ಸಾರಾಂಶ
ಬಸವಕಲ್ಯಾಣ ತಾಲೂಕಿನ ಐತಿಹಾಸಿಕ ಗೋರ್ಟಾ (ಬಿ) ಗ್ರಾಮದಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಸಚಿವ ಈಶ್ವರ ಖಂಡ್ರೆ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಸಂಸದರಾಗಿ ಆಯ್ಕೆಯಾದ ಬಳಿಕ ಮತಕ್ಷೇತ್ರವನ್ನೇ ಮರೆತವರನ್ನು ತಿರಸ್ಕರಿಸಿ, ಈ ಬಾರಿ ಅತ್ಯಂತ ಕಿರಿಯ ವಯಸ್ಸಿನ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆರನ್ನು ಸಂಸತ್ತಿಗೆ ಆರಿಸಿ ಕಳಿಸಿ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಮನವಿ ಮಾಡಿದ್ದಾರೆ.ಐತಿಹಾಸಿಕ ಗೋರ್ಟಾ (ಬಿ) ಗ್ರಾಮದಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಿಮ್ಮ ಗ್ರಾಮವನ್ನು ಆದರ್ಶ ಗ್ರಾಮ ಮಾಡುವುದಾಗಿ ಹೇಳಿದ ಸಂಸದರು ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಗೋರ್ಟಾ (ಬಿ) ಗ್ರಾಮ ಐತಿಹಾಸಿಕ ಜಲಿಯನ್ ವಾಲಾಬಾಗ್ ಇದ್ದಂತೆ. ಸ್ವಾತಂತ್ರ್ಯಲ ಸಂಗ್ರಾಮಕ್ಕೆ ಈ ಗ್ರಾಮ ನೀಡಿರುವ ಕೊಡುಗೆ ಅಪಾರವಾದದ್ದು, ಈ ಗ್ರಾಮದ ಜನರ ತ್ಯಾಗ ಬಲಿದಾನ ಇತಿಹಾಸದ ಪುಟದಲ್ಲಿ ಅಚ್ಚಳಿಯದೇ ಉಳಿದಿದೆ. ನಮ್ಮ ತಂದೆ ಶತಾಯುಷಿ ಭೀಮಣ್ಣ ಖಂಡ್ರೆ ಅವರ ತಾಯಿ ಅಂದರೆ ತಮ್ಮ ಅಜ್ಜಿ ಪಾರ್ವತಮ್ಮನವರು ಇದೇ ಗ್ರಾಮದವರು. ಇಂದು ನಿಮ್ಮೂರಿನ ಮರಿ ಮಗ ಚುನಾವಣೆಗೆ ಸ್ಪರ್ಧಿಸಿದ್ದು, ಮತ ನೀಡಿ ಎಂದು ಮನವಿ ಮಾಡಿದರು.ನಮ್ಮ ತಂದೆ ಭೀಮಣ್ಣ ಖಂಡ್ರೆ ಅವರು ಬಸವಕಲ್ಯಾಣದಲ್ಲಿ ಆಧುನಿಕ ಅನುಭವ ಮಂಟಪ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತಾವು 2017ರಲ್ಲಿ ಸಚಿವರಾಗಿದ್ದಾಗ ಬಸವಕಲ್ಯಾಣದಲ್ಲಿ ಅತ್ಯಾಧುನಿಕ ಅನುಭವ ಮಂಟಪ ನಿರ್ಮಾಣಕ್ಕಾಗಿ ಮುಖ್ಯಮಂತ್ರಿ ಬಳಿಗೆ ಬೀದರ್ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ನಿಯೋಗ ತೆಗೆದುಕೊಂಡು ಹೋಗಿ ಸಿದ್ದರಾಮಯ್ಯ ಅವರ ಮನವೊಲಿಸಿ, ಬಜೆಟ್‌ನಲ್ಲಿ ಆಧುನಿಕ ಅನುಭವ ಮಂಪಟದ ಘೋಷಣೆ ಮಾಡಿಸಿದ್ದೆ ಎಂದು ಸ್ಮರಿಸಿದರು.
ಇತ್ತೀಚೆಗೆ ಮುಖ್ಯಮಂತ್ರಿಗಳು ₹50 ಕೋಟಿ ಬಿಡುಗಡೆ ಮಾಡಿದ್ದು, ಬಸವಕಲ್ಯಾಣದಲ್ಲಿ ಆಧುನಿಕ ಅನುಭವ ಮಂಟಪದ ಕಾರ್ಯ ಭರದಿಂದ ನಡೆದಿದೆ ಎಂದರು. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ತಾವು ಹಲವು ಯೋಜನೆ ಹೊಂದಿದ್ದು, ತಮ್ಮ ಪುತ್ರ ಸಂಸತ್ ಸದಸ್ಯನಾದರೆ, ಹೆಚ್ಚಿನ ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಗುತ್ತದೆ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ನಿಮ್ಮೂರ ಕಂದನನ್ನು ಹರಸಿ ಎಂದು ಮನವಿ ಮಾಡಿದರು.ನಂತರ ಗೋರ್ಟಾ (ಬಿ) ಗ್ರಾಮದಲ್ಲಿ ನಡೆದಿರುವ 3 ದಿನಗಳ ಪೂಜ್ಯ ಪ್ರಭುದೇವರ ಚಿನ್ಮಯಾನುಗ್ರಹ ದೀಕ್ಷೆ, ಜಗನ್ಮಾತೆ ಅಕ್ಕನ ಜಯಂತ್ಯುತ್ಸವ ಹಾಗೂ ವಿಶ್ವಗುರು ಬಸವಣ್ಣನವರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾದರು.
ಈ ವೇಳೆ ಪೂಜ್ಯ ಪ್ರಭುದೇವರು, ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಹಾದೇವ್ ಪಟ್ನಿ, ಮುಖಂಡರಾದ ಮಾಲಾ ನಾರಾಯಣರಾವ್, ಶಿವರಾಜ್ ಪಾಟೀಲ್, ಜಯದೀಪ್, ವಕೀಲರಾದ ರಾಜಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.