ಶಿಗ್ಗಾಂವಿ ಜನರ ಜತೆ ಸಂಬಂಧ ರಾಜಕೀಯ ಮೀರಿದ್ದು- ಬಸವರಾಜ ಬೊಮ್ಮಾಯಿ

| Published : Mar 18 2024, 01:49 AM IST / Updated: Mar 18 2024, 09:03 AM IST

ಶಿಗ್ಗಾಂವಿ ಜನರ ಜತೆ ಸಂಬಂಧ ರಾಜಕೀಯ ಮೀರಿದ್ದು- ಬಸವರಾಜ ಬೊಮ್ಮಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭೆ ಟಿಕೆಟ್‌ ಘೋಷಣೆ ಬಳಿಕ ಕ್ಷೇತ್ರದ ಜನರು ನೋವಿಂದ ಕಣ್ಣೀರು ಹಾಕಿದ್ದಾರೆ. ಅವರನ್ನು ಕಂಡು ನಾನು ಅಂದು ಕಣ್ಣೀರು ಹಾಕಿದ್ದೇನೆ. ಕ್ಷೇತ್ರ ಜನರ ಜತೆ ನನ್ನ ಸಂಬಂಧ ರಾಜಕೀಯ ಮೀರಿದ್ದು ಎಂದು ಹಾವೇರಿ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿ: ಲೋಕಸಭೆ ಟಿಕೆಟ್‌ ಘೋಷಣೆ ಬಳಿಕ ಕ್ಷೇತ್ರದ ಜನರು ನೋವಿಂದ ಕಣ್ಣೀರು ಹಾಕಿದ್ದಾರೆ. ಅವರನ್ನು ಕಂಡು ನಾನು ಅಂದು ಕಣ್ಣೀರು ಹಾಕಿದ್ದೇನೆ. 

ಕ್ಷೇತ್ರ ಜನರ ಜತೆ ನನ್ನ ಸಂಬಂಧ ರಾಜಕೀಯ ಮೀರಿದ್ದು ಎಂದು ಹಾವೇರಿ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ಶಿಗ್ಗಾಂವಿಯಲ್ಲಿ ಭಾನುವಾರ ಸಂಜೆ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ವೇದಿಕೆ ಮೇಲೆ ಕುಳಿತಿರುವವರು ನಮ್ಮ ನಾಯಕರು, ವೇದಿಕೆ ಮುಂಭಾಗದಲ್ಲಿ ನಾಯಕರನ್ನು ಸೃಷ್ಟಿಸುವ ಜನ ನಮ್ಮ ಮಹಾನಾಯಕರು ಎಂದು ಹೇಳಿದರು.

ಚುನಾವಣೆ ಗೆದ್ದ ಪ್ರತಿನಿಧಿ ಯಾವ ರೀತಿ ವರ್ತಿಸಬೇಕು? ಜನ ಹೇಗೆ ಇರಬೇಕು ಎನ್ನುವುದನ್ನು ತೋರಿಸುತ್ತದೆ. ಕ್ಷೇತ್ರದ ಜನರ ಮೇಲೆ ಒಂದು ಡಾಕ್ಟರೇಟ್ ಆಗುವಷ್ಟು ಬರೆಯಬಹುದು. ನನ್ನ ರಾಜಕಾರಣದಲ್ಲಿ ನಾನು ಹಲವು ಕ್ಷೇತ್ರ ಮತ್ತು ರಾಜ್ಯ ಸುತ್ತಿದ್ದೇನೆ.

ಆದರೆ ಶಿಗ್ಗಾಂವಿ-ಸವಣೂರು ಅಂತಹ ಜನರು ನನಗೆ ಎಲ್ಲೂ ಸಿಗಲ್ಲ. ಈ ಪ್ರೀತಿ, ವಿಶ್ವಾಸ ಹೇಗೆ ಬೆಳೆಯಿತು ಎಂಬುದನ್ನು ನೆನೆದರೆ ಆಶ್ಚರ್ಯವಾಗುತ್ತದೆ ಎಂದು ಹೇಳಿದರು.

ಅಧಿಕಾರ ಹುಡುಕಿಕೊಂಡು ಹೋದವನು ನಾನು ಅಲ್ಲ, ಈ ಕ್ಷೇತ್ರಕ್ಕಾಗಿ ಹಲವರು ಆಕಾಂಕ್ಷಿಗಳು ಇದ್ದರು. ದೆಹಲಿಗೆ ಹೋದಾಗ ನಮ್ಮ ಹೈಕಮಾಂಡ್ ನಾಯಕರು ಮಾತನಾಡಿದರು. 

ನಾನು ಅಂದು ಈಶ್ವರಪ್ಪ ಅವರ ಮಗನಿಗೆ ಟಿಕೆಟ್‌ ಕೊಡಿ ಎಂದು ಹೇಳಿದ್ದೆ. ಜೀವನದ ಕೊನೆ ಉಸಿರು ಇರುವ ವರೆಗೂ ನಾನು ಈ ಕ್ಷೇತ್ರದ ಜನರ ಸೇವೆ ಮಾಡ್ತೇನೆ, ಅಧಿಕಾರ ಇರದೆ ಇದ್ರು ನಾನು ನಿಮ್ಮ ಸೇವೆ ಮಾಡ್ತೇನೆ.

ಉಸಿರು ಇರುವ ವರೆಗೂ ಸೇವೆ ಮಾಡೋದು ಅಷ್ಟೇ ಅಲ್ಲ, ಜೀವನದ ಕೊನೆ ಉಸಿರು ಹೋದ ಮೇಲೂ ಇಲ್ಲೆ ಮಣ್ಣಲ್ಲೆ ಮಣ್ಣಾಗುತ್ತೇನೆ ಎಂದು ಬೊಮ್ಮಾಯಿ ಕಣ್ಣೀರು ಹಾಕಿದರು.

ಜೋಶಿ ಬಗ್ಗೆ ಗುಣಗಾನ: ಪ್ರಹ್ಲಾದ್ ಜೋಶಿ ಅವರು ರಾಜಕೀಯ ಕುಟುಂಬದಿಂದ ಬಂದವರು ಅಲ್ಲ, ಸಾಮಾನ್ಯರಲ್ಲಿ ಸಾಮಾನ್ಯವಾಗಿ ಬಂದು ಎಂಪಿಯಾಗಿ ಕೆಲಸ ಮಾಡಿದ್ದಾರೆ. 

ರಾಜಕೀಯ ಜೀವನದಲ್ಲಿ ಜೋಶಿ ಕಪ್ಪುಚುಕ್ಕೆ ಇಲ್ಲದೆ ಇರುವ ಹಾಗೇ ಕೆಲಸ ಮಾಡಿದ್ದಾರೆ. ಒಬ್ಬ ಸಂಸದ ಕ್ಷೇತ್ರದ ಎಲ್ಲ ಶಾಲೆಗಳಿಗೆ ಬಣ್ಣ ಹಚ್ಚಿದ ಉದಾಹರಣೆ ಇದೆಯಾ ಎಂದು ಪ್ರಶ್ನಿಸಿದರು.

ಅದಕ್ಕೆ ಈ ಕ್ಷೇತ್ರದ ಜನರು ನನಗೆ ತೋರಿಸಿದ ಪ್ರೀತಿ ಅವರಿಗೂ ತೋರಿಸಿ, ನಾನು ಈ ಕ್ಷೇತ್ರ ಬಿಟ್ಟು ಎಲ್ಲೂ ಹೋಗಲ್ಲ ಎಂದರು.

ನನ್ನ ರಾಜಕೀಯ ಬದುಕಿಗೆ ಒಂದು ಶಕ್ತಿ ನೀಡಿದ ದೇವರು ಈ ಕ್ಷೇತ್ರದ ಜನರು, ನೀವೆಲ್ಲ ನನಗೆ ಪರಮಾತ್ಮ ಇದ್ದ ಹಾಗೆ ಎಂದು ಮಾಜಿ ಸಿಎಂ ಬೊಮ್ಮಾಯಿ ಭಾವುಕರಾದರು.

ಯಾರನ್ನು ಮರೆತರೂ ದೇವರನ್ನು ಮರೆಯಲು ಸಾಧ್ಯವಿಲ್ಲ, ರೊಟ್ಟಿ, ಅನ್ನ, ನವಣಕ್ಕಿ ಅನ್ನ ಮಾಡಿ ಪ್ರೀತಿಯಿಂದ ಉಣಿಸಿದ್ದೀರಿ, ನಿಮ್ಮ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಎಂದು ಬೊಮ್ಮಾಯಿ ಕಣ್ಣೀರು ಹಾಕಿದರು.

ಈ ಸಭೆ ನನಗೆ ವಿದಾಯದ ಸಭೆಯಲ್ಲ, ಜೋಶಿ ಅವರಿಗೆ ಶಕ್ತಿ ನೀಡುವ ಸಭೆ, ನನಗೆ ದೆಹಲಿಯಲ್ಲಿ ಪ್ರತಿನಿಧಿಯಾಗಿ ಮಾಡುವಂಥ ಸಭೆ, ಪರೋಕ್ಷವಾಗಿ ನಿಮ್ಮ ಪ್ರಾರ್ಥನೆಯಿಂದ ನಾನು ದೇಶದ ಪ್ರತಿನಿಧಿ ಆಗಬೇಕು ಎಂದು ಆಶೀರ್ವಾದ ಮಾಡಿ ಎಂದರು.

'ವಕ್ತಸೇ ಪಹಲೇ ನಸಿಬ್ಕೆ ಸಾಥ್ ಕುಚ್ಚ ನಹೀ ಮಿಲ್ತಾ'ಎಂದು ಉಚ್ಚರಿಸಿದ ಅವರು, ಈ ಸಮಯ ನಾವು ಬಳಸಿಕೊಂದು ಜೋಶಿ ಅವರನ್ನು ಗೆಲ್ಲಿಸೋಣ, ನಾನು ಎಲ್ಲೂ ಹೋಗಲ್ಲ, ನಿಮ್ಮ ಬಳಿಯೇ ಇರುತ್ತೇನೆ. ಚಿಂತೆ ಬೇಡ ನಿಮ್ಮವನಾಗಿ ನಾನು‌ ಸಾದಾ ಇರುವೆ ಎಂದರು.