ಸಾರಾಂಶ
ಹಾನಗಲ್ಲ: ನಿರಂತರವಾಗಿ ಸುಳ್ಳು ಹೇಳಿ, ಕನಸುಗಳನ್ನು ಮಾರಾಟ ಮಾಡಿ ಮತ ಹಾಕಿಸಿಕೊಂಡು ಜನರ ಮೇಲೆ ತೆರಿಗೆ ಭಾರ ಹೊರಿಸುವ ಕೆಲಸ ಮಾಡಿರುವ ಬಿಜೆಪಿಯನ್ನು ಲೋಕಸಭೆ ಚುನಾವಣೆಯಲ್ಲಿ ತಿರಸ್ಕರಿಸಿ ಎಂದು ಶಾಸಕ ಶ್ರೀನಿವಾಸ ಮಾನೆ ಮನವಿ ಮಾಡಿದರು.ತಾಲೂಕಿನ ಯಲಿವಾಳ ಸೇರಿದಂತೆ ಹಲವು ಗ್ರಾಮಗಳಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ಮತಯಾಚಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ನೆರೆ, ಬರ ಬಂದಾಗ ಬಂದು ಜನರ ಸಂಕಷ್ಟಕ್ಕೆ ಸ್ಪಂದಿಸದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪದೇ ಪದೆ ಕರ್ನಾಟಕಕ್ಕೆ ಬರುತ್ತಿದ್ದಾರೆ. ಚುನಾವಣೆ ಪ್ರಚಾರ ಭಾಷಣ ಮಾಡುತ್ತಿದ್ದಾರೆ. ದುರಂತವೆಂದರೆ ಕಳೆದ ೧೦ ವರ್ಷಗಳ ಸಾಧನೆಗಳನ್ನು ಹೇಳಿಕೊಳ್ಳದೇ ಮತ್ತೆ ಸುಳ್ಳು ಹೇಳುತ್ತಿದ್ದಾರೆ, ಕನಸುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಿರುದ್ಯೋಗ, ಆರ್ಥಿಕ ಹೊರೆ, ಹಣದುಬ್ಬರ ಹೀಗೆ ನೂರು ಸಂಕಷ್ಟಗಳು ನಮ್ಮ ಮುಂದಿವೆ. ಈ ಪರಿಸ್ಥಿತಿ ಬದಲಾಗಬೇಕಾದರೆ ಕಾಂಗ್ರೆಸ್ ಗೆಲ್ಲಬೇಕಿದೆ. ಸರ್ವಾಧಿಕಾರಿಯಾಗಲು ಹೊರಟಿರುವ ಬಿಜೆಪಿಗೆ ಪಾಠ ಕಲಿಸುವ ಮೂಲಕ ಪ್ರಜಾಪ್ರಭುತ್ವ ಉಳಿಸಿಕೊಳ್ಳಬೇಕಿದೆ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಮುಖಂಡರಾದ ಬಸಲಿಂಗಯ್ಯ ಕಂಬಾಳಿಮಠ, ರುದ್ರಮುನಿ ಕಂಬಾಳಿಮಠ, ಪರಸಣ್ಣ ಮುದ್ದಿನಕೊಪ್ಪ, ಮಾಬೂಬಷಾ ಹನಕನಹಳ್ಳಿ, ನಾಗರಾಜ ಹರಿಜನ, ಬೀರಪ್ಪ ಹರಿಜನ, ಮೈಲಾರಿ ಕೋಬಣ್ಣನವರ, ಹನುಮಂತಪ್ಪ ಹುನಗುಂದ, ಪ್ರವೀಣ ಹಿರೇಮಠ ಈ ಸಂದರ್ಭದಲ್ಲಿ ದ್ದರು.