ಸಾರಾಂಶ
ನರಗುಂದ: ನರಗುಂದ ವಿಧಾನಸಭೆ ಮತಕ್ಷೇತ್ರದ ರೈಲ್ವೆ ಮೇಲ್ಸೇತುವೆ ಮತ್ತು ಕೆಳ ಸೇತುವೆ ಕಾಮಗಾರಿಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುದಾನ ಮಂಜೂರಾಗಿದೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಲೋಕೋಪಯೋಗಿ ಸಚಿವನಾಗಿದ್ದಾಗ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಕ್ಷೇತ್ರದ ಮಲ್ಲಾಪುರ ಗ್ರಾಮದ ಹತ್ತಿರ ರೈಲ್ವೆ ಮೇಲ್ಸೇತುವೆಗೆ ₹ 70 ಕೋಟಿ, ಹೊಳೆಆಲೂರ-ಸೋಮನಕಟ್ಟಿ- ಮೇಲ್ಮಠ-ಅಸೂಟಿ ರೈಲ್ವೆ ಸೇತುವೆಗೆ ₹30 ಕೋಟಿ, ಗದಗ ಶಹರ ವ್ಯಾಪ್ತಿಯಲ್ಲಿ ರೈಲ್ವೆ ಸೇತುವೆ ನಿರ್ಮಾಣಕ್ಕೆ ₹45 ಕೋಟಿ, ತಿಮ್ಮಾಪುರ-ಹರ್ಲಾಪುರ ರೈಲ್ವೆ ಸೇತುವೆ ನಿರ್ಮಾಣಕ್ಕೆ ₹30 ಕೋಟಿ ಅನುದಾನವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿಸಿಕೊಂಡು ಬಂದಿದ್ದೇನೆ ಎಂದರು.ಇಡೀ ದೇಶದಲ್ಲಿ ರೈಲ್ವೆ ಸೇತುವೆಗಳಿಗೆ ಪೂರ್ಣ ಪ್ರಮಾಣದ ಅನುದಾನವನ್ನು ಕೇಂದ್ರ ಸರ್ಕಾರ ಯಾವ ರಾಜ್ಯಕ್ಕೆ ನೀಡಿಲ್ಲ. ಆದರೆ ನಾನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ನರಗುಂದದ ಜಗನ್ನಾಥರಾವ್ ಜೋಶಿ ಅವರ ಹೆಸರು ಹೇಳಿದ್ದಕ್ಕೆ ಪೂರ್ಣ ಪ್ರಮಾಣದ ಅನುದಾನ ನೀಡಿದ್ದಾರೆ. ಮೇಲಾಗಿ ಮಾ. 14ರಂದು ಕೇಂದ್ರ ಸರ್ಕಾರ ಈ ನಾಲ್ಕು ರೈಲ್ವೆ ಸೇತುವೆ ನಿರ್ಮಾಣಕ್ಕೆ ₹205 ಕೋಟಿ ಅನುದಾನವನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ಬಿಡುಗಡೆ ಮಾಡಿದೆ ಎಂದರು.
ಈ ಕ್ಷೇತ್ರದ ಬೇಕು ಬೇಡಿಕೆಗಳ ಬಗ್ಗೆ ನಾನು ಈ ಕ್ಷೇತ್ರ ಶಾಸಕನಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆಯಬೇಕು. ಆದರೆ ಮಾಜಿ ಶಾಸಕ ಬಿ.ಆರ್. ಯಾವಗಲ್ಲ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆಯುವುದು ನೋಡಿದರೆ ಅವರಿಗೆ ಸೋಲಿನ ಹತಾಶೆ ಕಾಡುತ್ತಿದೆ ಎಂದರು.ರಾಜ್ಯಸಭಾ ಸದಸ್ಯ ನಾರಾಯಣಸ್ವಾಮಿ ಬಾಂಡಗೆ, ತೆರದಾಳ ಶಾಸಕ ಸಿದ್ದು ಸವದಿ, ಬಾಗಲಕೋಟೆ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಲಿಂಗರಾಜ ಪಾಟೀಲ, ಅಜ್ಜನಗೌಡ ಪಾಟೀಲ, ನಿಂಗಪ್ಪ ಮಣ್ಣೂರ, ಮುತ್ತಣ್ಣ ಜಂಗಣ್ಣವರ, ಪುರಸಭೆ ಸದಸ್ಯ ಪ್ರಕಾಶ ಹಾದಿಮನಿ, ಅಜ್ಜಪ್ಪ ಹುಡೇದ, ಬಿ.ಬಿ. ಐನಾಪುರ, ಪ್ರಕಾಶ ಪಟ್ಟಣಶೆಟ್ಟಿ, ಚಂದ್ರ ದಂಡಿನ ಮುಂತಾದವರು ಉಪಸ್ಥಿತರಿದ್ದರು.