ಉತ್ತಮ ಆರೋಗ್ಯಕ್ಕೆ ನಿಯಮಿತ ಆರೋಗ್ಯ ತಪಾಸಣೆ ಅಗತ್ಯ-ತೋಂಟದ ಡಾ. ಸಿದ್ಧರಾಮ ಶ್ರೀ

| Published : Apr 08 2025, 12:30 AM IST

ಉತ್ತಮ ಆರೋಗ್ಯಕ್ಕೆ ನಿಯಮಿತ ಆರೋಗ್ಯ ತಪಾಸಣೆ ಅಗತ್ಯ-ತೋಂಟದ ಡಾ. ಸಿದ್ಧರಾಮ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಆಧುನಿಕ ದಿನಗಳಲ್ಲಿ ದೈಹಿಕ ಶ್ರಮ ಕ್ಷೀಣಿಸಿ ಮಾನಸಿಕ ಶ್ರಮ ಹೆಚ್ಚಾಗುತ್ತಿದ್ದು, ದೈನಂದಿನ ವೃತ್ತಿಪರ ಜಂಜಾಟಗಳ ಮಧ್ಯೆ ಆರೋಗ್ಯದ ಕಾಳಜಿ ವಹಿಸದೇ ಇರುವುದು ಅಪಾಯಕಾರಿಯಾಗಿದೆ. ನಿಯಮಿತ ಆರೋಗ್ಯ ತಪಾಸಣೆ ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಪ್ರತಿ ವರ್ಷದ ತೋಂಟದಾರ್ಯ ಜಾತ್ರೆಯಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.

ಗದಗ: ಆಧುನಿಕ ದಿನಗಳಲ್ಲಿ ದೈಹಿಕ ಶ್ರಮ ಕ್ಷೀಣಿಸಿ ಮಾನಸಿಕ ಶ್ರಮ ಹೆಚ್ಚಾಗುತ್ತಿದ್ದು, ದೈನಂದಿನ ವೃತ್ತಿಪರ ಜಂಜಾಟಗಳ ಮಧ್ಯೆ ಆರೋಗ್ಯದ ಕಾಳಜಿ ವಹಿಸದೇ ಇರುವುದು ಅಪಾಯಕಾರಿಯಾಗಿದೆ. ನಿಯಮಿತ ಆರೋಗ್ಯ ತಪಾಸಣೆ ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಪ್ರತಿ ವರ್ಷದ ತೋಂಟದಾರ್ಯ ಜಾತ್ರೆಯಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.

ಅವರು ಭಾನುವಾರ ನಗರದ ತೋಂಟದಾರ್ಯ ಕಲ್ಯಾಣಕೇಂದ್ರದಲ್ಲಿ 2025ನೇ ತೋಂಟದಾರ್ಯ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸಾನಿಧ್ಯವಹಿಸಿ ಮಾತನಾಡಿದರು. ಆರೋಗ್ಯವೇ ಮಾನವನ ನಿಜವಾದ ಸಂಪತ್ತಾಗಿದ್ದು, ನೆಮ್ಮದಿಯುತ ಜೀವನಕ್ಕೆ ಆರೋಗ್ಯವೇ ಅಡಿಗಲ್ಲಾಗಿದೆ ಎಂದರು.

ಈ ಬಾರಿಯ ಜಾತ್ರಾ ಸಮಿತಿ ಅಧ್ಯಕ್ಷರಾದ ಡಾ.ಧನೇಶ್ ದೇಸಾಯಿ ಅವರು ಖುದ್ದು ವೈದ್ಯರಾಗಿರುವ ಕಾರಣ ವಿಶೇಷ ಕಾಳಜಿ ವಹಿಸಿ ನುರಿತ ವೈದ್ಯರ ತಂಡವನ್ನೇ ಶಿಬಿರಕ್ಕೆ ಕರೆತಂದಿದ್ದು, ರೋಗಿಗಳಿಗೆ ವೈದ್ಯರೇ ದೇವರಾದರೆ ತಮಗೆ ರೋಗಿಗಳೇ ದೇವರೆಂದು ತಿಳಿದು ವೈದ್ಯರು ಸೇವೆ ಮಾಡುವುದು ಅಭಿನಂದನಾರ್ಹ ಎಂದರು.

ಜಾತ್ರಾ ಸಮಿತಿ ಅಧ್ಯಕ್ಷ ಡಾ. ಧನೇಶ ದೇಸಾಯಿ ಮಾತನಾಡಿ, ಈ ಬಾರಿಯ ಜಾತ್ರಾ ಮಹೋತ್ಸವದಲ್ಲಿ ವಿಶಿಷ್ಟ ಹಾಗೂ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ವ್ಯಸನ ಮುಕ್ತ ಸಮಾಜಕ್ಕೆ ಪಾದಯಾತ್ರೆ, ಆರೋಗ್ಯ ತಪಾಸಣೆ, ಕೃಷಿ ಮೇಳಗಳು ಅವುಗಳಲ್ಲಿ ಪ್ರಮುಖವಾಗಿವೆ. ನಿಯಮಿತ ಆರೋಗ್ಯ ತಪಾಸಣೆ ಇಂದಿನ ದಿನಮಾನದ ಅಗತ್ಯವಾಗಿದ್ದು, ಅನೇಕ ವೈದ್ಯರು ಶ್ರೀಮಠದ ಮೇಲಿನ ಅಭಿಮಾನ ಹಾಗೂ ಗೌರವಕ್ಕಾಗಿ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ ಎಂದರು.

ಮನೋವೈದ್ಯರಾದ ಡಾ. ಆನಂದ್ ಪಾಂಡುರಂಗಿ ತಮ್ಮ ಹಾಗೂ ತೋಂಟದಾರ್ಯ ಮಠದ ನಡುವಿನ ನಿರಂತರ 40 ವರ್ಷಗಳ ಅವಿನಾಭಾವ ಸಂಬಂಧದ ಕುರಿತು ಮಾತನಾಡಿ, ಲಿಂಗೈಕ್ಯ ತೋಂಟದ ಸಿದ್ಧಲಿಂಗ ಶ್ರೀಗಳ ಪ್ರೋತ್ಸಾಹವನ್ನು ಸ್ಮರಿಸಿ, ಪುತ್ರ ಡಾ. ಆದಿತ್ಯ ಪಾಂಡುರಂಗಿ ಹಾಗೂ ಇತರೆ ವೈದ್ಯರ ತಂಡದೊಡನೆ ಮನೋರೋಗಿಗಳಿಗೆ ಸೂಕ್ತ ಸಲಹೆ-ಸೂಚನೆ ಹಾಗೂ ಚಿಕಿತ್ಸೆ ನೀಡಿದರು. ಹೃದಯ ಸ್ತಂಭನವಾದಾಗ ಸಾಮಾನ್ಯ ನಾಗರಿಕರು ಯಾವ ಪ್ರಾಥಮಿಕ ಕ್ರಮ ಕೈಕೊಳ್ಳಬೇಕು ಎಂಬುದರ ಕುರಿತು ಪ್ರಾತ್ಯಕ್ಷಿಕೆ ತೋರಿಸಲಾಯಿತು ಹಾಗೂ ಕಿಡ್ನಿ, ಲಿವರ್, ಕಣ್ಣು ಸೇರಿದಂತೆ ಅಂಗಾಂಗಗಳ ದಾನದ ಮಹತ್ವವನ್ನು ಕುರಿತು ಜಾಗೃತಿ ಮೂಡಿಸಲಾಯಿತು. ಜಾತ್ರಾ ಆರೋಗ್ಯ ಸಮಿತಿ ಅಧ್ಯಕ್ಷ ಡಾ. ಶರಣಬಸವೇಶ್ವರ ಆಲೂರ, ಎಲುವು ಕೀಲು ತಜ್ಞರಾದ ಡಾ.ಎಸ್.ಬಿ. ಶೆಟ್ಟರ್, ಡಾ. ಪ್ರಕಾಶ ಸಂಕನೂರ, ಡಾ. ಸಂದೀಪ ಕವಳಿಕಾಯಿ, ಡಾ. ಶ್ರೀಧರ ಕುರಡಗಿ, ಡಾ.ಎಸ್.ಎನ್. ಬೆಳವಡಿ, ಬಸವರಾಜ ಚನ್ನಪ್ಪಗೌಡರ, ಡಾ.ಜಯಕುಮಾರ ಬ್ಯಾಳಿ ಸೇರಿದಂತೆ ಅನೇಕ ವೈದ್ಯರು ಪಾಲ್ಗೊಂಡಿದ್ದರು.

ನ್ಯಾಶನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಶನ್, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್, ಡಿಜಿಎಂ ಆಯುರ್ವೇದ ಕಾಲೇಜು, ಚಿರಾಯು ಆಸ್ಪತ್ರೆ ಗಳು ಜಾತ್ರಾ ಸಮಿತಿಗೆ ಸಹಯೋಗ ನೀಡಿದವು. ಹೃದಯರೋಗ ತಪಾಸಣೆ, ಸ್ತ್ರೀರೋಗ, ಎಲುವು-ಕೀಲು, ಕಿವಿ, ಮೂಗು, ಗಂಟಲು, ಚರ್ಮರೋಗ, ಮಧುಮೇಹ, ಬಿ.ಪಿ, ಮೂಳೆಗಳ ಸಾಂದ್ರತೆ, ಮೂತ್ರಪಿಂಡ ರೋಗ, ನರದೌರ್ಬಲ್ಯ ಹೀಗೆ ಅನೇಕ ರೋಗಗಳಿಗೆ 50ಕ್ಕೂ ಅಧಿಕ ಆಯುರ್ವೇದ ಹಾಗೂ ಆಲೋಪಥಿಕ್ ವೈದ್ಯರಿಂದ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಜರುಗಿತು.

ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟರ, ಉಪಾಧ್ಯಕ್ಷ ಕರವೀರಯ್ಯ ಕೋರಿಮಠ, ಡಿ.ಜಿ ಜೋಗಣ್ಣವರ, ಶೈಲಾ ಕೋಡೆಕಲ್ಲ, ಶಿವಪ್ಪ ಕತ್ತಿ, ದಶರಥ ಕೊಳ್ಳಿ, ಸಿದ್ಧರಾಮಪ್ಪ ಗೊಜನೂರ, ನಾಗಪ್ಪ ಸವಡಿ, ವೀರಣ್ಣ ಗೊಡಚಿ, ರಾಜಶೇಖರ ಲಕ್ಕುಂಡಿ ಸೇರಿದಂತೆ ಎಂ.ಎಸ್. ಅಂಗಡಿ, ಅಮರೇಶ ಅಂಗಡಿ, ಕೊಟ್ರೇಶ ಮೆಣಸಿನಕಾಯಿ ಹಾಗೂ ಮಠದ ಭಕ್ತರು ಪಾಲ್ಗೊಂಡಿದ್ದರು.