ಸಾರಾಂಶ
ಸೋಮರಡ್ಡಿ ಅಳವಂಡಿ
ಕೊಪ್ಪಳ:ಉಪನೋಂದಣಿ ಇಲಾಖೆಯಲ್ಲಿಯೇ ಬಾಲ್ಯವಿವಾಹ (ಬಾಲಕ ಅಪ್ರಾಪ) ನೋಂದಣಿ ಮಾಡಿಸಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಯುವಕನೇ ಅಪ್ರಾಪ್ತನಾಗಿದ್ದಾನೆ. ಹೀಗಾಗಿ ರಾಜ್ಯ ಮಕ್ಕಳ ರಕ್ಷಣಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ನೋಂದಣಿ ಇಲಾಖೆ ಅಧಿಕಾರಿಗಳಿಗೆ ಪತ್ರ ಮುಖೇನ ತಿಳಿಸಿದೆ.
ಆಗಿದ್ದೇನು?:ಗಂಗಾವತಿ ತಾಲೂಕಿನ ಉಪ ನೋಂದಣಿ ಇಲಾಖೆಯಲ್ಲಿ 2024 ಸೆ.17ರಂದು ಯುವಕ-ಯುವತಿ ಕಾನೂನು ಪ್ರಕಾರ ವಿವಾಹವಾಗಿದ್ದಾರೆಂದು ಅಧಿಕಾರಿಗಳೇ ಶರಾ ಬರೆದಿದ್ದಾರೆ. ಆದರೆ, ಮದುವೆಯಾದ ಬಾಲಕನೇ ಅಪ್ರಾಪ್ತನಾಗಿದ್ದಾನೆ. ನಿಯಮಾನುಸಾರ ವಿವಾಹವಾಗಲು ಬಾಲಕನಿಗೆ 21 ವರ್ಷ ಆಗಿರಬೇಕೆಂದು ಕಾನೂನು ಹೇಳುತ್ತದೆ. ಆದರೆ, ಗಂಗಾವತಿ ನಗರದ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಯುವಕನಿಗೆ 20 ವರ್ಷ 6 ತಿಂಗಳು ಆಗಿದೆ. ಬಾಲ್ಯವಿವಾಹ ತಡೆಯಬೇಕಾದ ಅಧಿಕಾರಿಗಳು ಇವರಿಬ್ಬರ ಮದುವೆಗೆ ಕಾನೂನಾತ್ಮಕ ಅನುಮೋದನೆ ನೀಡಿದ್ದಾರೆ.
ಪತ್ತೆಯಾಗಿದ್ದು ಹೇಗೆ?:ನೋಂದಣಿ ಇಲಾಖೆಯಿಂದಲೇ ಬಾಲಕ-ಬಾಲಕಿ ಮದುವೆಗೆ ಶರಾ ಬರೆದಿರುವ ಕುರಿತು ರಾಜ್ಯ ಮಕ್ಕಳ ಹಕ್ಕುಗಳ ಆಯೋಗಕ್ಕೆ ಖಚಿತ ಮಾಹಿತಿ ಬಂದಿದೆ. ಇದರ ಆಧಾರದಲ್ಲಿಯೇ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಘಟನೆಯ ವಿವರಣೆ ನೀಡುವಂತೆ ನೋಂದಣಿ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದೆ. ಸರ್ಕಾರಿ ಇಲಾಖೆಯಲ್ಲಿಯೇ ಅಧಿಕಾರಿಗಳು ದಾಖಲೆಯನ್ನು ಸರಿಯಾಗಿ ನೋಡದೆ ಅದೇಗೆ ಬಾಲ್ಯವಿವಾಹ ಮಾಡಿಸಿದ್ದಾರೆಂದು ಪ್ರಶ್ನಿಸಿದೆ. ಹೀಗೆ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳು ವಿರುದ್ಧ ಕ್ರಮವಹಿಸುವಂತೆ ತಾಕೀತು ಮಾಡಿದೆ.
ನೋಟಿಸ್ ಜಾರಿ:ರಾಜ್ಯ ಮಕ್ಕಳ ರಕ್ಷಣಾ ಆಯೋಗ ಪತ್ರ ಬರೆಯುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಜಿಲ್ಲಾ ನೋಂದಣಾಧಿಕಾರಿಗಳು ಗಂಗಾವತಿ ನೋಂದಣಿ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿ ವರದಿ ನೀಡುವಂತೆ ಸೂಚಿಸಿದ್ದಾರೆ.
ದಾಖಲೆ ಪರಿಶೀಲನೆ:ಯುವಕ-ಯುವತಿ ಮದುವೆ ಮಾಡಿಸಿರುವ ದಾಖಲೆಗಳನ್ನು ಗಂಗಾವತಿ ಉಪನೋಂದಣಿ ಇಲಾಖೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ತಡಕಾಡುತ್ತಿದೆ. ಇದರಿಂದ ನೋಂದಣಿ ಇಲಾಖೆ ಅಧಿಕಾರಿಗಳಿಗೆ ಸಂಕಷ್ಟ ಎದುರಾಗಿದೆ. ಬಾಲ್ಯ ವಿವಾಹಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧವೂ ಪ್ರತ್ಯೇಕ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲು ಮುಂದಾಗಿದೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಅವರು, ಸರ್ಕಾರಿ ಕಚೇರಿಯಲ್ಲಿ ಬಾಲ್ಯವಿವಾಹ ಆದರೆ ಹೇಗೆ. ನೋಂದಣಿ ಮಾಡುವುದಾಗ ದಾಖಲೆ ಪರಿಶೀಲಿಸಿಲ್ಲವೆ ಎಂದು ಪ್ರಶ್ನಿಸಿದ್ದಾರೆ. ಈ ಕುರಿತು ಸೂಕ್ತ ದಾಖಲೆಗಳನ್ನು ಪರಿಶೀಲಿಸುವಂತೆ ಮಕ್ಕಳ ರಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ.ಗಂಗಾವತಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಬಾಲ್ಯವಿವಾಹ ನೋಂದಣಿಯಾಗಿರುವ ಬಗ್ಗೆ ರಾಜ್ಯ ಮಕ್ಕಳ ರಕ್ಷಣಾ ಆಯೋಗದಲ್ಲಿ ಸ್ವಯಂ ದೂರು ದಾಖಲಿಸಿಕೊಂಡಿದ್ದು, ಸೂಕ್ತ ಕ್ರಮಕ್ಕೆ ಜಿಲ್ಲಾ ನೋಂದಣಾಧಿಕಾರಿಗಳಿಗೂ ಸೂಚಿಸಲಾಗಿದೆ.ಶೇಖರಗೌಡ ರಾಮತ್ನಾಳ ಸದಸ್ಯರು ರಾಜ್ಯ ಮಕ್ಕಳ ರಕ್ಷಣಾ ಆಯೋಗ