ಮಂಚನ ಬೆಲೆ ಜಲಾಶಯಕ್ಕೆ ಹೆಚ್ಚುವರಿ ನೀರು ಬಿಡುಗಡೆ

| Published : Oct 22 2024, 12:34 AM IST

ಸಾರಾಂಶ

ಎರಡು ವರ್ಷಗಳ ಹಿಂದೆ ಮಂಚನಬೆಲೆ ಜಲಾಶಯದ ಸಮೀಪವೇ ನಿರ್ಮಾಣವಾಗಿದ್ದ ಮುಖ್ಯ ಸೇತುವೆ ಹೆಚ್ಚುವರಿ ನೀರು ಬಂದ ಪರಿಣಾಮ ಕೊಚ್ಚಿ ಹೋಗಿತ್ತು. ಎರಡೂವರೆ ವರ್ಷಗಳಿಂದಲೂ ಕಾವೇರಿ ನೀರಾವರಿ ನಿಗಮದಿಂದ ಹೊಸ ಸೇತುವೆ ನಿರ್ಮಾಣ ಮಾಡಿರಲಿಲ್ಲ,

ಕನ್ನಡಪ್ರಭ ವಾರ್ತೆ ಮಾಗಡಿ

ತಾಲೂಕಿನಲ್ಲಿ ನಿರಂತರ ಮಳೆಯಿಂದಾಗಿ ಮಂಚನಬೆಲೆ ಜಲಾಶಯದಿಂದ ಹೆಚ್ಚುವರಿ ನೀರು ಬಿಟ್ಟ ಪರಿಣಾಮ ಮಂಚನಬೆಲೆ ಜಲಾಶಯದ ಸಮೀಪ ತಾತ್ಕಾಲಿಕವಾಗಿ ನಿರ್ಮಾಣವಾಗಿದ್ದ ಸೇತುವೆ ಮುಳುಗಡೆಯಾಗಿದ್ದು, ಈಗ ಹಲವು ಹಳ್ಳಿಗಳಿಗೆ ರಸ್ತೆ ಸಂಪರ್ಕ ಕಡಿತವಾಗಿರುವುದರಿಂದ ಸಾರ್ವಜನಿಕರಿಗೆ, ವಾಹನ ಸವಾರರಿಗೆ ತೊಂದರೆಯಾಗಿದೆ.

ಅರ್ಕಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಮಂಚನಬೆಲೆ ಜಲಾಶಯಕ್ಕೆ ಸೋಮವಾರ ಹೆಚ್ಚುವರಿ ನೀರು ಬಂದ ಹಿನ್ನೆಲೆಯಲ್ಲಿ ಜಲಾಶಯದಿಂದ ಎರಡೂವರೆ ಸಾವಿರ ಕ್ಯುಸೆಕ್ ನೀರನ್ನು ಅರ್ಕಾವತಿ ಕಾಲುವೆಗೆ ಬಿಟ್ಟ ಪರಿಣಾಮ ತಾತ್ಕಾಲಿಕವಾಗಿ ನಿರ್ಮಾಣಗೊಂಡಿದ್ದ ಸೇತುವೆ ಮುಳುಗಡೆಯಾಗಿದೆ. ಹೆಚ್ಚುವರಿ ನೀರು ಬರುತ್ತದೆ ಎಂಬುದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೂ ತಿಳಿದಿರಲಿಲ್ಲ. ರಾತ್ರಿ ಸುರಿದ ಭಾರೀ ಮಳೆಯಿಂದ ಕೆರೆ- ಕಟ್ಟೆಗಳು ತುಂಬಿ ಹರಿದ ಪರಿಣಾಮ ಹೆಚ್ಚುವರಿ ನೀರು ಮಂಚನಬೆಲೆ ಜಲಾಶಯಕ್ಕೆ ಬಂದಿದ್ದು, ಏಕಾಏಕಿ ಜಲಾಶಯ ಉಳಿಸುವ ನಿಟ್ಟಿನಲ್ಲಿ ನೀರು ಬಿಟ್ಟಿರುವುದರಿಂದ ಈಗ ಸಮಸ್ಯೆ ಹೆಚ್ಚಾಗಿದೆ.

ಮುಖ್ಯ ಸೇತುವೆ ಕೊಚ್ಚಿ ಹೋಗಿ 2 ವರ್ಷ:

ಎರಡು ವರ್ಷಗಳ ಹಿಂದೆ ಮಂಚನಬೆಲೆ ಜಲಾಶಯದ ಸಮೀಪವೇ ನಿರ್ಮಾಣವಾಗಿದ್ದ ಮುಖ್ಯ ಸೇತುವೆ ಹೆಚ್ಚುವರಿ ನೀರು ಬಂದ ಪರಿಣಾಮ ಕೊಚ್ಚಿ ಹೋಗಿತ್ತು. ಎರಡೂವರೆ ವರ್ಷಗಳಿಂದಲೂ ಕಾವೇರಿ ನೀರಾವರಿ ನಿಗಮದಿಂದ ಹೊಸ ಸೇತುವೆ ನಿರ್ಮಾಣ ಮಾಡಿರಲಿಲ್ಲ, ತಾತ್ಕಾಲಿಕವಾಗಿ ಹಳೆಯ ಸೇತುವೆಯ 200 ಮೀಟರ್ ಮುಂದೆ 30 ಲಕ್ಷ ವೆಚ್ಚದಲ್ಲಿ ಮಣ್ಣಿನ ಸೇತುವೆ ನಿರ್ಮಾಣವಾಗಿತ್ತು. ಈಗ ಹೆಚ್ಚುವರಿ ನೀರು ಜಲಾಶಯಕ್ಕೆ ಬಂದ ಪರಿಣಾಮ ಹಳೆ ಸೇತುವೆ ಮತ್ತು ತಾತ್ಕಾಲಿಕ ಸೇತುವೆ ಕೂಡ ಮುಳುಗಡೆಯಾಗಿ ಮಂಚನಬೆಲೆ ಜಲಾಶಯ ಸುತ್ತಮುತ್ತಲೂ ಈಗ ರಸ್ತೆ ಸಂಪರ್ಕವೇ ಕಡಿತವಾಗಿದೆ. ಇದರಿಂದ ಸಾಕಷ್ಟು ತೊಂದರೆ ಆಗುತ್ತಿದ್ದು, ಕಾವೇರಿ ನೀರಾವರಿ ನಿಗಮದ ನಿರ್ಲಕ್ಷ್ಯವೇ ಇಂತಹ ದೊಡ್ಡ ಅನಾಹುತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದು ಕೂಡಲೇ ಮಳೆ ನಿಂತ ಮೇಲೆ ಹೊಸ ಸೇತುವೆ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಬೇಕೆಂದು ಸ್ಥಳೀಯರು ಕಾವೇರಿ ನೀರಾವರಿ ನಿಗಮಕ್ಕೆ ಒತ್ತಾಯಿಸಿದ್ದಾರೆ.