ಸಾರಾಂಶ
ಜು.1ರಿಂದ ಎಲ್ಲ ಗ್ರಾಪಂಗಳಲ್ಲೂ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಗ್ರಾಮೀಣ ಭಾಗದಲ್ಲಿ ಜನನ ಮತ್ತು ಮರಣ ನೋಂದಣಿ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಗ್ರಾಮ ಪಂಚಾಯತಿ (ಗ್ರಾಪಂ) ಕಾರ್ಯದರ್ಶಿಗಳನ್ನು ಜನನ ಮತ್ತು ಮರಣ ನೋಂದಣಾಧಿಕಾರಿಗಳನ್ನಾಗಿ ನೇಮಿಸಲಾಗಿದ್ದು, ಜು.1ರಿಂದ ಎಲ್ಲ ಗ್ರಾಪಂಗಳಲ್ಲೂ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆಯುವಲ್ಲಿನ ವಿಳಂಬ ತಪ್ಪಿಸಲು ನೂತನ ವ್ಯವಸ್ಥೆ ತರಲಾಗಿದೆ. ಈ ಕುರಿತಂತೆ ಪೂರ್ವಭಾವಿಯಾಗಿ ಗ್ರಾಪಂ ಕಾರ್ಯದರ್ಶಿಗಳಿಗೆ ಇ-ಜನ್ಮ ತಂತ್ರಾಂಶ ಬಳಕೆ ಕುರಿತು ತರಬೇತಿ ನೀಡಲಾಗಿದೆ. ಜತೆಗೆ 21 ದಿನಗಳೊಳಗೆ ಜನನ-ಮರಣ ನೋಂದಣಿ ಮಾಡಿ, ಉಚಿತವಾಗಿ ಪ್ರಮಾಣಪತ್ರ ವಿತರಿಸುವಂತೆ ಸೂಚಿಸಲಾಗಿದೆ. ಅಲ್ಲದೆ, ಜನನ ಮತ್ತು ಮರಣ ಹೊಂದಿದ 30 ದಿನಗಳಿಂದ ಒಂದು ವರ್ಷಗಳವರೆಗೆ ನೋಂದಣಿಗೆ ಅರ್ಜಿ ಸಲ್ಲಿಸಿದರೆ ತಹಸೀಲ್ದಾರರ ಲಿಖಿತ ಅನುಮಪತಿ ಪಡೆದು 5 ರು. ಶುಲ್ಕ ಪಡೆದು ನೋಂದಣಿ ಮಾಡಿಕೊಳ್ಳಬೇಕು ಹಾಗೂ ಒಂದು ವರ್ಷದ ನಂತರದ ಅರ್ಜಿಗಳಿಗೆ ಮೊದಲನೇ ವರ್ಗದ ದಂಡಾಧಿಕಾರಿ ಅಥವಾ ಮಹಾಪ್ರಾಂತ ದಂಡಾಧಿಕಾರಿಗಳ ಆದೇಶದೊಂದಿಗೆ 10 ರು. ಶುಲ್ಕ ಪಡೆದು ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಜನನ ಮತ್ತು ಮರಣ ನೋಂದಣಿ ಸಂಬಂಧ ಸಂದಹವಿದ್ದಲ್ಲಿ ಸಾರ್ವಜನಿಕರು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿ ಹಾಗೂ ಜನನ, ಮರಣಗಳ ಮುಖ್ಯ ನೋಂದಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಬಹುದಾಗಿದೆ. ಹಾಗೆಯೇ, ಈಮೇಲ್ crbdkar@gmail.com/ejanmahelpdesk@gmail.com ಮತ್ತು ಇ-ಜನ್ಮ ಸಹಾಯವಾಣಿ 1800 425 6578 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ವಿವರಿಸಿದ್ದಾರೆ.