ಸಾರಾಂಶ
ಹುಣಸಗಿ ಪಟ್ಟಣದ ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಜಗಜ್ಯೋತಿ ಬಸವಣ್ಣ ಹಾಗೂ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿ ಆಚರಣೆ ಮಾಡಲಾಯಿತು.
ಹುಣಸಗಿ: ಕಾಯಕವೇ ಕೈಲಾಸ ಎಂದು ಮಾನವ ಕುಲಕ್ಕೆ ಸಂದೇಶ ನೀಡಿದ ಜಗಜ್ಯೋತಿ ಬಸವಣ್ಣನವರು, ಸಮಾಜಕ್ಕೆ ತಮ್ಮದೇ ಆದ ತತ್ವಗಳ ಮೂಲಕ ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಿದ್ದಾರೆ ಎಂದು ತಹಸೀಲ್ದಾರ್ ಬಸಲಿಂಗಪ್ಪ ನೈಕೋಡಿ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ತಾಲೂಕು ಆಡಳಿತದಿಂದ ನಡೆದ ವಿಶ್ವಗುರು ಬಸವಣ್ಣ ಹಾಗೂ ಹೇಮರೆಡ್ಡಿ ಮಲ್ಲಮ್ಮರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 12ನೇ ಶತಮಾನದಲ್ಲಿ ಬಸವಣ್ಣನವರು ಮೇಲು-ಕೀಳು, ಜಾತಿ-ಧರ್ಮ ಹೀಗೆ ನೊಂದವರ ಪರವಾಗಿ ನಿಂತ ಮಹಾನುಭಾವ. ಜಾತಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದ್ದ ಬಸವಣ್ಣನವರ ತತ್ವ, ಭಾವಗಳನ್ನು ಇಂದು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಳ ಧರ್ಮ ನಿಷ್ಠೆ, ಧಾರ್ಮಿಕ ಭಾವನೆ ಎಲ್ಲರೂ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಶಿವಶರಣರ ವಚನಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ನಾವೆಲ್ಲ ಸಿದ್ಧರಾಗಬೇಕು ಎಂದರು. ಈ ವೇಳೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ್, ಬಾಪುಗೌಡ ಪಾಟೀಲ್, ಚಂದ್ರಶೇಖರ ದಂಡಿನ್, ಚನ್ನಯ್ಯಸ್ವಾಮಿ ಹಿರೇಮಠ, ವೀರಭದ್ರಗೌಡ ಹೊಸಮನಿ, ನಾಗನಗೌಡ ಪಾಟೀಲ್, ಬಸನಗೌಡ ಚೌದ್ರಿ, ಪ್ರಭುಗೌಡ ಪೋತರೆಡ್ಡಿ, ಸಂಗಮೇಶ ಕೊಣ್ಣೂರ ಸೇರಿದಂತೆ ಇತರರಿದ್ದರು.