವರಿಸುತ್ತಿದ್ದಂತೆ ಕಾಂಗ್ರೆಸ್‌ನ ಐವಾನ್ ಡಿಸೋಜಾ ಅವರು, ಅಡುಗೆ ಅನಿಲ ನೀಡಲಾಗದಿದ್ದರೆ ಕಟ್ಟಿಗೆಯನ್ನಾದರೂ ಕೊಡಿ. ಅದರಿಂದಲಾದರೂ ಹೋಟೆಲ್‌ಗಳು ಅಡುಗೆ ಮಾಡಿಕೊಳ್ಳಲಿ ಎಂದು ಹೇಳಿದರು. ಅದಕ್ಕೆ ಅಲ್ಲೇ ಇದ್ದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಮರ, ಗಿಡಗಳನ್ನು ಕಡಿಯುವಂತಿಲ್ಲ. ಹೀಗಾಗಿ ಕಟ್ಟಿಗೆಯೂ ಇಲ್ಲ ಎಂದು ಹೇಳಿದರು.
