ಸಾರಾಂಶ
ಕಾವೇರಿ ನದಿಗೆ 1,72,161 ಕ್ಯುಸೆಕ್ ನೀರು ಬಿಟ್ಟಿದ್ದರಿಂದ ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಬಹುತೇಕ ಮುಳುಗಡೆಗೊಂಡು ಸಮೀಪದಲ್ಲಿನ ತಡೆಗೋಡೆ ಹಾಗೂ ವೆಲ್ಲೆಸ್ಲಿ ಸೇತುವೆ- ಶ್ರೀರಂಗಪಟ್ಟಣ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಕಿತ್ತುಹೋಗಿದೆ. ಸೇತುವೆ ಸಮೀಪದಲ್ಲಿನ ತಡೆಗೋಡೆ ಬಹುತೇಕ ಕುಸಿದು ಬಿದ್ದಿದೆ. ಶ್ರೀರಂಗಪಟ್ಟಣ-ವೆಲ್ಲೆಸ್ಲಿ ಸೇತುವೆ ಮಾರ್ಗವಾಗಿ ಕಿರಂಗೂರು ಸಂಪರ್ಕ ಕಲ್ಪಿಸುವ ರಸ್ತೆ ಮೇಲೆ ನದಿ ನೀರು ಹರಿದು ಹೋಗಿದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕೆಆರ್‌ಎಸ್ ಅಣೆಕಟ್ಟೆಯಿಂದ ಕಾವೇರಿ ನದಿಗೆ 1.70 ಲಕ್ಷ ಕ್ಯುಸೆಕ್ ನೀರು ಬಿಟ್ಟ ಹಿನ್ನೆಲೆಯಲ್ಲಿ ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಬಹುತೇಕ ಮುಳುಗಡೆಗೊಂಡು ಸೇತುವೆ ಬಳಿಯ ತಡೆಗೋಡೆ ಹಾಗೂ ಸಂಪರ್ಕ ರಸ್ತೆಗೆ ಸಂಪೂರ್ಣ ಹಾನಿಯಾಗಿದೆ.ಬುಧವಾರ ಸಂಜೆಯಿಂದ ತಡರಾತ್ರಿ ವರೆಗೂ ಕಾವೇರಿ ನದಿಗೆ 1,72,161 ಕ್ಯುಸೆಕ್ ನೀರು ಬಿಟ್ಟಿದ್ದರಿಂದ ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಬಹುತೇಕ ಮುಳುಗಡೆಗೊಂಡು ಸಮೀಪದಲ್ಲಿನ ತಡೆಗೋಡೆ ಹಾಗೂ ವೆಲ್ಲೆಸ್ಲಿ ಸೇತುವೆ- ಶ್ರೀರಂಗಪಟ್ಟಣ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಕಿತ್ತುಹೋಗಿದೆ.
ಸೇತುವೆ ಸಮೀಪದಲ್ಲಿನ ತಡೆಗೋಡೆ ಬಹುತೇಕ ಕುಸಿದು ಬಿದ್ದಿದೆ. ಶ್ರೀರಂಗಪಟ್ಟಣ-ವೆಲ್ಲೆಸ್ಲಿ ಸೇತುವೆ ಮಾರ್ಗವಾಗಿ ಕಿರಂಗೂರು ಸಂಪರ್ಕ ಕಲ್ಪಿಸುವ ರಸ್ತೆ ಮೇಲೆ ನದಿ ನೀರು ಹರಿದು ಹೋಗಿದೆ. ಇದರಿಂದಾಗಿ ಮೀಟರ್‌ಗಳಷ್ಟು ಉದ್ದದ ಡಾಂಬರ್ ರಸ್ತೆ ಕಿತ್ತು ಮುಂದಕ್ಕೆ ತಳ್ಳಿಹಾಕಿ ಮಂಡಿಯುದ್ದ ಗುಂಡಿಗಳಾಗಿ ಸಂಪರ್ಕ ರಸ್ತೆ ಬಾಹಶ ಕಡಿತಗೊಂಡಿದೆ.ಜೊತೆಗೆ ಇದೇ ಸ್ಥಳದಲ್ಲಿ ಸಂಘ-ಸಂಸ್ಥೆಗಳು ನೆಟ್ಟು, ಬೆಳೆಸುತ್ತಿದ್ದ ವಿವಿಧ ಜಾತಿಯ ಗಿಡಗಳು ಪ್ರವಾಹಕ್ಕೆ ಸಿಲುಕಿ ಬೇರು ಸಹಿತ ನೆಲಕ್ಕುರುಳಿವೆ. ಸಾರ್ವಜನಿಕರು ನದಿ ಪ್ರದೇಶಕ್ಕೆ ತೆರಳದಂತೆ ಕಬ್ಬಿಣದಿಂದ ನಿರ್ಮಿಸಿದ್ದ ಗ್ರಿಲ್ಸ್‌ಗಳು ಸಹ ಕಿತ್ತು ಹಾಕಿದೆ.
ಮಧ್ಯರಾತ್ರಿ ವರೆವಿಗೂ ನದಿಯಲ್ಲಿ ಧಾರಾಕಾರವಾಗಿ ನೀರು ಹರಿದು ಹೋಗುತ್ತಿದ್ದರಿಂದ ಕಾವೇರಿ ನದಿ ಪ್ರಾತ್ರಗಳ ತಗ್ಗು ಪ್ರದೇಶಗಳು ಮುಳುಗಡೆಗೊಂಡಿದ್ದವು. ಪಟ್ಟಣದ ಸಮೀಪದ ಪಶ್ಚಿಮ ವಾಹಿನಿ ಬಳಿಯ ರೈಲ್ವೆ ಸೇತುವೆ ಕೆಳಗಿನ ಪಾಲಹಳ್ಳಿ-ಶ್ರೀರಂಗಪಟ್ಟಣ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿತ್ತು.ಪಟ್ಟಣದ ಪೊಲೀಸ್ ಕ್ವಾಟ್ರಸ್ ಬಳಿಯಲ್ಲಿನ ಬಿದ್ದುಕೋಟೆ ಗಣಪತಿ ದೇವಸ್ಥಾನ ಬುಧವಾರ ರಾತ್ರಿ ಪ್ರವಾಹದಿಂದ ಸಂಪೂರ್ಣವಾಗಿ ಜಾಲವೃತಗೊಂಡು, ದೇವಸ್ಥಾನ ಗೋಪುರದ ವರೆವಿಗೂ ನೀರಿನಿಂದ ಮುಳುಗಡೆಗೊಂಡಿತ್ತು.
ಗುರುವಾರ ಬೆಳಗ್ಗೆ ವೇಳೆಗೆ ನದಿಗೆ ಹರಿಬಿಟ್ಟದ ನೀರಿನ ಪ್ರಮಾಣವನ್ನು ಕಡಿಮೆಗೊಳಿಸಿದ್ದರಿಂದ ಪ್ರವಾಹ ಭೀತಿ ಸ್ವಲ್ಪ ಕಡಿಮೆಯಾಗಿ ತಥಾ ಸ್ಥಿತಿಗೆ ಮರುಕಳಿಸಿತು.ಜಿಲ್ಲಾಡಳಿತ ಭೇಟಿ:
ಕಾವೇರಿ ನದಿ ಪ್ರವಾಹದಿಂದ ಹಾನಿಗೊಳಗಾದ ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಬಳಿಯ ತಡೆಗೋಡೆ ಕುಸಿತಗೊಂಡ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ. ಕುಮಾರ್, ಜಿ.ಪಂ ಸಿಇಒ ಶೇಖ್ ತನ್ವೀರ್ ಆಸೀಫ್, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.