ಪಿಂಜಾರ ಅಭಿವೃದ್ಧಿ ನಿಗಮಕ್ಕೆ ಅನುದಾನ ಬಿಡುಗಡೆಗೆ ಮಾಡಿ

| Published : Jul 24 2024, 12:20 AM IST

ಪಿಂಜಾರ ಅಭಿವೃದ್ಧಿ ನಿಗಮಕ್ಕೆ ಅನುದಾನ ಬಿಡುಗಡೆಗೆ ಮಾಡಿ
Share this Article
  • FB
  • TW
  • Linkdin
  • Email

ಸಾರಾಂಶ

ಪಿಂಜಾರ ಅಥವಾ ನದಾಫ್ ಅಭಿವೃದ್ಧಿ ನಿಗಮಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಜಿಲ್ಲಾಡಳಿತ ಭವನದ ಎದುರು ಕರ್ನಾಟಕ ರಾಜ್ಯ ಪಿಂಜಾರ ಅಥವಾ ನದಾಫ್ ಸಂಘದ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪಿಂಜಾರ ಅಥವಾ ನದಾಫ್ ಅಭಿವೃದ್ಧಿ ನಿಗಮಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಜಿಲ್ಲಾಡಳಿತ ಭವನದ ಎದುರು ಕರ್ನಾಟಕ ರಾಜ್ಯ ಪಿಂಜಾರ ಅಥವಾ ನದಾಫ್ ಸಂಘದ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.

ಕರ್ನಾಟಕ ರಾಜ್ಯ ಪಿಂಜಾರ, ನದಾಫ್ ಸಂಘದ ಜಿಲ್ಲಾಧ್ಯಕ್ಷ ಸೈದುಸಾಬ ಹೊಸಮನಿ, ರಾಜ್ಯ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಎಚ್.ಮುದಕವಿ, ವಿಭಾಗೀಯ ಉಪಾಧ್ಯಕ್ಷ ಪಿ.ಇಮಾಮಸಾಬ ಅವರ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಕಳಸದ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಸೈದುಸಾಬ ಹೊಸಮನಿ, ರಾಜ್ಯಾದ್ಯಂತ ಸುಮಾರು 22 ರಿಂದ 25 ಲಕ್ಷಗಳ ಜನಸಂಖ್ಯೆ ಹೊಂದಿರುವ ಪಿಂಜಾರ ಅಥವಾ ನದಾಫ್ ಜನಾಂಗವು ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಔದ್ಯೋಗಿಕ, ರಾಜಕೀಯ ಹಾಗೂ ಹಲವಾರು ರಂಗಗಳಲ್ಲಿ ಅತ್ಯಂತ ಹಿಂದುಳಿದ ಶೋಷಿತ ಸಮಾಜವಾಗಿದೆ. ಈ ಜನಾಂಗವು ಇಸ್ಲಾಂ ಧರ್ಮದ ಮುಸ್ಲಿಂ (ಅಲ್ಪಸಂಖ್ಯಾತರ) ಪಂಗಡದಲ್ಲಿದ್ದು, ಹಿಂದುಳಿದ ವರ್ಗಗಳ ಇಲಾಖೆ ಸಂಬಂಧಿಸಿದ ನದಾಫ್ ಅಥವಾ ಪಿಂಜಾರ ಉಪಜಾತಿಯ ಪ್ರವರ್ಗ -1ರ ಮೀಸಲಾತಿ ಹೊಂದಿದೆ. ಇಲ್ಲಿಯವರೆಗೂ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಮತ್ತು ಇತರೆ ಯೋಜನೆಗಳಿಂದ ಸೌಲಭ್ಯಗಳನ್ನು ಪಡೆದುಕೊಳ್ಳಲು ನಿರ್ದೇಶನ ಇದ್ದರೂ, ಸತತವಾಗಿ ತಾಂತ್ರಿಕ ದೋಷಗಳಿಂದ ಹಾಗೂ ಅಧಿಕಾರಿಗಳ ನಿರ್ಲಕ್ಷತೆಯಿಂದ ಯಾವುದೇ ಯೋಜನೆಗಳು ಸರಿಯಾಗಿ ತಲುಪದೇ ವಂಚಿತರಾಗಿದ್ದೇವೆ. ಇದರ ನಿವಾರಣೆಗಾಗಿ ಹಲವಾರು ವರುಷಗಳಿಂದ ಹೋರಾಟ ಮಾಡಿದ ಫಲವಾಗಿ ಹಿಂದಿನ ಸರ್ಕಾರ ಪ್ರತ್ಯೇಕವಾಗಿ ಪಿಂಜಾರ ಅಥವಾ ನದಾಫ್ ಅಭಿವೃದ್ಧಿ ನಿಗಮದ ಆದೇಶ ಮಾಡಿ ಘೋಷಣೆ ಮಾಡಿದೆ. ಈ ಹೊಸ ಸರಕಾರ ಬಂದ ನಂತರ ಸಮಾಜದ ಹಿತದೃಷ್ಟಿಯಿಂದ ಅನುದಾನ ನೀಡಬೇಕೆಂದು ಸತತವಾಗಿ ಮುಖ್ಯಮಂತ್ರಿಗಳಿಗೆ ಸಚಿವರುಗಳಿಗೆ ಮನವಿ ನೀಡಿದರೂ ಸರಕಾರ ಸ್ಪಂದಿಸುತ್ತಿಲ್ಲ. ಸರ್ಕಾರ ಶೀಘ್ರದಲ್ಲಿ ನದಾಫ/ಪಿಂಜಾರ ಅಭಿವೃದ್ಧಿ ನಿಗಮಕ್ಕೆ ಅನುದಾನ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಅದೇ ರೀತಿ ತಾಲೂಕು ಘಟಕದ ವತಿಯಿಂದ ತಾಲೂಕಾಧ್ಯಕ್ಷರಾದ ಎ.ಎ.ತಿಮ್ಮಾಪುರ ಅವರ ನೇತೃತ್ವದಲ್ಲಿ ತಹಸೀಲ್ದಾರ್‌ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಎಂ.ವಾಯ್.ನದಾಫ, ಎಂ.ಎಂ.ಚಿತ್ತರಗಿ, ಅಮೀನಸಾಬ ನದಾಫ, ಬಿ.ಎಂ.ಚಿತ್ತರಗಿ, ಬಾಬುಸಾಬ, ಎಫ್.ಎ.ಮುಲ್ಲಾ, ಯಾಸೀನ ನದಾಫ, ಎ.ಎ.ಮುಲ್ಲಾ, ಅಯ್ಯುಬ ಕರಜಗಿ, ವಾಸೀಮ ನದಾಫ, ರಿಯಾನಾ ಬಾನು ನದಾಫ, ಮಹೀರುನ್ನಿಸಾ ಕೊತಬಾಳ, ಜನ್ನತ ನದಾಫ ಸೇರಿದಂತೆ ನೂರಾರು ಸಮಾಜ ಬಾಂಧವರು ಹಾಜರಿದ್ದರು.