ಬೆಳೆವಿಮೆ ಹಣ ಬಿಡುಗಡೆಗೆ ಆಗ್ರಹಿಸಿ ಮುಂಡಗೋಡಲ್ಲಿ ರಸ್ತೆತಡೆ

| Published : Jan 17 2025, 12:47 AM IST

ಬೆಳೆವಿಮೆ ಹಣ ಬಿಡುಗಡೆಗೆ ಆಗ್ರಹಿಸಿ ಮುಂಡಗೋಡಲ್ಲಿ ರಸ್ತೆತಡೆ
Share this Article
  • FB
  • TW
  • Linkdin
  • Email

ಸಾರಾಂಶ

ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಗುರುವಾರ ತಾಲೂಕಿನ ಮಳಗಿ ಗ್ರಾಮದ ಶಿರಸಿ- ಹುಬ್ಬಳ್ಳಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಮುಂಡಗೋಡ: ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಗುರುವಾರ ತಾಲೂಕಿನ ಮಳಗಿ ಗ್ರಾಮದ ಶಿರಸಿ- ಹುಬ್ಬಳ್ಳಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.ಅತಿವೃಷ್ಟಿ ಮತ್ತು ಆನಾವೃಷ್ಟಿಯಿಂದ ಹಾಳಾದ ಎಲ್ಲ ಬೆಳೆಗಳಿಗೆ ಸಂಬಂಧಿಸಿದಂತೆ ಬೆಳೆವಿಮೆ ಹಣ ಶೀಘ್ರ ಬಿಡುಗಡೆಯಾಗಬೇಕು. ಅತಿವೃಷ್ಟಿಯಿಂದ ಹಾಳಾದ ಎಲ್ಲ ಬೆಳೆಗಳಿಗೆ ಸೂಕ್ತ ಪರಿಹಾರ ಖಾತೆಗೆ ಜಮಾ ಮಾಡಬೇಕು. ರೈತರ ಸಂಪೂರ್ಣ ಸಾಲಮನ್ನಾ ಆಗಬೇಕು. ಅತಿಕ್ರಮಣದಾರರಿಗೆ ಹಕ್ಕುಪತ್ರ ನೀಡಿ ಬೆಳೆಹಾನಿ ಪರಿಹಾರ ನೀಡಬೇಕಲ್ಲದೇ, ಜಿಪಿಎಸ್ ಮಾಡಿ ಹಕ್ಕು ಪತ್ರ ನೀಡಬೇಕು.

ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡಲು ಹೊರಟಿರುವುದನ್ನು ಕೈಬಿಡಬೇಕು. ರೈತರ ಜಮೀನುಗಳ ಕೆಜಿಪಿ ಮಾಡಿಕೊಡಬೇಕು. ಶಿರಸಿ- ಹುಬ್ಬಳ್ಳಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಕೂಡಲೇ ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಮತ್ತು ವಾಹನಗಳಿಗೆ ಓಡಾಡಲು ಅನುಕೂಲ ಮಾಡಿಕೊಡಬೇಕು.

ರೈತರು ಬೆಳೆದ ಬೆಳೆಗಳಿಗೆ ನಿಗದಿತ ಬೆಲೆ ನಿಗದಿಪಡಿಸಬೇಕು. ಅಡಕೆ ಬೆಳೆವಿಮೆ ಈಗಿನ ಬರಗಾಲ ಪರಿಹಾರ ಮತ್ತು ವಿಮೆಯನ್ನು ತಕ್ಷಣ ಜಾರಿಗೋಳಿಸಬೇಕೆಂದು ರಸ್ತೆತಡೆದು ನಡೆಸಿ ಪ್ರತಿಭಟನೆ ಆರಂಭಿಸಿ ಎರಡು ಘಂಟೆಯಾದರೂ ತಹಸೀಲ್ದಾರ್ ಸ್ಥಳಕ್ಕಾಗಮಿಸದೆ ಇದ್ದಿದ್ದದರಿಂದ ತೀವ್ರ ಆಕ್ರೋಶಗೊಂಡ ಪ್ರತಿಭಟನಾಕಾರರು, ರೈತರ ಹಾಗೂ ಸಾರ್ವಜನಿಕರ ಬಗ್ಗೆ ಕಾಳಜಿ ಇಲ್ಲದೆ ಇರುವ ಅಧಿಕಾರಿಗಳು ತಮಗೆ ಬೇಕಾಗಿಲ್ಲ ಎಂದು ತಹಸೀಲ್ದಾರ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವ ಮೂಲಕ ರಸ್ತೆಯಲ್ಲಿಯೇ ಅಡುಗೆ ಮಾಡಿ ಊಟ ಮಾಡುವುದಾಗಿ ಗ್ಯಾಸ್ ಸಿಲಿಂಡರ್ ಹಾಗೂ ಪಾತ್ರೆಗಳನ್ನು ತರಿಸಿ ಅಡುಗೆ ಮಾಡಲು ಸಿದ್ಧತೆ ನಡೆಸಿದರು.

ರಸ್ತೆತಡೆ ಕೈಬಿಡುವಂತೆ ಪೊಲೀಸರು ಮನವಿ ಮಾಡಿದರು. ಇದಕ್ಕೆ ಜಗ್ಗದ ಪ್ರತಿಭಟನಾಕಾರರು, ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಕೈಬಿಡುವ ಪ್ರಶ್ನೆಯೇ ಇಲ್ಲ. ತಹಸೀಲ್ದಾರ್ ಸ್ಥಳಕ್ಕಾಗಮಿಸಿಬೇಕೆಂದು ಪಟ್ಟು ಹಿಡಿದರು. ಬಳಿಕ ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಶಂಕರ ಗೌಡಿ, ರೈತರಿಂದ ಮನವಿ ಸ್ವೀಕರಿಸಿ ಜ. ೨೯ರಂದು ಮಿನಿ ವಿಧಾನಸೌಧ ಸಭಾಂಗಣದಲ್ಲಿ ರೈತ ಸಂಘದ ಸಮ್ಮುಖದಲ್ಲಿ ಲೋಕೋಪಯೋಗಿ, ವಿದ್ಯುತ್, ಕೃಷಿ ತೋಟಗಾರಿಕೆ ಸೇರಿದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಪರಿಹಾರ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದ ಬಳಿಕ ರಸ್ತೆತಡೆ ಕೈಬಿಡಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಸತೀಶ ನಾಯ್ಕ, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿರವತ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಾಕೀರಹುಸೇನ್ ದಾಸನಕೊಪ್ಪ, ತಾಲೂಕು ಉಪಾಧ್ಯಕ್ಷ ಶಂಕ್ರಪ್ಪ ಗಾಣಿಗ, ಮಳಗಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮಹಾಲಿಂಗ ನೆಗಳೂರ, ಮರ್ದಾನಸಾಬ ಜನಗೇರಿ, ಗುಲ್ಜಾರ ಸಂಗೂರ, ದೀಪಕ ಶೇಟ್, ಆನಂದ ಪೂಜಾರ, ಪ್ರಕಾಶ ಪಾಲೆಕೊಪ್ಪ, ಕೃಷ್ಣ ಕ್ಯಾರಕಟ್ಟಿ, ಪ್ರಮೋದ ಜಕ್ಕಣ್ಣವರ, ದೇವೆಂದ್ರ ನಾಯ್ಕ, ಜಗದೀಶ ದಾಸರ್, ಶಿವಪ್ಪ ನಾಯ್ಕ, ರಮೇಶ ಶಿರ್ಶಿಕರ, ಪುಂಡಲೀಕ ನಾಯ್ಕ, ಶಿವಣ್ಣ ಮಾಳಂಜಿ ಇತರರು ಇದ್ದರು.

ಪ್ರಯಾಣಿಕರ ಪರದಾಟ: ಸುಮಾರು ೨ ಗಂಟೆಗಳ ಕಾಲ ರಸ್ತೆತಡೆ ನಡಸಿದ್ದರಿಂದ ಹತ್ತಾರು ಬಸ್, ಕಾರುಗಳು ಮತ್ತು ಮುಂತಾದ ಸರಕು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದ ಪ್ರಯಾಣಿಕರರು ಮುಂದೆ ಹೋಗಲಾಗದೆ ಪರದಾಡಬೇಕಾಯಿತು. ಪಿಎಸ್‌ಐ ಪರಶುರಾಮ ಮಿರ್ಜಗಿ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.