ಕನ್ನಡಪ್ರಭ ವಾರ್ತೆ ಮಡಿಕೇರಿ

ಲೇಖಕ ಅಮ್ಮತ್ತಿಯ ಮೂಕೋಂಡ ನಿತಿನ್ ಕುಶಾಲಪ್ಪ ಅವರು ರಚಿಸಿರುವ ದಕ್ಷಿಣ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಜಾನಪದ ಕಥೆಗಳನ್ನು ಆಧರಿಸಿದ ನೂತನ ಇಂಗ್ಲೀಷ್ ಕೃತಿ ಫೋಕ್‌ಟೇಲ್ಸ್‌, ಮಿಥ್ಸ್ ಆ್ಯಂಡ್‌ ಲೆಜೆಂಡ್ಸ್‌ ಫ್ರಂ ದ ಡೆಕ್ಕನ್‌ ಬುಧವಾರ ಬಿಡುಗಡೆಗೊಂಡಿತು.

ಮಡಿಕೇರಿಯಲ್ಲಿ ಮೈಸೂರು- ಕೊಡಗು ಕ್ಷೇತ್ರದ ಸಂಸದರ ಕಚೇರಿಯಲ್ಲಿ ಸಂಸದ ಯದುವೀರ್ ಒಡೆಯರ್ ಅವರು ಪುಸ್ತಕ ಬಿಡುಗಡೆಗೊಳಿಸಿ ಮತ್ತಷ್ಟು ಪುಸ್ತಕಗಳು ಸಾಹಿತ್ಯ ಲೋಕಕ್ಕೆ ದೊರೆಯಲಿ ಎಂದು ನಿತಿನ್ ಕುಶಾಲಪ್ಪ ಅವರಿಗೆ ಶುಭ ಹಾರೈಸಿದರು. ನಿತಿನ್ ಕುಶಾಲಪ್ಪ ಅವರು ರಚಿಸಿರುವ 10 ನೇ ಇಂಗ್ಲೀಷ್ ಕೃತಿಯಾಗಿದೆ. ಈ ಕೃತಿ ದಕ್ಷಿಣ ಭಾರತದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಪರಿಚಯಿಸುವ ಅಪರೂಪದ ಪ್ರಯಾಣವಾಗಿದ್ದು, ದಕ್ಷಿಣ ಭಾರತದ ಐದು ರಾಜ್ಯಗಳಾದ ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ, ಕೇರಳ ಮತ್ತು ತಮಿಳುನಾಡು ಪ್ರದೇಶಗಳ 11 ಜನಪದ ಕಥೆಗಳ ಸಂಗ್ರಹವಿದೆ. ವಿವಿಧ ಪ್ರದೇಶಗಳಲ್ಲಿ ಅಡಗಿರುವ ಮರೆತು ಹೋದ ಮೌಖಿಕ ಸಂಪ್ರದಾಯಗಳು, ಪುರಾತನ ಪುರಾಣಗಳು ಮತ್ತು ಐತಿಹಾಸಿಕ ಸಾಕ್ಷಿಗಳನ್ನು ಅತ್ಯಂತ ಸುಂದರವಾಗಿ ಹೆಣೆಯಲಾಗಿದೆ. ಸ್ಥಳೀಯ ರಾಜರ ಶೌರ್ಯಗಾಥೆಗಳಿಂದ ಹಿಡಿದು, ಪವಿತ್ರ ವನಗಳ ರಹಸ್ಯಗಳು ಮತ್ತು ಜಾನಪದದ ರೋಚಕ ಕಥೆಗಳವರೆಗೆ ಲೇಖನವನ್ನು ವಿಸ್ತರಿಸಲಾಗಿದೆ. ಐತಿಹಾಸಿಕ ಸತ್ಯ ಮತ್ತು ಜನಪದ ನಂಬಿಕೆಗಳ ನಡುವಿನ ಕೊಂಡಿಯಾಗಿ ಈ ಕೃತಿ ರಚನೆಗೊಂಡಿದೆ. ಶತಮಾನಗಳಿಂದ ದಕ್ಷಿಣ ಭಾರತದಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ವರೂಪವನ್ನು ರೂಪಿಸಿದ ಕಥೆಗಳನ್ನು ದಾಖಲಿಸುವ ಮೂಲಕ ಪ್ರಾದೇಶಿಕ ಅಸ್ಮಿತೆಯನ್ನು ಎತ್ತಿ ಹಿಡಿಯುವಲ್ಲಿ ಈ ಪುಸ್ತಕ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಲೇಖಕ ನಿತಿನ್ ಕುಶಾಲಪ್ಪ ತಿಳಿಸಿದರು.ನಿತಿನ್ ಕುಶಾಲಪ್ಪ ಅವರ ತಾಯಿ ಮೂಕೋಂಡ ಪುಷ್ಪ ಪೂಣಚ್ಚ ಅವರು ಕೂಡ ಕನ್ನಡ ಮತ್ತು ಕೊಡವ ಭಾಷೆಯಲ್ಲಿ ಕೃತಿಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರದ ಗಮನ ಸೆಳೆದಿದ್ದಾರೆ.

ಪ್ರತಿಷ್ಠಿತ ರೂಪಾ ಬುಕ್ಸ್ ಪ್ರಕಾಶನ ಸಂಸ್ಥೆಯು ಹೊರ ತಂದಿರುವ ಕೃತಿ ಬಿಡುಗಡೆ ಸಂದರ್ಭ ಕೊಡಗು ಜಿಲ್ಲಾ ಕಾಫಿ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ನಗರಸಭಾ ಸದಸ್ಯ ಉಮೇಶ್ ಸುಬ್ರಮಣಿ, ದಿಶಾ ಸಮಿತಿ ಸದಸ್ಯ ಚೆಪ್ಪುಡಿರ ರಾಕೇಶ್ ದೇವಯ್ಯ ಮತ್ತಿತರರು ಉಪಸ್ಥಿತರಿದ್ದರು.