ಸುಳ್ಳು ಭರವಸೆಯ ಬಿಜೆಪಿ ಮಿತ್ರಕೂಟ ತಿರಸ್ಕರಿಸಿ

| Published : Apr 25 2024, 01:11 AM IST

ಸಾರಾಂಶ

ಕಳೆದ 10 ವರ್ಷಗಳಿಂದ ರೈತರಿಗೆ ಭರವಸೆ ನೀಡಿ, ಸುಳ್ಳು ಹೇಳಿ ಮೋಸ ಮಾಡುತ್ತಿರುವ ಬಿಜೆಪಿ ಮಿತ್ರಕೂಟವನ್ನು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ತಿರಸ್ಕರಿಸಿ ಎಂದು ಸರ್ವೋದಯ ಪಕ್ಷದ ಸಾಹಿತಿ, ದೇವನೂರ ಮಹದೇವ ಹೇಳಿದರು. ನಗರರ ಜಿಲ್ಲಾ ರೈತ ಸಂಘದ ಕಚೇರಿ ಸಭಾಂಗಣದಲ್ಲಿ ರೈತ ಸಂಘದ ಬಿಜೆಪಿ ತಿರಸ್ಕರಿಸಿ ಕರಪತ್ರ ಹಂಚಿಕೆ ಅಭಿಯಾನ ಮತ್ತು ಸಂಕಲ್ಪಕ್ಕೆ ಚಾಲನೆ ನೀಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕಳೆದ 10 ವರ್ಷಗಳಿಂದ ರೈತರಿಗೆ ಭರವಸೆ ನೀಡಿ, ಸುಳ್ಳು ಹೇಳಿ ಮೋಸ ಮಾಡುತ್ತಿರುವ ಬಿಜೆಪಿ ಮಿತ್ರಕೂಟವನ್ನು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ತಿರಸ್ಕರಿಸಿ ಎಂದು ಸರ್ವೋದಯ ಪಕ್ಷದ ಸಾಹಿತಿ, ದೇವನೂರ ಮಹದೇವ ಹೇಳಿದರು. ನಗರರ ಜಿಲ್ಲಾ ರೈತ ಸಂಘದ ಕಚೇರಿ ಸಭಾಂಗಣದಲ್ಲಿ ರೈತ ಸಂಘದ ಬಿಜೆಪಿ ತಿರಸ್ಕರಿಸಿ ಕರಪತ್ರ ಹಂಚಿಕೆ ಅಭಿಯಾನ ಮತ್ತು ಸಂಕಲ್ಪಕ್ಕೆ ಚಾಲನೆ ನೀಡಿ ಮಾತನಾಡಿದರು.

ರೈತರಿಗೆ ಮೋಸ ಮಾಡಿ ಕಳೆದ ಚುನಾವಣೆಯಲ್ಲೂ ರೈತರ ಬೆಳೆಗಳಿಗೆ ಎಂಎಸ್‌ಪಿ ನೀಡುತ್ತೇವೆ ಎಂದು ಹೇಳಿ ಈ ಚುನಾವಣೆಯ ಪ್ರಣಾಳಿಕೆಯಲ್ಲು ಎಂಎಸ್‌ಪಿ ನೀಡುತ್ತೇವೆ ಎಂದು ಬಣ್ಣದ ಮಾತುಗಳನ್ನಾಡಿರುವುದು ಎಷ್ಟು ಸರಿ ಎಂದರು.ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಸ್ವಾಮಿನಾಥನ್ ವರದಿ ಪ್ರಕಾರ ರೈತರ ಬೆಳೆಗಳಿಗೆ ಎಂಎಸ್‌ಪಿ ನೀಡಲು ಕಾನೂನು ರೀತ್ಯಾ ಕ್ರಮಕೈಗೊಳ್ಳುತ್ತೇವೆ ಮತ್ತು ರೈತರ ಸಾಲ ಮನ್ನಾ ಮಾಡುತ್ತೇವೆ ಎಂದಿದ್ದಾರೆ. ಆದ್ದರಿಂದ ಎರಡು ಪ್ರಣಾಳಿಕೆಯನ್ನು ತುಲನೆ ಮಾಡಿ ಬಣ್ಣ ಬಣ್ಣದ ಮಾತುಗಳನ್ನಾಡಿ ಮೋಸ ಮಾಡುತ್ತಿರುವ ಬಿಜೆಪಿ ಮಿತ್ರಕೂಟ ತಿರಸ್ಕರಿಸಿ ಎಂದರು.ಘಟನೆ ಖಂಡನೀಯ:

ಇದೇ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎ.ಎಂ. ಮಹೇಶ್‌ಪ್ರಭು ಮತ್ತು ಇತರರು ಮೋದಿ ಸರ್ಕಾರದ ವಿರುದ್ಧ ರೈತ ಅಭಿಯಾನ ನಡೆಸಲು ನಂಜೇದೇವನಪುರಕ್ಕೆ ಹೋದಾಗ ಕೆಲ ಯುವಕರು ಬಾಯಿಗೆ ಬಂದಂತೆ ಮಾತನಾಡಿರುವುದು ಖಂಡನೀಯ, ಇದನ್ನು ಕೆಲ ಟಿವಿ ಮಾಧ್ಯಮ ವೈಭವೀಕರಿಸಿರುವುದು ಅತ್ಯಂತ ಖಂಡನೀಯ, ವಿಚಾರಗಳನ್ನು ಅರಿತು ಮಾತನಾಡಬೇಕೆಂದರು.

ಪ್ರಸ್ತುತ ಟಿವಿ ಮಾಧ್ಯಮಗಳು ಇಲ್ಲಸಲ್ಲದ ವಿಷಯಗಳನ್ನು ವೈಭವೀಕರಿಸಿ, ಬೆಳಗ್ಗೆಯಿಂದ ಸಂಜೆವರೆಗೂ ಹೇಳಿದ್ದನ್ನೇ ಹೇಳುತ್ತಾ, ತಲೆಕೆಟ್ಟು ನಿದ್ದೆ ಮಾಡದಂತೆ ಮಾಡುತ್ತಿದ್ದಾರೆ, ಟಿವಿಯಲ್ಲಿ ವರದಿಗಳನ್ನು ನೋಡಬಾರದಷ್ಟು ಬೇಜಾರಾಗಿದೆ ಎಂದರು.ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ ನಾವು ೯ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದೇವೆ, ನಮ್ಮ ಕರಪತ್ರ ಚಳುವಳಿಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ. ಕೇಂದ್ರದ ಬಿಜೆಪಿ ಸರ್ಕಾರ ಹೇಳಿದಂತೆ ನಡೆದಿಲ್ಲ, ಭದ್ರ ಮೇಲ್ದಂಡೆ ಯೋಜನೆ ಜಾರಿಗೊಳಿಸಿದೆಯಾ, ಉತ್ತರ ಕರ್ನಾಟಕ್ಕೆ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಿದೆಯಾ ಎಂದರು.ಈ ಸಂದರ್ಭದಲ್ಲಿ ರೈತರ ಸಾಲ ಮನ್ನಾ ಮಾಡದ, ರೈತರ ಬೆಳೆಗೆ ಎಂಎಸ್‌ಪಿ ನೀಡದ, ಬರದಿಂದ ರೈತರು ಕಂಗೆಟ್ಟಿದ್ದರೂ ಬಿಡಿಗಾಸು ಪರಿಹಾರ ನೀಡದ, ೭೫೨ ರೈತ ಹೋರಾಟಗಾರರ ಸಾವಿಗೆ ಕಾರಣವಾದ ೧ ಲಕ್ಷ ೭೪ ಸಾವಿರ ರೈತರ ಆತ್ಮಹತ್ಯೆಗೆ ಹೊಣೆಗಾರರಾದ ಬಿಜೆಪಿ ಮತ್ತು ಮೈತ್ರಿ ಪಕ್ಷಗಳಿಗೆ ನಾವು ಯಾವುದೇ ಕಾರಣಕ್ಕೂ ಮತ ಹಾಕುವುದಿಲ್ಲ ಎಂದು ಸಂಕಲ್ಪ ಮಾಡಲಾಯಿತು. ರಾಜ್ಯ ಉಪಾಧ್ಯಕ್ಷ ಎ.ಎಂ. ಮಹೇಶ್‌ಪ್ರಭು, ಜಿಲ್ಲಾಧ್ಯಕ್ಷ ಶಾಂತಮಲ್ಲಪ್ಪ, ಸರ್ವೋದಯ ಪಕ್ಷದ ಪ್ರಸನ್ನ, ಶಿವಕುಮಾರ್, ಬಸವಣ್ಣ, ಶೈಲೇಂದ್ರ, ಇತರರು ಇದ್ದರು.