- ಸಂತ್ರಸ್ಥ ಬಾಲಕನ ತಾಯಿ ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆ - ಸ್ವಾಮೀಜಿ ವಿರುದ್ಧ ಮಠದ ಟ್ರಸ್ಟಿಗಳ ಸಂಚು: ಪರಮೇಶ್ವರ ಗೌಡ ಕಿಡಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಹರಿಹರ ಮಠದ ಬಾಲಕನ ಮೇಲೆ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿದ್ದ ಶ್ರೀ ವಚನಾನಂದ ಸ್ವಾಮೀಜಿಗೆ ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯವು ಸೋಮವಾರ ರೆಗ್ಯುಲರ್‌ ಬೇಲ್ ಮಂಜೂರು ಮಾಡಿದೆ.

ನಗರದ ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ಸೋಮವಾರ ನ್ಯಾಯಾಧೀಶರಾದ ಶ್ರೀರಾಮ ನಾರಾಯಣ ಹೆಗಡೆ ಅವರು ಶ್ರೀ ವಚನಾನಂದ ಸ್ವಾಮೀಜಿಗೆ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚರಣೆ ನಡೆಸಿದರು. ಅನಂತರ ರೆಗ್ಯುಲರ್ ಜಾಮೀನು ಮಂಜೂರು ಮಾಡಿ, ಆದೇಶಿಸಿದರು. ಇದರೊಂದಿಗೆ ಸ್ವಾಮೀಜಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.


ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಹಿಂದೆ ಹರಿಹರದ ಪಂಚಮಸಾಲಿ ಮಠದಲ್ಲಿದ್ದ ಬಾಲಕನೊಬ್ಬನಿಗೆ ಲೈಂಗಿಕ ಕಿರುಕುಳ ನೀಡಿದ್ದ ಬಗ್ಗೆ ಸಂತ್ರಸ್ಥ ಬಾಲಕನ ತಾಯಿ ದೂರು ನೀಡಿದ್ದರು. ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಝೀರೋ ಪ್ರಕರಣ ದಾಖಲಾಗಿ ನಂತರ ಅದನ್ನು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು.

ಪ್ರಕರಣ ದಾಖಲಾಗುವ ಮುನ್ನವೇ ಶ್ರೀ ವಚನಾನಂದ ಸ್ವಾಮೀಜಿ ನಿರೀಕ್ಷಣಾ ಜಾಮೀನು ಪಡೆದಿದ್ದರು. ಜಾಮೀನು ರದ್ದು ಕೋರಿ ಸಂತ್ರಸ್ಥ ಬಾಲಕನ ತಾಯಿಯು ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಸ್ವಾಮೀಜಿಗೆ ನೀಡಿದ್ದ ಜಾಮೀನು ರದ್ಧುಪಡಿಸಿತ್ತು. ಅಲ್ಲದೇ, ರೆಗ್ಯುಲರ್ ಬೇಲ್ ಪಡೆಯಲು ಮೂರು ವಾರಗಳ ಕಾಲಾವಕಾಶ‍ನ್ನೂ ಹೈಕೋರ್ಟ್ ನೀಡಿತ್ತು.

ರೆಗ್ಯುಲರ್ ಬೇಲ್‌ಗೆ ಅರ್ಜಿ ಸಲ್ಲಿಸಿದ್ದ ಶ್ರೀ ವಚನಾನಂದ ಸ್ವಾಮೀಜಿ ಅರ್ಜಿಗೆ ತಕರಾರು ಅರ್ಜಿ ಸಲ್ಲಿಕೆಯಾಗಿತ್ತು. ದೂರುದಾರ, ಸರ್ಕಾರದ ಪರ ವಕೀಲರಿಂದ ತಕರಾರು ಅರ್ಜಿಗಳನ್ನು ಸಲ್ಲಿಕೆಯಾಗಿದ್ದವು. ವಾದ- ಪ್ರತಿ ವಾದ ಆಲಿಸಿದ ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯ ಸೋಮವಾರ ಆದೇಶ ಕಾಯ್ದಿರಿಸಿ, ರೆಗ್ಯುಲರ್ ಬೇಲ್ ಮಂಜೂರು ಮಾಡಿದೆ. ಸ್ವಾಮೀಜಿಗೆ ರೆಗ್ಯುಲರ್‌ ಬೇಲ್ ಮಂಜೂರಾದ ಹಿನ್ನೆಲೆಯಲ್ಲಿ ಸಂತ್ರಸ್ಥ ಬಾಲಕನ ತಾಯಿ ಪರ ವಕೀಲರು ಮತ್ತೆ ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ.

- - -

(ಬಾಕ್ಸ್‌)

* ಪಂಚಮಸಾಲಿ ಟ್ರಸ್ಟಿಗಳ ನಡೆಗೆ ತೀವ್ರ ಆಕ್ಷೇಪ ಸ್ವಾಮೀಜಿಗೆ ರೆಗ್ಯುಲರ್ ಬೇಲ್ ಮಂಜೂರಾದ ಹಿನ್ನೆಲೆಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಹರಿಹರ ಪಂಚಮಸಾಲಿ ಮಠದ ಲೆಕ್ಕ ಕೊಡಿ ಚಳವಳಿ ಸಮಿತಿ ಅಧ್ಯಕ್ಷ ಪರಮೇಶ್ವರ ಗೌಡ, ಶ್ರೀ ವಚನಾನಂದ ಸ್ವಾಮೀಜಿ ವಿರುದ್ಧ ಶ್ರೀ ಮಠದ ಟ್ರಸ್ಟ್‌ನವರು ಸಂಚು ಮಾಡಿದ್ದರು. ಇಂತಹ ಅನೈತಿಕ ವ್ಯವಸ್ಥೆಯಿಂದ ಹೊರ ಬಂದು, ಟ್ರಸ್ಟ್‌ನವರು ನೈತಿಕವಾಗಿ ಇರಬೇಕು ಎಂದರು.

ಇನ್ನಾದರೂ ಟ್ರಸ್ಟ್‌ನವರು, ಸಮಾಜದ ಮುಖಂಡರು ಜಾಗೃತರಾಗಬೇಕು. ಸೂಕ್ತವಾಗಿ ಬಂದು ಕುಳಿತು, ಸಮಸ್ಯೆ ಬಗೆಹರಿಸಿದರೆ ಗೌರವ ಬರುತ್ತದೆ. ಇಲ್ಲವಾದರೆ ಅಧೋಗತಿಗೆ ಹೋಗುತ್ತಾರೆ. ಸ್ವಾಮೀಜಿಗೆ ರೆಗ್ಯುಲರ್ ಬೇಲ್ ಮಂಜೂರಾಗಿರುವುದು ಸತ್ಯಕ್ಕೆ ಸಿಕ್ಕ ಜಯವಾಗಿದೆ. ಮಠವು ಉತ್ತರೋತ್ತರವಾಗಿ ಬೆಳೆಯಬೇಕು. ಮಠದಲ್ಲಿ ಧಾರ್ಮಿಕ ಆಚರಣೆ, ಕಾರ್ಯಗಳು ನಿತ್ಯ ನಿರಂತರ ಮುಂದುವರಿಯಬೇಕು. ಶ್ರೀಗಳ ಪರ ವಕೀಲರಾದ ಎಸ್.ವಿ.ಪಾಟೀಲ ಸೇರಿದಂತೆ ಎಲ್ಲಾ ನ್ಯಾಯವಾದಿಗಳಿಗೆ ಅಭಿನಂದಿಸುತ್ತೇನೆ ಎಂದು ಅವರು ತಿಳಿಸಿದರು.

- - -

(ಬಾಕ್ಸ್‌)

* ಸ್ವಾಮೀಜಿಗೆ ಬೇಲ್ ಹಿನ್ನೆಲೆ ಹೈಕೋರ್ಟ್ ಮೊರೆ- ಸಂತ್ರಸ್ಥ ಬಾಲಕನ ತಾಯಿ ಪರ ವಕೀಲ ರಮೇಶ ಕಲಾಲ್ - - - ದಾವಣಗೆರೆ: ಹರಿಹರ ಶ್ರೀ ವಚನಾನಂದ ಸ್ವಾಮೀಜಿಗೆ ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯದ ರೆಗ್ಯುಲರ್ ಬೇಲ್ ಮಂಜೂರು ಮಾಡಿದ್ದು, ಕೆಲವೊಂದು ಷರತ್ತುಗಳನ್ನು ವಿಧಿಸಿ. ನಮಗೆ ಇನ್ನೂ ಆದೇಶದ ಪ್ರತಿ ತಲುಪಿಲ್ಲ ಎಂದು ಹರಿಹರ ಪಂಚಮಸಾಲಿ ಪೀಠದ ಸಂತ್ರಸ್ಥ ಬಾಲಕನ ತಾಯಿ ಪರ ವಕೀಲ ರಮೇಶ ಕಲಾಲ್ ತಿಳಿಸಿದರು. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಚನಾನಂದ ಸ್ವಾಮೀಜಿಗೆ ರೆಗ್ಯುಲರ್ ಬೇಲ್ ಮಂಜೂರಾಗಿದ್ದು, ಕೆಲವೊಂದು ಷರತ್ತುಗಳನ್ನೂ ವಿಧಿಸಲಾಗಿದೆ. ಆದೇಶದ ಪ್ರತಿ ಇನ್ನೂ ನಮಗೆ ತಲುಪಿಲ್ಲ. ನ್ಯಾಯಾಲಯದ ಆದೇಶವನ್ನು ನಾವೆಲ್ಲರೂ ಗೌರವಿಸಬೇಕು. ನಮ್ಮ ಕಕ್ಷಿದಾರರ ಜೊತೆಗೆ ಚರ್ಚಿಸಿದ ನಂತರ ಹೈಕೋರ್ಟ್ ಮೊರೆ ಹೋಗುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ. ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. - - - (ಬಾಕ್ಸ್‌) * ಬೇಲ್ ಮಂಜೂರು: ಸಿಹಿ ಹಂಚಿ ಸಂಭ್ರಮ ದಾವಣಗೆರೆ ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ಶ್ರೀ ವಚನಾನಂದ ಸ್ವಾಮೀಜಿಗೆ ರೆಗ್ಯುಲರ್ ಬೇಲ್ ಮಂಜೂರಾಗುತ್ತಿದ್ದಂತೆ ಸ್ವಾಮೀಜಿ ಬೆಂಬಲಿಗರು ಸಂಭ್ರಮಿಸಿದರು. ನಗರದ ನ್ಯಾಯಾಲಯದ ಹೊರಗೆ ಸ್ವಾಮೀಜಿ ಪರ ವಕೀಲರಿಗೆ ಸ್ವಾಮೀಜಿಗಳ ಭಕ್ತರು ಸಿಹಿ ತಿನ್ನುವ ಮೂಲಕ ಸಂಭ್ರಮಿಸಿದರು. ಸ್ವಾಮೀಜಿ ಪರ ವಕೀಲ ಎಸ್.ವಿ.ಪಾಟೀಲರಿಗೆ ಲೆಕ್ಕ ಕೊಡಿ ಚಳವಳಿ ಸಮಿತಿ ಅಧ್ಯಕ್ಷ ಪರಮೇಶ್ವರ ಗೌಡ ಇತರರು ಸಿಹಿ ತಿನ್ನಿಸಿ, ಅಭಿನಂದಿಸಿದರು.- - -

(ಫೋಟೋ: ವಚನಾನಂದ ಶ್ರೀ)