ಬದುಕು ಬಂಧನ, ಸಾವು ಬಿಡುಗಡೆ

| Published : May 27 2025, 12:42 AM IST

ಸಾರಾಂಶ

ಹುಟ್ಟು- ಸಾವು ಎಂಬುದಕ್ಕೆ ಕೊನೆಯಿಲ್ಲ. ಪುನರಪಿ ಜನನಂ, ಪುನರಪಿ ಮರಣಂ ಎಂದು ಹೇಳಲಾಗುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರುಬದುಕು ಬಂಧನ, ಸಾವು ಬಿಡುಗಡೆ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್‌ ವ್ಯಾಖ್ಯಾನಿಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅಭಿರುಚಿ ಬಳಗ ಹಾಗೂ ಆಸಕ್ತಿ ಪ್ರಕಾಶನ, ಎನ್‌.ವಿ. ರಮೇಶ್‌ ಕಲಾ ಬಳಗ, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ವತಿಯಿಂದ ವಿಜಯನಗರದ ಸಾಹಿತ್ಯ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಉಮಾಯಾನ- ಉಮಾ ರಮೇಶ್‌ ಅವರ ಜೀವನ- ಸಾಧನೆಯ ಬಗ್ಗೆ ಲೇಖನ ಹಾಗೂ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಸಾವು ಶಾಂತವಾಗುವ, ಅನಂತವಾಗುವ ಪ್ರಕ್ರಿಯೆ. ಅದ್ವೈತ ಸ್ಥಿತಿ. ಪ್ರಕೃತಿಯೊಂದಿಗೆ ಜೀವನಯಾನ ಎಂದರು.ಹುಟ್ಟು- ಸಾವು ಎಂಬುದಕ್ಕೆ ಕೊನೆಯಿಲ್ಲ. ಪುನರಪಿ ಜನನಂ, ಪುನರಪಿ ಮರಣಂ ಎಂದು ಹೇಳಲಾಗುತ್ತದೆ. ಸಾವಿಗೆ ದೈವಾಧೀನ, ನಿಧನ, ವೈಕುಂಠವಾಸಿ ಸೇರಿದಂತೆ ಹಲವಾರು ಪದಗಳನ್ನು ಬಳಸುತ್ತಾರೆ. ಆದರೆ ಕಾಲಕೈವಾದರು ಎಂಬುದು ಸಾವಿಗೆ ತಕ್ಕ ಪದ ಎಂದು ಅವರು ಹೇಳಿದರು.ಪತ್ನಿ ಹೇಮಾವತಿ ಅವರು ತೀರಿಕೊಂಡಾಗ ಕುವೆಂಪು ಅವರು ''ಮರಣ ಯಾರಿಗೂ ತಪ್ಪಿದ್ದಲ್ಲ. ಆದರೆ ಇಷ್ಟು ದಿನ ಜೊತೆಗಿದ್ದವರು ಅಗಲಿದ್ದು ಬೇಸರ ಮೂಡಿಸಿದೆ'' ಎಂದಿದ್ದರು. ಅದರಂತೆ ಆತ್ಮ ಅಮರ, ದೇಹ ನಶ್ವರ ಎಂದು ಸಿಪಿಕೆ ಹೇಳಿದರು.ಮೇಲುಕೋಟೆ ಶ್ರೀ ಇಳೈ ಆಳ್ವಾರ್‌ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್‌ ಅಧ್ಯಕ್ಷತೆ ವಹಿಸಿದ್ದರು. ಉಮಾಯಾನ ಕೃತಿಯನ್ನು ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ, ಕ್ಯಾಲೆಂಡರ್‌ ಅನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌, ಸಾಕ್ಷ್ಯಚಿತ್ರವನ್ನು ಬೆಂಗಳೂರು ಆಕಾಶವಾಣಿ ಹಿರಿಯ ಉದ್ಘೋಷಕಿ ಬಿ.ಕೆ. ಸುಮತಿ ಬಿಡುಗಡೆ ಮಾಡಿದರು. ಮೈಸೂರು ಆಕಾಶವಾಣಿ ನಿವೃತ್ತ ಸಹಾಯಕ ನಿರ್ದೇಶಕಿ ರಾಜಲಕ್ಷ್ಮೀ ಶ್ರೀಧರ್‌, ಅಭಿರುಚಿ ಬಳಗದ ಅಧ್ಯಕ್ಷ ಎನ್‌.ವಿ. ರಮೇಶ್‌ ಮಾತನಾಡಿದರು. ಉಮಾ ಅವರನ್ನು ಕುರಿತ ಹಾಡುಗಳನ್ನೂ ಕೂಡ ಬಿಡುಗಡೆ ಮಾಡಲಾಯಿತುಉಷಾ ಶೇಖರ್‌, ಗೀತಾ ಶ್ರೀಕಾಂತ್‌, ಆಶಾ ಕುಮಾರ್‌ ಪ್ರಾರ್ಥಿಸಿದರು. ಜಿಲ್ಲಾ ಕಸಾಪ ಕಾರ್ಯದರ್ಶಿ ಮ.ನ. ಲತಾ ಮೋಹನ್‌ ಪ್ರಾಸ್ತಾವಿಕ ಭಾಷಣ ಮಾಡಿ, ಕಾರ್ಯಕ್ರಮ ನಿರೂಪಿಸಿದರು.ನಂತರ ಉಮಾ ರಮೇಶ್‌ ಅವರನ್ನು ಕುರಿತು ಕುಟುಂಬದವರು, ಸಾಹಿತ್ಯ ದಾಸೋಹದವರು, ಅಭಿರುಚಿ ಬಳಗದವರು, ಚುಟುಕು ಕವಿಗಳು, ಸಾಹಿತ್ಯ ಬಂಧುಗಳು, ಗೆಳತಿಯರು, ಗಗನವಾಣಿ ಗೆಳೆಯರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಕವಿಗೋಷ್ಠಿ ಕೂಡ ನಡೆಯಿತು.