ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ತಾಕತ್ತಿದ್ದರೆ ನನ್ನ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡಬೇಕು ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಇಲಾಖೆ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ ಅವರಿಗೆ ಸವಾಲು ಹಾಕಿದರು.ನಗರದಲ್ಲಿ ಭಾನುವಾರ ಇಎಸ್‌ಐ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಬೈರತಿ ಸುರೇಶ್ ಬುಡಾದ ನೂರಾರು ದಾಖಲಾತಿಯನ್ನು ತಂದು ಸುಟ್ಟು ಹಾಕಿದ ಕುರಿತು ನಾನು ಧ್ವನಿ ಎತ್ತಿದೆ. ಈ ಕುರಿತು ಅವರು ನನ್ನ ಮೇಲೆ ಬೇರೆ ಬೇರೆ ಆರೋಪ ಮಾಡುತ್ತಿದ್ದಾರೆ. ಹಲವಾರು ಸರ್ಕಾರದಲ್ಲಿ ಸಚಿವರು ಭ್ರಷ್ಟಾಚಾರದ ತನಿಖೆ ಎದುರಿಸಿದ್ದಾರೆ ಎಂದು ಆರೋಪಿಸಿದರು.
ಶೋಭಾ ಕರಂದ್ಲಾಜೆ ಯಾವತ್ತಿಗೂ ಭ್ರಷ್ಟಾಚಾರ ಮಾಡಿಲ್ಲ, ಮಾಡೋದಿಲ್ಲ. ಬಿಜೆಪಿಯಲ್ಲಿ ಕೊಟ್ಟ ಜವಾಬ್ದಾರಿಯನ್ನು ಜವಾಬ್ದಾರಿಯಿಂದ ಮಾಡುವವಳು ನಾನು. ಪೊನ್ನಣ್ಣನಿಗೂ ವಿದ್ಯುತ್ ಇಲಾಖೆಗೂ ಏನು ಸಂಬಂಧ? ಏನು ಮಾಡಲು ಹೊರಟಿದ್ದೀರಿ? ನಕಲಿ ದಾಖಲೆ ಸೃಷ್ಟಿಸಲು ಪೊನ್ನಣ್ಣನಿಗೆ ಜವಾಬ್ದಾರಿ ನೀಡಿದ್ದಿರಾ? ಪೊನ್ನಣ್ಣ ಇರುವುದು ಮುಖ್ಯಮಂತ್ರಿಯ ಕಾನೂನು ಸಲಹೆಗಾರರಾಗಿ. ಅವರಿಗೆ ನೀವು ವಿದ್ಯುತ್ ಇಲಾಖೆಯ ಜವಾಬ್ದಾರಿ ನೋಡಿ ಎಂದರೆ ಅದರಲ್ಲಿಯೂ ಭ್ರಷ್ಟಾಚಾರ ಮಾಡಲು ಹೋರಟ್ಟಿದ್ದಿರಿ ಎನ್ನುವ ಸಂಶಯ ಕಾಡುತ್ತಿದೆ. ನಿಮ್ಮಲ್ಲಿ ಯಾವ ದಾಖಲಾತಿ ಇದೆ ತಕ್ಷಣ ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದರು.ಬೈರತಿ ಸುರೇಶ್ ಮುಡಾ ದಾಖಲೆ ಸುಟ್ಟು ಹಾಕಿದ್ದು ಸತ್ಯ. ಅದಕ್ಕಾಗಿ ಈಗ ಇಡಿ, ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಹಲವಾರು ಸಂಘ ಸಂಸ್ಥೆಗಳು ಸರ್ಕಾರದ ಮೇಲೆ ಕಣ್ಣಿಟ್ಟಿದ್ದಾರೆ. ನಿಮಗೆ ತಾಕತ್ತು ಇದ್ದರೆ ನನ್ನ ಭ್ರಷ್ಟಾಚಾರ ಬಹಿರಂಗ ಮಾಡಬೇಕು ಎಂದು ಸವಾಲೆಸೆದರು.
ಕರ್ನಾಟಕದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎನ್ನುವ ವಿಶ್ವಾಸ ಇದೆ ಹಾಗೂ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವೆಯಲ್ಲಿ ಶಿವಸೇನೆ, ಬಿಜೆಪಿಯ ಎನ್‌ಡಿಎ ಗೆಲವು ಸಾಧಿಸಲಿದೆ ಎಂದು ಹೇಳಿದರು.ಬೆಂಗಳೂರಿನ ನಂತರ ಅತ್ಯಂತ ಹೆಚ್ಚು ಕಾರ್ಮಿಕರ ಕಾಡ್೯ ಹೊಂದಿರುವುದು ಬೆಳಗಾವಿ ನಗರ. ಬಹಳ ದೊಡ್ಡ ಕೈಗಾರಿಕಾ ಕಂಪನಿಗಳು ಇವೆ. ಇಲ್ಲಿನ ಕೈಗಾರಿಕೆಯ ಕಂಪನಿಗಳು ಪುಣೆ ಹಾಗೂ ಮಹಾರಾಷ್ಟ್ರಕ್ಕೆ ವಸ್ತುಗಳನ್ನು ಕಳುಹಿಸಿಕೊಡುತ್ತಾರೆ. ಸುಮಾರು ಮೂರುವರೆ ಲಕ್ಷ ಕಾರ್ಮಿಕರು ಕಾರ್ಡ್ ಹೊಂದಿದ್ದಾರೆ. ಅವರ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಎಂದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಮತ್ತಿತರರು ಉಪಸ್ಥಿತರಿದ್ದರು.