ಸಾರಾಂಶ
ನಮ್ಮ ಶರೀರ, ನಮ್ಮ ಆಸ್ತಿ, ನಮ್ಮ ಮನೆಯ ಬಗ್ಗೆ ಮಮಕಾರ ಇವೆಲ್ಲದಕ್ಕೂ ನಮ್ಮಲ್ಲಿ ಅಡಗಿ ಕುಳಿತಿರುವ ಮೋಹವೇ ಕಾರಣ. ಯಾವ ವಿಷಯದಲ್ಲಿ, ಯಾರಿಗೆ ಮಮಕಾರ ಇಲ್ಲವೋ ಅಲ್ಲಿ ದುಃಖ ಆಗುವುದಿಲ್ಲ.
ಶಿರಸಿ: ಶೋಕಕ್ಕೆ ಕಾರಣವಾದ ಮೋಹವನ್ನು ತೆಗೆದರೆ ಮಾತ್ರವೇ ಶೋಕದಿಂದ ಬಿಡುಗಡೆ ಹೊಂದಲು ಸಾಧ್ಯ ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಸ್ವರ್ಣವಲ್ಲೀ ಮಠದಲ್ಲಿ ಸಂಕಲ್ಪಿತ ತಮ್ಮ ೩೪ನೇ ಹಾಗೂ ಕಿರಿಯ ಶ್ರೀಗಳಾದ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿಯ ಪ್ರಥಮ ಚಾತುರ್ಮಾಸ್ಯದಲ್ಲಿ ಚಿನ್ನಾಪುರ ಸೀಮೆಯ ಶಿಷ್ಯರ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.ಶೋಕ, ದುಃಖ, ಚಿಂತೆ ಇವುಗಳು ಬರದಿರಲಿ ಎಂದು ಎಲ್ಲರೂ ಬಯಸುತ್ತಾರೆ. ಆದರೆ ಆ ಶೋಕಕ್ಕೆ ಕಾರಣ ಯಾವುದು ಎಂದು ತಿಳಿದುಕೊಂಡು ಅದನ್ನು ಬಿಡುವ ಪ್ರಯತ್ನವನ್ನು ಹೆಚ್ಚಿನವರು ಮಾಡುವುದಿಲ್ಲ. ಅದನ್ನು ಮಾಡುವಲ್ಲಿ ಪ್ರಯತ್ನ ಇರಬೇಕು. ಒಂದು ಗಿಡದ ಮೂಲವಾದ ಗಡ್ಡೆಯನ್ನು ಕಿತ್ತರೆ ಮಾತ್ರವೇ ಆ ಗಿಡದ ನಾಶವಾಗುತ್ತದೆಯೇ ಹೊರತು ಬರೀ ಸಸ್ಯವನ್ನು ಮೇಲಿನಿಂದ ಕಿತ್ತರೆ ಅದು ಮತ್ತೆ ಹುಟ್ಟುತ್ತದೆ ಎಂದರು.
ನನ್ನದು, ನನ್ನವರು ಎಂಬ ಸುಪ್ತಪ್ರಜ್ಞೆಯೇ ಈ ಮೋಹ. ಮೋಹವು ಸೂಕ್ಷ್ಮರೂಪದಲ್ಲಿ ಮನಸ್ಸಿನಲ್ಲಿ ಅಡಗಿಕೊಂಡು ಇರುತ್ತದೆ. ಯುದ್ಧರಂಗದಲ್ಲಿ ಅರ್ಜುನನಿಗೆ ಇದೇ ನನ್ನದು. ನನ್ನವರು ಎಂಬ ಮೋಹ- ಮಮಕಾರ ಬಂದಿದ್ದರಿಂದಲೇ ಅವನಿಗೆ ಒಂದು ವಿಚಿತ್ರವಾದ ಸ್ಥಿತಿ ಉಂಟಾಯಿತು. ಅಷ್ಟು ಧೀರನಾಗಿದ್ದವನೂ ಈ ಮೋಹದಿಂದ ಅಧೀರನಾಗಿಬಿಟ್ಟ. ಯುದ್ಧಕ್ಕೋಸ್ಕರ ದೀರ್ಘವಾದ ತಪಸ್ಸನ್ನು ಆಚರಿಸಿ ಯುದ್ಧಶೂರನಾಗಿದ್ದರೂ ಆ ಕ್ಷಣದಲ್ಲಿ ಮನಸ್ಸಿನಲ್ಲಿ ಅಡಗಿಕೊಂಡಿದ್ದ ಮಮಕಾರ ಮೊಹವು ಅವನಿಗೆ ಆವರಿಸಿಬಿಟ್ಟಿತು. ಅದರಿಂದಲೆ ಅಷ್ಟು ದೀರ್ಘವಾಗಿ ಉಪದೇಶ ಮಾಡಿ ಅವನ ಆ ಮೋಹವನ್ನು ಭಗವಂತ ತೆಗೆದುಹಾಕಿದ ಎಂದು ಉದಾಹರಿಸಿದರು. ನಮಗೂ ಕೂಡ ಇದೇ ರೀತಿ ನಮ್ಮ ಶರೀರ, ನಮ್ಮ ಆಸ್ತಿ, ನಮ್ಮ ಮನೆಯ ಬಗ್ಗೆ ಮಮಕಾರ ಇವೆಲ್ಲದಕ್ಕೂ ನಮ್ಮಲ್ಲಿ ಅಡಗಿ ಕುಳಿತಿರುವ ಮೋಹವೇ ಕಾರಣ. ಯಾವ ವಿಷಯದಲ್ಲಿ, ಯಾರಿಗೆ ಮಮಕಾರ ಇಲ್ಲವೋ ಅಲ್ಲಿ ದುಃಖ ಆಗುವುದಿಲ್ಲ. ಯಾವ ವಿಷಯದಲ್ಲಿ, ಯಾರಿಗೆ ಸ್ವಲ್ಪ ಮಮಕಾರ ಇದೆಯೋ ಅಲ್ಲಿ ಸ್ವಲ್ಪ ದುಃಖ. ಯಾವ ವಿಷಯದಲ್ಲಿ,ಯಾರಿಗೆ ಮಮಕಾರ ಜಾಸ್ತಿ ಇದೆಯೋ ಅಲ್ಲಿ ದುಃಖವೂ ಜಾಸ್ತಿ. ಆದ್ದರಿಂದ ಇದರಲ್ಲಿ ತಿಳಿಯುವುದು ಏನೆಂದರೆ ದುಃಖಕ್ಕೆ ಮಮಕಾರವೇ ಕಾರಣ ಎಂದರು.ಈ ಸಂದರ್ಭದಲ್ಲಿ ಸೀಮೆಯ ಪ್ರಮುಖರಾದ ದತ್ತಾತ್ರೇಯ ನಾರಾಯಣ ಹೆಗಡೆ ಕಣ್ಣೀಪಾಲ, ನಾರಾಯಣ ಹೆಗಡೆ ಬಿಗಾರ್, ಗಿರೀಶ್ ಭಟ್ ಗಿಡಗಾರಿ, ಸುಬ್ರಾಯ ಭಟ್ ಬೀಗಾರ್, ನಾರಾಯಣ ಗಾಂವ್ಕರ್, ರವೀಂದ್ರ ಭಟ್, ಲಕ್ಷ್ಮೀನಾರಾಯಣ ಭಟ್ ಕಳಚೆ ಮತ್ತಿತರರು ಇದ್ದರು.