ಮಾಮೂಲಿ ಬೈಕ್‌ ಟ್ಯಾಕ್ಸಿ ಸೇವೆ ಅಬಾಧಿತ: ರ್‍ಯಾಪಿಡೋ ಸ್ಪಷ್ಟನೆ

| Published : Mar 13 2024, 02:03 AM IST

ಸಾರಾಂಶ

ಎಲೆಕ್ಟ್ರಿಕ್‌ ಬೈಕ್‌ ಟ್ಯಾಕ್ಸಿ ಸೇವೆ ಮಾತ್ರ ರದ್ದಾಗಿದ್ದು, ಮಾಮೂಲಿ ಬೈಕ್‌ ಟ್ಯಾಕ್ಸಿಗೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ರ್‍ಯಾಪಿಡೋ ಸ್ಪಷ್ಟಪಡಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಸರ್ಕಾರ 2021ರಲ್ಲಿ ಜಾರಿಗೆ ತಂದಿದ್ದ ಎಲೆಕ್ಟ್ರಿಕ್‌ ಬೈಕ್‌ ಟ್ಯಾಕ್ಸಿ ನೀತಿ ಹಿಂಪಡೆದಿರುವುದರಿಂದ ಎಲೆಕ್ಟ್ರಿಕ್‌ ಬೈಕ್‌ ಟ್ಯಾಕ್ಸಿ ಸೇವೆ ಮಾತ್ರ ರದ್ದಾಗಿದ್ದು, ಮಾಮೂಲಿ ಬೈಕ್‌ ಟ್ಯಾಕ್ಸಿಗೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ರ್‍ಯಾಪಿಡೋ ಕಾನೂನು ಸಲಹೆಗಾರ ಯತೀಶ್‌ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಶ್ಲಾಘನೀಯ. ಆದರೆ, ರ್‍ಯಾಪಿಡೋ ಬೈಕ್‌ ಟ್ಯಾಕ್ಸಿಯನ್ನೂ ರದ್ದು ಮಾಡಲಾಗಿದೆ ಎಂದು ಸುದ್ದಿ ಹರಡಲಾಗುತ್ತಿದೆ. ರ್‍ಯಾಪಿಡೋ ಸಂಸ್ಥೆ ಹೈಕೋರ್ಟ್‌ ಮಧ್ಯಂತರ ಆದೇಶದಂತೆ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಸರ್ಕಾರ ಬೈಕ್‌ ಟ್ಯಾಕ್ಸಿ ಸೇವೆಯನ್ನು ರದ್ದು ಮಾಡಿಲ್ಲ. ಇನ್ನು 10 ದಿನಗಳಲ್ಲಿ ಬೈಕ್‌ ಟ್ಯಾಕ್ಸಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಯಲಿದೆ. ಹೈಕೋರ್ಟ್‌ ನೀಡುವ ಆದೇಶದಂತೆ ನಮ್ಮ ಸೇವೆ ಮುಂದುವರಿಯಲಿದೆ ಎಂದರು.

ಜಮ್ಮು-ಕಾಶ್ಮೀರ ಹಾಗೂ ಕೇರಳ ರಾಜ್ಯಗಳನ್ನು ಹೊರತುಪಡಿಸಿ ದೇಶದ ಎಲ್ಲ ರಾಜ್ಯಗಳಲ್ಲೂ ರ್‍ಯಾಪಿಡೋ ಬೈಕ್‌ ಟ್ಯಾಕ್ಸಿ ಸೇವೆ ನೀಡುತ್ತಿದೆ. ರಾಜ್ಯದಲ್ಲಿ ಕಳೆದ 8 ವರ್ಷಗಳಲ್ಲಿ 10 ಲಕ್ಷಕ್ಕೂ ಹೆಚ್ಚಿನ ಚಾಲಕರು ರ್‍ಯಾಪಿಡೋ ಅಡಿಯಲ್ಲಿ ಬೈಕ್‌ ಟ್ಯಾಕ್ಸಿ ಸೇವೆ ನೀಡುತ್ತಿದ್ದಾರೆ. ಅವರಿಗೆ ಆರ್ಥಿಕವಾಗಿ ನೆರವಾಗುತ್ತಿದೆ. ಅದೇ ರೀತಿ ಗ್ರಾಹಕರ ಸುರಕ್ಷತೆಗಾಗಿ ಬೈಕ್‌ ಟ್ಯಾಕ್ಸಿ ಆ್ಯಪ್‌ನಲ್ಲಿ ಗ್ರಾಹಕರ ಸಹಾಯವಾಣಿ, ಲೊಕೇಷನ್‌ ಶೇರ್‌ ಮಾಡುವ ಅವಕಾಶ, ಎಸ್‌ಒಪಿ ಬಟನ್‌ ಸೇರಿ 8 ಸುರಕ್ಷತಾ ಕ್ರಮಗಳನ್ನು ವಹಿಸಲಾಗಿದೆ. ಎಲ್ಲ ರೀತಿಯಲ್ಲೂ ರ್‍ಯಾಪಿಡೋ ಬೈಕ್‌ ಟ್ಯಾಕ್ಸಿ ಸುರಕ್ಷಿತವಾಗಿ ಸೇವೆ ನೀಡುತ್ತಿದೆ ಎಂದು ಹೇಳಿದರು.