ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡವ ಮಕ್ಕಡ ಕೂಟದ 106ನೇ ಮತ್ತು ನಟ, ನಿರ್ದೇಶಕ, ನಿರ್ಮಾಪಕ, ಸಾಹಿತಿ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ರಚಿತ 11ನೇ ಪುಸ್ತಕ ‘ಗಮ್ಯ’ ಸೋಮವಾರ ಬಿಡುಗಡೆಗೊಂಡಿತು.ನಗರದ ಪತ್ರಿಕಾ ಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಮಂಡೇಪಂಡ ಸುನಿಲ್ ಸುಬ್ರಮಣಿ ಅವರು ಸಮಾಜದ ಸುಧಾರಣೆಯಲ್ಲಿ ಪುಸ್ತಕಗಳು ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಪುಸ್ತಕಗಳು ಸಾಮಾಜಿಕ ಕಾಳಜಿಯೊಂದಿಗೆ ಉತ್ತಮ ಸಂದೇಶವನ್ನು ನೀಡಬೇಕು, ಬಿಡುಗಡೆಗೊಳ್ಳುವ ಪುಸ್ತಕಗಳಿಗೆ ಹೆಚ್ಚಿನ ಪ್ರಚಾರ ನೀಡುವ ಮೂಲಕ ಓದುಗರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ಅರ್ಜಿ ಹಾಕಿ ಯಾವುದೇ ಜಾತಿಯಲ್ಲಿ ಹುಟ್ಟಲು ಸಾಧ್ಯವಿಲ್ಲ, ಹುಟ್ಟಿದ ಮೇಲೆ ಜಾತಿಯ ಬಗ್ಗೆ ಸ್ವಾಭಿಮಾನ, ಅಭಿಮಾನವಿರಬೇಕು. ಹುಟ್ಟಿದ ಮಣ್ಣಿನ ಮೇಲೆ ಪ್ರೀತಿ ಇರಬೇಕು. ಕೊಡವರಾಗಿ ಹುಟ್ಟಿರುವ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಅವರು ಕೊಡಗಿನ ನೆಲ, ಜಲ, ಸಂಸ್ಕೃತಿಯನ್ನು ಹೆಚ್ಚು ಪ್ರೀತಿಸುತ್ತಾರೆ. ಇವರ ಸಿನಿಮಾಗಳಲ್ಲಿ ಇದನ್ನು ಕಾಣಬಹುದಾಗಿದೆ. ಸಿನಿಮಾ ಕ್ಷೇತ್ರದೊಂದಿಗೆ ಸಾಹಿತ್ಯ ಕ್ಷೇತ್ರಕ್ಕೂ ಕೊಡುಗೆ ನೀಡುತ್ತಿರುವುದು ಶ್ಲಾಘನೀಯವೆಂದರು.ಹಿರಿಯ ಸಾಹಿತಿ ಬಾಚರಣಿಯಂಡ ಪಿ.ಅಪ್ಪಣ್ಣ ಮಾತನಾಡಿ ಸಾಹಿತ್ಯದ ಮೂಲಕ ಕನ್ನಡ ನಾಡು, ನುಡಿಯನ್ನು ಶ್ರೀಮಂತಗೊಳಿಸಬೇಕು. ಬರಹಗಾರರ ಸಂಖ್ಯೆ ಹೆಚ್ಚಾಗುತ್ತಿದೆ, ಆದರೆ ಓದುಗರ ಸಂಖ್ಯೆ ಕಡಿಮೆ ಇದೆ. ಓದುಗರನ್ನು ಹೆಚ್ಚಿಸಿಕೊಳ್ಳುವುದಕ್ಕೆ ಹೊಸ ಸ್ಕೀಂವೊಂದನ್ನು ಹಾಕಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜ್ ನ ಪ್ರಾಂಶುಪಾಲ ಪ್ರೊ.ಮೇಜರ್ ಬಿ.ರಾಘವ ಅವರು ಮಾತನಾಡಿ, ಅತಿಯಾದ ನಾಗರೀಕತೆ ಮತ್ತು ಆಧುನೀಕತೆಯ ನಡುವೆ ಮಾನವೀಯತೆಗೆ ಬೆಲೆ ಇಲ್ಲದಾಗಿದೆ. ಸಾಮಾಜಿಕ ಕಳಕಳಿಯ ಅಂಶಗಳಿಂದ ಸಾಮಾಜಿಕ ಪಿಡುಗುಗಳ ನಿರ್ಮೂಲನೆಯಾಗಬೇಕಾಗಿದೆ. ಸಾಹಿತಿಗಳು ಸಮಾಜದ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ, ಸಾಹಿತ್ಯ ಸೇವೆಯ ಮೂಲಕ ಜನರಿಗೆ ಭೌಗೋಳಿಕ ಜ್ಞಾನವನ್ನು ನೀಡುತ್ತಾರೆ ಎಂದು ತಿಳಿಸಿದರು.ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ನ ನಿವೃತ್ತ ಪಾಂಶುಪಾಲರಾದ ಕಲ್ಲುಮಾಡಂಡ ಸರಸ್ವತಿ ಸುಬ್ಬಯ್ಯ ಮಾತನಾಡಿದರು.
‘ಗಮ್ಯ’ಪುಸ್ತಕದ ರಚನೆಕಾರ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಮಾತನಾಡಿ ಸಾಹಿತ್ಯ ರಚನೆ ಜವಾಬ್ದಾರಿಯುತವಾಗಿರಬೇಕು, ಓದುಗರನ್ನು ಸೆಳೆಯುವ ಮತ್ತು ಸಮಾಜವನ್ನು ಪರಿವರ್ತಿಸುವ ಶಕ್ತಿ ಅದರಲ್ಲಿರಬೇಕು. ಸಿನಿಮಾ ಸಾಹಿತ್ಯ ಹಾಗೂ ಪುಸ್ತಕಗಳ ರಚನೆ ಅತ್ಯಂತ ಹಿಡಿತದಿಂದ ಕೂಡಿದ್ದರೆ ಜನಪ್ರಿಯತೆ ಪಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ಕೊಡವ ಮಕ್ಕಡ ಕೂಟದ ಸ್ಥಾಪಕಾಧ್ಯಕ್ಷ ಹಾಗೂ ಪ್ರಕಾಶಕ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಮಾತನಾಡಿ, ಕೊಡವ ಮಕ್ಕಡ ಕೂಟ ಪ್ರಕಟಿಸಿರುವ 105 ಪುಸ್ತಕಗಳಲ್ಲಿ ನಾಲ್ಕು ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ಚಿಗುರೆಲೆಗಳು ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ ಲಭಿಸಿದೆ. ನಾಲ್ಕು ಪುಸ್ತಕಗಳು ಕೊಡವ ಸಿನಿಮಾವಾಗಿದೆ. ಈಗಾಗಲೇ ಮಹತ್ವಾಕಾಂಕ್ಷೆಯ 100ನೇ ಪುಸ್ತಕವನ್ನು ಅದ್ದೂರಿಯಾಗಿ ಸಮರ್ಪಿಸಲಾಗಿದ್ದು, ಹೊಸ ಬರಹಗಾರರನ್ನು ಪ್ರೋತ್ಸಾಹಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದು ತಿಳಿಸಿದರು.