ಹಾಸನ ಜಿಲ್ಲೆಯ ಕೆರಗಳಿಗೂ ಹೇಮಾವತಿ ನೀರು ಬಿಡಿ: ಜೆಡಿಎಸ್ ಪಕ್ಷದಿಂದ ಜಿಲ್ಲಾಡಳಿತಕ್ಕೆ ಆಗ್ರಹ

| Published : Mar 22 2024, 01:02 AM IST

ಹಾಸನ ಜಿಲ್ಲೆಯ ಕೆರಗಳಿಗೂ ಹೇಮಾವತಿ ನೀರು ಬಿಡಿ: ಜೆಡಿಎಸ್ ಪಕ್ಷದಿಂದ ಜಿಲ್ಲಾಡಳಿತಕ್ಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಹೇಮಾವತಿ ಜಲಾಶಯದಿಂದ ಎಡದಂಡೆ ನಾಲೆ ಮೂಲಕ ತುಮಕೂರಿಗೆ ನೀರು ಹರಿಸುತ್ತಿದ್ದು, ತುಮಕೂರಿಗೆ ನೀರು ಹರಿಸುವಂತೆ ಹಾಸನ ಜಿಲ್ಲೆಯ ಕೆರೆಗಳಿಗೂ ನೀರು ಬಿಡಬೇಕು ಎಂದು ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಗುರುವಾರ ಅಪರ ಜಿಲ್ಲಾಧಿಕಾರಿ ಶಾಂತಲಾ ಅವರಿಗೆ ಮನವಿ ಸಲ್ಲಿಸಿದರು.

ಅಪರ ಜಿಲ್ಲಾಧಿಕಾರಿ ಶಾಂತಲಾಗೆ ಮನವಿ । ಬೇಡಿಕೆ ಈಡೇರದಿದ್ದರೆ ಹೋರಾಟ ಎಚ್ಚರಿಕೆಕನ್ನಡಪ್ರಭ ವಾರ್ತೆ ಹಾಸನ

ಹೇಮಾವತಿ ಜಲಾಶಯದಿಂದ ಎಡದಂಡೆ ನಾಲೆ ಮೂಲಕ ತುಮಕೂರಿಗೆ ನೀರು ಹರಿಸುತ್ತಿದ್ದು, ತುಮಕೂರಿಗೆ ನೀರು ಹರಿಸುವಂತೆ ಹಾಸನ ಜಿಲ್ಲೆಯ ಕೆರೆಗಳಿಗೂ ನೀರು ಬಿಡಬೇಕು ಎಂದು ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಗುರುವಾರ ಅಪರ ಜಿಲ್ಲಾಧಿಕಾರಿ ಶಾಂತಲಾ ಅವರಿಗೆ ಮನವಿ ಸಲ್ಲಿಸಿದರು.

ಮಾಜಿ ಶಾಸಕ ಕೆ.ಎನ್.ಲಿಂಗೇಶ್ ಮತ್ತು ಎಚ್‌ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೊನ್ನವಳ್ಳಿ ಸತೀಶ್ ಮಾಧ್ಯಮದೊಂದಿಗೆ ಮಾತನಾಡಿ, ಜಾತ್ಯತೀತ ಜನತಾ ದಳ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ನೀರಿನ ಸಮಸ್ಯೆ ಬಗ್ಗೆ ಅರಿವು ಮೂಡಿಸುವ ಮನವಿಯನ್ನು ಕೊಡಲಾಗಿದೆ. ಪ್ರಸ್ತುತ ಬರಗಾಲವಿದ್ದು ಇಲ್ಲಿ ನೀರಿಲ್ಲ. ದನ ಕರುಗಳಿಗೆ ಕುಡಿಯಲು ನೀರಿಲ್ಲದೇ ಬರದ ಪರಿಸ್ಥಿತಿಯಲ್ಲಿ ಹಾಸನ ಜಿಲ್ಲೆ ಹಾಗೂ ಹಳ್ಳಿಗಳಲ್ಲಿ ಕುಡಿಯುವ ನೀರು ಬಹಳಷ್ಟು ಸಮಸ್ಯೆ ಎದುರಾಗಿದೆ. ಕಳೆದ ವರ್ಷ ಮತ್ತು ಈ ವರ್ಷ ಮಳೆಯ ಅಭಾವದಿಂದ ಹಾಸನ ಜಿಲ್ಲೆಯಲ್ಲೂ ಬರ ಪರಿಸ್ಥಿತಿ ತಲೆದೋರಿದ್ದು, ಈಗಾಗಲೇ ರಾಜ್ಯ ಸರ್ಕಾರ ಜಿಲ್ಲೆಯ ಎಂಟೂ ತಾಲೂಕುಗಳನ್ನೂ ಬರಪೀಡಿತ ಎಂದು ಘೋಷಣೆ ಮಾಡಿದೆ. ಹೇಮಾವತಿ ಜಲಾಶಯದಲ್ಲಿ ಪ್ರಸ್ತುತ ನೀರು ಸಂಗ್ರಹ ಮಟ್ಟ ಕಳೆದ ವರ್ಷಕ್ಕೆ ಹೋಲಿಸಿದರೆ ತುಂಬಾ ಕಡಿಮೆ ಇದೆ. ಕಳೆದ ವರ್ಷ ಇದೇ ದಿನ ೨೦.೬೩೫ ಟಿಎಂಸಿ ನೀರಿತ್ತು. ಈ ವರ್ಷ ೧೨.೬೫೨ ಟಿಎಂಸಿ ನೀರಿದೆ. ಇದರಲ್ಲಿ ಬಳಕೆ ಮಾಡಬಹುದಾದ ನೀರು ಕೇವಲ ೮.೨೮೦ ಟಿಎಂಸಿ ಮಾತ್ರ. ನೀರಿನ ಪ್ರಮಾಣ ಕಡಿಮೆ ಇದ್ದರೂ ಕೂಡ ಕಳೆದ ಹತ್ತು ದಿನಗಳಿಂದಲೂ ಎಡದಂಡೆ ಮೂಲಕ ಹೇಮಾವತಿ ಜಲಾಶಯದಿಂದ ಏಕಾಏಕಿ ನೀರು ಹರಿಸಲಾಗುತ್ತಿದೆ. ಇದು ನಮಗೆ ಆತಂಕ ತರಿಸಿದೆ ಎಂದು ಹೇಳಿದರು.

ಪ್ರಸ್ತುತ ಜಿಲ್ಲೆಯಲ್ಲೂ ತೀವ್ರ ಬರಗಾಲ ಪರಿಸ್ಥಿತಿ ಇದೆ. ಅಂತರ್ಜಲ ಕೊರತೆಯಿಂದಾಗಿ ಅನೇಕ ಕಡೆಗಳಲ್ಲಿ ಕುಡಿಯವ ನೀರಿನ ಸಮಸ್ಯೆ ತಲೆದೋರಿದೆ. ಮಳೆ ಕೊರತೆ ಇದ್ದರೂ ಹೇಮಾವತಿ ಜಲಾಶಯದಿಂದ ನೀರು ಹರಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಹಾಸನ ನಗರ ಸೇರಿದಂತೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಹಾಲಿ ಹರಿಯುತ್ತಿರುವ ನೀರನ್ನು ಜಿಲ್ಲೆ ವ್ಯಾಪ್ತಿಯಲ್ಲಿ ಕೆರೆ-ಕಟ್ಟೆ ತುಂಬಲು ಅವಕಾಶ ಮಾಡಿಕೊಡಬೇಕು ಎಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇವೆ. ಹೇಮಾವತಿ ಜಲಾಶಯದಲ್ಲಿ ನೀರು ಸಂಗ್ರಹ ಪ್ರಮಾಣ ಕಡಿಮೆ ಇದ್ದ ಕಾರಣ ಕಳೆದ ಸಾಲಿನಲ್ಲಿ ಅಚ್ಚುಕಟ್ಟು ಭಾಗದಲ್ಲಿ ಯಾವುದೇ ನೀರಾವರಿ ಬೆಳೆಗೆ ನೀರು ನೀಡಲಿಲ್ಲ. ಇದರಿಂದ ಲಕ್ಷಾಂತರ ರೈತರು ಬೆಳೆ ಕಳೆದುಕೊಳ್ಳಬೇಕಾಯಿತು. ಈವರೆಗೂ ರೈತರ ಹಿತ ಕಾಯದ ಸರ್ಕಾರ, ಇದೀಗ ಕುಡಿಯುವ ನೀರಿಗೂ ಸಮಸ್ಯೆ ತಂದೊಡ್ಡಲು ಮುಂದಾಗಿದೆ ಎಂದು ದೂರಿದರು.

ಜೆಡಿಎಸ್ ಇಡೀ ಜಿಲ್ಲೆಯ ರೈತರ ಪರವಾಗಿ ಸರ್ಕಾರಕ್ಕೆ ಆಗ್ರಹಿಸುತ್ತದೆ. ತತ್ ಕ್ಷಣ ಬೇರೆ ಜಿಲ್ಲೆಗೆ ನೀರು ಹರಿಸುವುದನ್ನು ನಿಲ್ಲಿಸಬೇಕು. ಜಿಲ್ಲೆಗೂ ನೀರು ಕೊಡಿ ಎಂದು ಒತ್ತಾಯಿಸಿ ರಾಜ್ಯ ಸರ್ಕಾರಕ್ಕೆ ಜಿಲ್ಲಾಡಳಿತ ಮೂಲಕ ಮನವಿ ಸಲ್ಲಿಸಲಾಗಿದೆ. ಬೇಡಿಕೆಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಜಿಲ್ಲಾ ಮಾಧ್ಯಮ ವಕ್ತಾರ ಹೊಂಗೆರೆ ರಘು, ಜೆಡಿಎಸ್ ಪಕ್ಷದ ಮುಖಂಡರಾದ ಕಮಲ್ ಕುಮಾರ್, ಲಕ್ಷ್ಮಣ್, ಸಯ್ಯದ್ ಅಕ್ಬರ್, ಸಯ್ಯದ್ ಅನ್ಸರ್, ಅಕ್ಮಲ್, ನಿರ್ಮಲಾ ಇದ್ದರು.ಹಾಸನ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲು ಬಂದಿದ್ದ ಜೆಡಿಎಸ್‌ ಕಾರ್ಯಕರ್ತರು.